ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಚುನಾವಣೆಯಲ್ಲಿ ಗೆದ್ದರೆ ಪ್ರತಿ ಶಾಸಕರಿಗೆ 50 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದು ರಾಜ್ಯದ ಸುಮಾರು 150 ಶಾಸಕರು ಈವರೆಗೆ ತಲಾ 15 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಸೋಮವಾರ ಆರೋಪಿಸಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ (ಯುಬಿಟಿ) ನಾಯಕ ರಾವತ್, “ನಿನ್ನೆ 2 ವಾಹನಗಳಲ್ಲಿ ಸುಮಾರು 15 ಕೋಟಿ ರೂಪಾಯಿ ಇತ್ತು. ನಾನು ಮೊದಲೇ ಹೇಳಿದಂತೆ, ಏಕನಾಥ್ ಶಿಂದೆ ಅವರು ತಮ್ಮ ಜನರಿಗೆ ತಲಾ 50 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಇದು ಮೊದಲ ಕಂತಿನ 15 ಕೋಟಿ ರೂ. ಆಗಿದೆ” ಎಂದು ದೂರಿದ್ದಾರೆ.
“ಎರಡು ವಾಹನಗಳಿದ್ದವು. ಅಲ್ಲಿ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಮೊದಲು ಶಾಸಕರ ಸೇವೆಯಲ್ಲಿದ್ದ ಕಾರಣ ಕರೆ ಬಂದ ಬಳಿಕ ಒಂದು ವಾಹನವನ್ನು ಬಿಟ್ಟಿದ್ದಾರೆ. ರಾಜ್ಯದ ಸುಮಾರು 150 ಶಾಸಕರು ಈವರೆಗೆ ತಲಾ 15 ಕೋಟಿ ರೂಪಾಯಿ ಪಡೆದಿದ್ದಾರೆ” ಎಂದು ರಾವತ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಮಾನನಷ್ಟ ಮೊಕದ್ದಮೆ | ಸಂಜಯ್ ರಾವತ್‌ಗೆ 15 ದಿನಗಳ ಜೈಲು ಶಿಕ್ಷೆ
ಅಕ್ಟೋಬರ್ 21ರಂದು ಸಂಜೆ ಪುಣೆ ಗ್ರಾಮಾಂತರ ಪೊಲೀಸರು ಖೇಡ್ ಶಿವಪುರ ಟೋಲ್ ಬೂತ್‌ನಲ್ಲಿ 5 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದಾದ ಬಳಿಕ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.
“ಖೇಡ್ ಶಿವಪುರ ಟೋಲ್ ನಾಕಾದಲ್ಲಿ ಪುಣೆ ಗ್ರಾಮಾಂತರ ಪೊಲೀಸರಿಗೆ ಕಾರಿನಲ್ಲಿ ಒಟ್ಟು 5 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಚಾಲಕ ಸೇರಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಪುಣೆ ಗ್ರಾಮಾಂತರ ಎಸ್‌ಪಿ ಪಂಕಜ್ ದೇಶಮುಖ್ ಹೇಳಿದ್ದಾರೆ. ಹೆಚ್ಚಿನ ತನಿಖೆಗಾಗಿ ನಗದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪುಣೆ ಗ್ರಾಮಾಂತರ ಎಸ್‌ಪಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 23ಕ್ಕೆ ಮತ ಎಣಿಕೆ ನಡೆಯಲಿದೆ.
