ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮಾರುಕಟ್ಟೆಗಳಲ್ಲಿ ಪಟಾಕಿಗಳ ಖರೀದಿ ಭರಾಟೆ ಶುರುವಾಗಿದ್ದು, ನಿಷೇಧಿತ ಕೆಂಪು ಪಟಾಕಿ ಮೇಲೆ ಖಾಕಿ ಕೆಂಗಣ್ಣು ಬೀರಿದೆ.
ರಾಜ್ಯ ಸರ್ಕಾರದ ಆದೇಶ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) ನಿರ್ದೇಶನದನ್ವಯ ರಾಜ್ಯ ಪೊಲೀಸರು ಹಸಿರು ಪಟಾಕಿ ಹೊರತುಪಡಿಸಿ ನಿಷೇಧಿತ ಇತರ ಪಟಾಕಿಗಳ ಮಾರಾಟ, ಪೂರೈಕೆ ಮೇಲೆ ರಾಜ್ಯದೆಲ್ಲೆಡೆ ನಿಗಾ ಇರಿಸಿದ್ದಾರೆ.
ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ವಹಿವಾಟು ನಡೆಸಲು ವ್ಯಾಪಾರಿಗಳು ಸಜ್ಜಾಗಿದ್ದಾರೆ. ಆನ್‌ಲೈನ್‌ನಲ್ಲಿಯೂ ಪಟಾಕಿ ವ್ಯಾಪಾರ ಜೋರಾಗಿದೆ. ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಬಳಸುವಂತೆ ರಾಜ್ಯ ಸರ್ಕಾರವು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ, ಕೆಂಪು ಪಟಾಕಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇದೀಗ ಪರಿಸರಕ್ಕೆ ಹಾನಿಯುಂಟುಮಾಡುವ ಪಟಾಕಿ ವ್ಯವಹಾರ, ಮಾರಾಟ, ಖರೀದಿ ಬಗ್ಗೆ ನಿಗಾ ಇಡಲು ಖಾಕಿಪಡೆ ಸಜ್ಜಾಗಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುವ ಪಟಾಕಿಗಳನ್ನು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪಟಾಕಿ ಸರಬರಾಜು ಮಾಡುವವರ ವಿರುದ್ಧ ಪೊಲೀಸರು ಇನ್ನಷ್ಟು ಬಿಗಿಯಾಗಿ ಕಣ್ಗಾವಲು ಇರಿಸಲು ಕ್ರಮ ಕೈಗೊಂಡಿದ್ದಾರೆ.
ಹಸಿರು ಪಟಾಕಿ ಹೊರತುಪಡಿಸಿ, ಇತರ ಪಟಾಕಿಗಳ ಮಾರಾಟ ಮಾಡುವ ಬಗ್ಗೆ ಕೆಎಸ್‌ಪಿಸಿಬಿ ಮೇಲ್ವಿಚಾರಣೆ ಮಾಡುತ್ತಿದೆ. ಪಟಾಕಿ ಉತ್ಪಾದನೆ ಮಾಡುವ ಘಟಕವಿದ್ದರೆ ಮಾತ್ರ ಅಂತಹ ಕಡೆ ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಲು ಕೆಎಸ್‌ಪಿಸಿಬಿಗೆ ಅವಕಾಶಗಳಿವೆ. ಆದರೆ ಕರ್ನಾಟಕದಲ್ಲಿ ಪಟಾಕಿ ಉತ್ಪಾದನ ಘಟಕಗಳಿಲ್ಲ. ಇಲ್ಲಿನ ವಾತಾವರಣದಲ್ಲಿ ತೇವಾಂಶ ಅಧಿಕವಾಗಿರುವ ಹಿನ್ನಲೆಯಲ್ಲಿ ಪಟಾಕಿ ಉತ್ಪಾದನೆಗೆ ಕರ್ನಾಟಕ ಸೂಕ್ತವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಉಡುಪಿ | ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹಾಡಹಗಲೇ ವ್ಯಕ್ತಿಗೆ ಚೂರಿ ಇರಿದು ಹತ್ಯೆ
ಪಟಾಕಿ ಉತ್ಪಾದಿಸಿದರೂ, ಸಿಡಿಸಲು ಯೋಗ್ಯವಾಗಿರುವುದಿಲ್ಲ. ಈ ಎಲ್ಲ ಕಾರಣಗಳಿಂದ ಹೊರರಾಜ್ಯಗಳಿಂದ ಪ್ರಮುಖವಾಗಿ ತಮಿಳುನಾಡಿನಿಂದ ಹೆಚ್ಚಾಗಿ ಕರ್ನಾಟಕಕ್ಕೆ ಪಟಾಕಿಗಳು ಬರುತ್ತಿವೆ.
ಗ್ರಾಹಕರು ಕೊಳ್ಳುವ ಪಟಾಕಿಗಳು ಹಸಿರು ಪಟಾಕಿ ಹೌದೇ? ಇಲ್ಲವೇ? ಎಂಬುದನ್ನು ಖಾತರಿಪಡಿಸಿಕೊಳ್ಳಲು ಪಟಾಕಿ ಪ್ಯಾಕ್‌ನ ಮೇಲಿರುವ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡುವ ಮೂಲಕ ಅರಿತುಕೊಳ್ಳಬಹುದಾಗಿದೆ.