ಬಿಜೆಪಿಯ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಲು ಕುಸ್ತಿಪಟುಗಳನ್ನು ಉತ್ತೇಜಿಸಿದವರು ಬಿಜೆಪಿ ನಾಯಕಿ ಬಬಿತಾ ಫೋಗಟ್ ಎಂದು ಒಲಿಂಪಿಕ್ ಕುಸ್ತಿಪಟು ಸಾಕ್ಷಿ ಮಲಿಕ್ ಸೋಮವಾರ ಹೇಳಿದ್ದಾರೆ. ಬಬಿತಾ ಫೋಗಟ್ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷೆಯಾಗಲು ಬಯಸಿದ್ದರು. ಆದ್ದರಿಂದ ಉತ್ತೇಜನ ನೀಡಿದರು ಎಂದು ದೂರಿದ್ದಾರೆ.
ಇಂಡಿಯಾ ಟುಡೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಕ್ಷಿ ಮಲಿಕ್, “ಬಬಿತಾ ಫೋಗಟ್ ಹಲವು ಕುಸ್ತಿಪಟುಗಳೊಂದಿಗೆ ಸಭೆ ನಡೆಸಿದ್ದಾರೆ. ಫೆಡರೇಶನ್‌ನೊಳಗೆ ಕಿರುಕುಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿಭಟಿಸುವಂತೆ ಒತ್ತಾಯಿಸಿದರು” ಎಂದು ಹೇಳಿದ್ದಾರೆ.
“ಬಬಿತಾ ಫೋಗಟ್ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟಿಸುವ ಆಲೋಚನೆಯೊಂದಿಗೆ ನಮ್ಮನ್ನು ಸಂಪರ್ಕಿಸಿದರು. ಬಬಿತಾ ಫೋಗಟ್ ತಮ್ಮದೇ ಆದ ಅಜೆಂಡಾವನ್ನು ಹೊಂದಿದ್ದರು. ಅವರು ಡಬ್ಲ್ಯುಎಫ್‌ಐ ಅಧ್ಯಕ್ಷರಾಗಲು ಬಯಸಿದ್ದರು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ‘ಸಾಕ್ಷಿ ಮಲಿಕ್ ಬಗ್ಗೆ ಹೆಮ್ಮೆ ಪಡುತ್ತೇನೆ’ : ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸಿ ಮತ್ತೊಬ್ಬ ಕುಸ್ತಿಪಟು ಪ್ರಧಾನಿಗೆ ಪತ್ರ
“ನಮ್ಮ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂಬ ವದಂತಿಗಳಿವೆ. ಆದರೆ ಅದು ಸುಳ್ಳು. ವಾಸ್ತವವಾಗಿ, ಇಬ್ಬರು ಬಿಜೆಪಿ ನಾಯಕರಾದ ಬಬಿತಾ ಫೋಗಟ್ ಮತ್ತು ತಿರತ್ ರಾಣಾ ಹರಿಯಾಣದಲ್ಲಿ ಪ್ರತಿಭಟನೆಗೆ ಅನುಮತಿ ಪಡೆಯಲು ನಮಗೆ ಸಹಾಯ ಮಾಡಿದರು” ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೆ ಲೈಂಗಿಕ ಕಿರುಕುಳ ನಡೆಯುತ್ತಿದ್ದದ್ದು ಹೌದು ಎಂದು ಸಾಕ್ಷಿ ಮಲಿಕ್ ಸ್ಪಷ್ಟಪಡಿಸಿದ್ದಾರೆ. “ಈ ಪ್ರತಿಭಟನೆಯು ಬಬಿತಾ ಫೋಗಟ್ ಸಲಹೆಯ ಮೇರೆಗೆ ನಡೆದಿದ್ದರೂ ಕೂಡಾ ಸಂಪೂರ್ಣವಾಗಿ ಅವರ ಪ್ರಭಾವವಿಲ್ಲ. ಫೆಡರೇಶನ್‌ನಲ್ಲಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದಂತಹ ಗಂಭೀರ ಸಮಸ್ಯೆಗಳಿವೆ ಎಂದು ನಮಗೆ ತಿಳಿದಿತ್ತು” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ಬಿಜೆಪಿಯ ಮಾಜಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಕಳೆದ ವರ್ಷ ಹಲವು ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತನಿಖೆಗೆ ಒತ್ತಾಯಿಸಿ ವಾರಗಳವರೆಗೆ ಪ್ರತಿಭಟನೆ ನಡೆಸಿದ್ದರು.
ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ
ಹರಿಯಾಣದ 32 ವರ್ಷ ವಯಸ್ಸಿನ ಕುಸ್ತಿಪಟು ತನ್ನ ಟ್ಯೂಷನ್ ಶಿಕ್ಷಕರಿಂದ ಕಿರುಕುಳಕ್ಕೊಳಗಾಗಿದ್ದ ಬಗ್ಗೆಯೂ ಮಾತನಾಡಿದ್ದಾರೆ. “ಇದು ನನ್ನ ತಪ್ಪು ಎಂದು ನಾನು ಭಾವಿಸಿದ್ದರಿಂದ ನಾನು ಅದನ್ನು ನನ್ನ ಮನೆಯವರಿಗೆ ಹೇಳಲು ಸಾಧ್ಯವಾಗಲಿಲ್ಲ. ನನ್ನ ಶಾಲಾ ದಿನಗಳಲ್ಲಿ ನನ್ನ ಟ್ಯೂಷನ್ ಶಿಕ್ಷಕರು ನನಗೆ ಕಿರುಕುಳ ನೀಡುತ್ತಿದ್ದರು. ಅವರು ನನ್ನನ್ನು ಕರೆಯುತ್ತಿದ್ದರು. ಕೆಲವೊಮ್ಮೆ ನನ್ನನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು. ನಾನು ನನ್ನ ಟ್ಯೂಷನ್‌ಗೆ ಹೋಗಲು ಭಯಪಡುತ್ತಿದ್ದೆ. ಆದರೆ ನಾನು ಎಂದಿಗೂ ನನ್ನ ತಾಯಿಗೆ ಹೇಳಲು ಸಾಧ್ಯವಾಗಲಿಲ್ಲ” ಎಂದು ವಿವರಿಸಿದ್ದಾರೆ.
