ಜುಲೈ ತಿಂಗಳಲ್ಲಿ 1,15,61,765 ಪಡಿತರ ಚೀಟಿಯ 4,08,46,548 ಫಲಾನುಭವಿಗಳಿಗೆ 670.45 ಕೋಟಿ ರೂ. ನೇರ ನಗದು ಜಮೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ನೇರ ನಗದು ಜಮೆ ಪ್ರಾರಂಭವಾದ ಜುಲೈ-2023 ರಿಂದ ಜುಲೈ-2024ರವರೆಗೆ 8,433.11 ಕೋಟಿ ರೂ. ಮೊತ್ತವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದರು.
ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಆಹಾರ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಕರ್ನಾಟಕ ಆಹಾರ ನಿಗಮದ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಸಚಿವರು ಮಾತನಾಡಿದರು.
“ಈವರೆಗೂ ಪ್ರತಿ ತಿಂಗಳು ಒಂದು ಕೆ.ಜಿ. ಅಕ್ಕಿಗೆ 34 ರೂ. ನಂತೆ 5 ಕೆ.ಜಿ. ಅಕ್ಕಿಗೆ ಪ್ರತಿ ಸದಸ್ಯರಿಗೆ 170 ರೂ. ಮೊತ್ತವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಈಗ ಚಾಲ್ತಿಯಲ್ಲಿರುವಂತೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ ನೇರ ಹಣ ಜಮೆಯನ್ನು ಮುಂದುವರಿಸಲಾಗುವುದು” ಎಂದು ಹೇಳಿದರು.
“ಭಾರತ ಸರ್ಕಾರ 2013ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಮೊಟ್ಟಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊದಲ ಅವಧಿ ಮತ್ತು ಎರಡನೇ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವ ಮೂಲಕ ಕರ್ನಾಟಕ ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕವಾಗಿಸಿದ್ದಾರೆ. ಇದು ನಮ್ಮ ಸರ್ಕಾರದ ಹೆಮ್ಮೆಯ ವಿಷಯವಾಗಿದೆ” ಎಂದು ತಿಳಿಸಿದರು.
ಅನ್ನ ಸುವಿಧಾ
“2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ” ಎಂದರು.
“ಬಹಳ ವರ್ಷಗಳಿಂದ ಇದ್ದ ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇಲಾಖೆಯ ಬಹುದಿನದ ಬೇಡಿಕೆ ಆಹಾರ ಇಲಾಖೆಯ ಕಚೇರಿಗಳ ಸಂಕೀರ್ಣ ಆಹಾರ ಸೌಧವನ್ನು 50.00 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಆಲಿ ಆಸ್ಕರ್ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ” ಎಂದು ಹೇಳಿದರು.
“ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ” ಎಂದು ತಿಳಿಸಿದರು.
ಕೇಂದ್ರದಿಂದ ಅಕ್ಕಿ ಖರೀದಿ
“ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪ್ರತಿ ಕೆ.ಜಿ.ಗೆ 28 ರೂ. ದರದಲ್ಲಿ ಅಕ್ಕಿ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರ OMSS(D) ಯೋಜನೆಯಡಿ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಡ್‌ಗಳಿಗೆ ಬೇಕಾಗುವ 20,000 ಮೆ.ಟ. ಅಕ್ಕಿಯನ್ನು 28 ರೂ. ದರದಲ್ಲಿ ಎಫ್‌ಸಿಐ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ” ಎಂದರು.