ಸುತ್ತಲೂ ಗಿಡಗಂಟಿ, ಬಳ್ಳಿ, ಪೊದೆಗಳು ಬೆಳೆದು ನಿಂತಿವೆ. ಎತ್ತ ನೋಡಿದರೂ ಕಾಡಿನಂತೆ ಕಾಣುವ ವಾತಾವರಣ. ಸೋರುತ್ತಿರುವ ಮೇಲ್ಛಾವಣಿ, ಸ್ವಚ್ಛವಿಲ್ಲದ ಶೌಚಾಲಯ, ಅನೈರ್ಮಲ್ಯತೆಯಿಂದ ಕೂಡಿರುವ ಶಾಲಾವರಣ.
ಇದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಕ್ಷೇತ್ರವಾದ ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪೂಲವಾರಪಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44 ರಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುಸ್ಥಿತಿ.
ದಸರಾ ರಜೆ ಬಳಿಕ ಇದೀಗ ಮತ್ತೆ ಶಾಲಾ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಿರುವ ಶಾಲೆಯ ಆವರಣದಲ್ಲಿ ಸ್ವಚ್ಛ ಸುಂದರ ವಾತಾವರಣಕ್ಕಿಂತ ಅದ್ವಾನಗಳೇ ಹೆಚ್ಚು ಕಾಣುತ್ತಿವೆ. ತರಗತಿ ಕೊಠಡಿಗಳ ಸುತ್ತಲೂ ಗಿಡಗಂಟಿಗಳು, ಪೊದೆಗಳು ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಹೇಳೋರು ಕೇಳೂರು ಇಲ್ಲದಂತಾಗಿದೆ.

ನಿರ್ವಹಣೆಯಿಲ್ಲದ ಶೌಚಾಲಯಗಳು :
ಇನ್ನು ಕೆಲ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ಸ್ಥಿತಿಯಂತೂ ಶೋಚನೀಯವಾಗಿದ್ದು, ಬೀಳುವ ಹಂತಕ್ಕೆ ತಲುಪಿವೆ. ಮೋಲ್ಡಿಂಗ್ ಕಿತ್ತು ಬರುತ್ತಿದ್ದು, ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತಷ್ಟು ಆತಂಕ ಸೃಷ್ಟಿಸಿವೆ. ಶೌಚಾಲಯಗಳು ನಿರ್ವಹಣೆಯಿಲ್ಲದೆ ವಿದ್ಯಾರ್ಥಿಗಳು ಬಯಲು ಶೌಚವನ್ನು ಅವಲಂಬಿಸುವಂತಾಗಿದೆ.
ಶಾಲೆಯ ದುಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಸಿಪಿಎಂ ಮುಖಂಡ ಚನ್ನರಾಯಪ್ಪ, ತಾಲೂಕಿನಲ್ಲಿ ದಲಿತ, ಕಾರ್ಮಿಕ, ಬಡವರ ಮಕ್ಕಳು ಓದುತ್ತಿರುವ ಶಾಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನಿರ್ಲಕ್ಷಿಸಲಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಈ ಶಾಲೆಯ ದುಸ್ಥಿತಿ ಕೈಗನ್ನಡಿಯಾಗಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟವರು ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರಕಾರಗಳು ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುತ್ತಿವೆಯಾದರೂ, ಪ್ರಗತಿ ಮಾತ್ರ ಸಾಧಿಸಲಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ
ಒಟ್ಟಾರೆಯಾಗಿ, ಹತ್ತಲವು ಸಮಸ್ಯೆಗಳ ನಡುವೆಯೇ ಅರ್ಧವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ, ದಸರಾ ರಜೆಯನ್ನು ಮುಗಿಸಿರುವ ವಿದ್ಯಾರ್ಥಿಗಳು ಇದೀಗ ಮತ್ತೆ ಶಾಲೆಗಳತ್ತ ಮುಖಮಾಡುತ್ತಿದ್ದು, ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
- ವರದಿ : ರಾ.ನ.ಗೋಪಾಲ ರೆಡ್ಡಿ, ಪತ್ರಕರ್ತ, ಬಾಗೇಪಲ್ಲಿ.