ಚರಂಡಿ ಮಣ್ಣು ಕುಸಿದು ಮೈಸೂರು ಮಹಾನಗರ ಪಾಲಿಕೆಯ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮೈಸೂರು ನಗರದ ಎಲ್ಐಸಿ ಕಚೇರಿ ಬಳಿ ಮೈಸೂರು ಮಹಾನಗರ ಪಾಲಿಕೆಯ ಗುತ್ತಿಗೆ ಕಾರ್ಮಿಕರು ಚರಂಡಿ ಕಾಮಗಾರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದಿದ್ದು, ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದಾರೆ. ಅದರಲ್ಲಿ ಒಬ್ಬರು ಮೃತರಾಗಿ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದ ಕೆ ಮನು(26) ಮೃತಪಟ್ಟವರು ಎಂದು ತಿಳಿದುಬಂದಿದೆ.
ಚರಂಡಿ ಕಾಮಗಾರಿ ನಡೆಯುವಾಗ ಯಾವುದೇ ಮುಂಜಾಗೃತೆ ಕೈಗೊಳ್ಳದೇ ಇರುವುದು ಈ ಅನಾಹುತಕ್ಕೆ ಕಾರಣವಾಗಿದೆ. ಮಹಾನಗರ ಪಾಲಿಕೆ ಹೊರಗುತ್ತಿಗೆ ಕಾರ್ಮಿಕರಾದ ಇವರು ಚರಂಡಿ ಕಾಮಗಾರಿ ವೇಳೆ ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಸಾವನಪ್ಪಿದ್ದಾರೆ.
ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಜನರು ಹಿಡಿಶಾಪ ಹಾಕಿದ್ದು, ಘಟನೆ ನಡೆದ ಸ್ಥಳಕ್ಕೆ ಪಾಲಿಕೆಯ ಯಾವೊಬ್ಬ ಅಧಿಕಾರಿ ಬಾರದೆ ಇರುವುದಕ್ಕೆ ಆಕ್ರೋಶಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಇ.ಡಿ ದುರ್ಬಳಕೆ ಖಂಡಿಸಿ ಕಾಂಗ್ರೆಸ್ ಪಂಜಿಡಿದು ಪ್ರತಿಭಟನೆ
ಮೃತನ ಕುಟುಂಬಸ್ಥರು ನಡೆದಿರುವ ಘಟನೆ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇರುವುದನ್ನು ಉಲ್ಲೇಖಿಸಿ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗುತ್ತಿಗೆದಾರ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆಂದು ತಿಳಿದುಬಂದಿದೆ.