ಎಲ್ಲ ಸಮುದಾಯಗಳ ಸ್ಥಿತಿಗಳನ್ನು ಅವಲೋಕನ ಮಾಡುವ ವರದಿಯನ್ನು ಕಾಂತರಾಜು ಆಯೋಗ ನೀಡಿದೆ. ನಾಡಿನಲ್ಲಿ 1700ಕ್ಕೂ ಹೆಚ್ಚು ಜಾತಿಗಳಿವೆ. ವಿಶೇಷವಾಗಿ ಹಿಂದುಳಿದ ವರ್ಗ 1 ಮತ್ತು 2ಎ ನಲ್ಲಿ ಇರುವಂತಹ ಸಮುದಾಯಗಳು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಾಣಲಿಕ್ಕೆ ಸಾಧ್ಯವಾಗಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸರಕಾರ ಈ ವರದಿಯನ್ನು ಈ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ ಎಂದು ತಗ್ಗಳ್ಳಿ ಸಂದೇಶ್ ಒತ್ತಾಯಿಸಿದರು.
ಅವರು ಅ.21ರ ಸೋಮವಾರ ಶ್ರೀರಂಗಪಟ್ಟಣ ನಡೆದ ಕಾಂತರಾಜ್ ಆಯೋಗ ಹಾಗೂ ಅನ್ನಪೂರ್ಣಮ್ಮ ವರದಿಯನ್ನು ಯಥಾವತ್ತು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀರಂಗಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲ್ಲಾಕು ಕಚೇರಿಯವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷರಾದ ಮರಳಗಾಲ ಮಂಜುನಾಥ್ ಮಾತನಾಡಿ, ಇವತ್ತು ಯಾವುದೇ ಸರ್ಕಾರ ಮಡಿವಾಳ ಸಮಾಜಕ್ಕೆ ಯಾವುದೇ ಅನುಕೂಲ ಮಾಡುತ್ತಿಲ್ಲ. ನಮ್ಮ ಯಾವುದೇ ಹೋರಾಟಕ್ಕೂ ಪ್ರತಿಫಲ ಸಿಗುತ್ತಿಲ್ಲ. ಪ್ರತಿ ತಾಲೂಕುಗಳಲ್ಲಿ ಮಡಿವಾಳ ಕಟ್ಟೆ ಮಾಡಿಕೊಡಲು ಇಟ್ಟ ಬೇಡಿಕೆಗಳು ಇನ್ನು ಈಡೇರಿಸಿಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಈ ಕೂಡಲೇ ಸರಕಾರ ಗಮನಹರಿಸಿ ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಿಯ ರಮೇಶ್ ಮಾತನಾಡಿ, ಮಡಿವಾಳ ಸಮಾಜ ಸ್ವಾವಲಂಬಿಯಾಗಿ ಬದುಕಲು ತುಂಬಾ ಕಷ್ಟ ಆಗುತ್ತಿದೆ. ಬಟ್ಟೆ ಒಗೆದು ಬದುಕು ಮಾಡಲು ನಮಗೆ ಇಂದು ಸಾಧ್ಯವಾಗುತ್ತಿಲ್ಲ. ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದೇವೆ. ಮಡಿವಾಳ ಸಮಾಜದ ಹಿತಕ್ಕಾಗಿ ಅನ್ನಪೂರ್ಣ ವರದಿ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಈ ವರದಿ ಜಾರಿಯಾದರೆ ಸಮುದಾಯಕ್ಕೆ ಬಹಳ ಅನುಕೂಲವಾಗುತ್ತದೆ ಎಂದರು.
ಮಡಿವಾಳರಿಗೆ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇದ್ದು, ಸರ್ಕಾರ ಕೂಡಲೇ ಕಾಂತರಾಜ್ ಮತ್ತು ಅನ್ನಪೂರ್ಣಮ್ಮ ವರದಿ ಜಾರಿಗೊಳಿಸಿ ಸಮುದಾಯದ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮರಳಗಾಲ ಮಂಜುನಾಥ್, ಮಹಿಳಾ ಅಧ್ಯಕ್ಷೆ ಪ್ರಿಯಾ ರಮೇಶ್, ಗೌರವ ಅಧ್ಯಕ್ಷ ಪಾಲಹಳ್ಳಿ ನರಸಿಂಹ, ತಾಲ್ಲೂಕು ಅಧ್ಯಕ್ಷ ಮಜ್ಜಿಗೆಪುರ ಶ್ರೀನಿವಾಸ್, ರಮೇಶ್, ವಿಶ್ವಾಶ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.
