ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಗೈದಿದ್ದ ಆರೋಪಿಗಳನ್ನು ಹಿಂದುತ್ವ ಸಂಘಟನೆಗಳು ಸನ್ಮಾನಿಸಿರುವುದನ್ನು ಖಂಡಿಸಿ, ಪ್ರಕರಣದ ತ್ವರಿತ ವಿಚಾರಣೆಗೆ ಆಗ್ರಹಿಸಿ ‘ಗೌರಿ ಬಳಗ’ವು ಪ್ರತಿಭಟನೆ ನಡೆಸಿದೆ.
ಆರೋಪಿಗಳಿಗೆ ಸನ್ಮಾನ ಮಾಡುವುದು ಹತ್ಯೆಯನ್ನು ಪ್ರಚೋದಿಸುತ್ತದೆ. ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತದೆ. ಗೌರಿ ಹತ್ಯೆ ಆರೋಪಿಗಳಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಗೌರಿ ಬಳಗದ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, “ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆ ಜಾಮೀನು ಪಡೆದು ಹೊರಬಂದಿದ್ದರು. ಅವರಿಗೆ ವಿಜಯಪುರದಲ್ಲಿ ಸನ್ಮಾನ ಮಾಡಲಾಗಿದೆ. ಮತ್ತೋರ್ವ ಆರೋಪಿ ಶ್ರೀಕಾಂತ್ ಪಾಂಗಾರ್ಕರ್ ಎಂಬಾತನನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ (ಶಿಂಧೆ ಬಣ) ಪಕ್ಷಕ್ಕೆ ಸೇರಿಸಿಕೊಂಡಿದೆ. ಇದು, ಕೊಲೆಯನ್ನು ಪ್ರಚೋದಿಸುತ್ತದೆ. ಮತ್ತಷ್ಟು ಹತ್ಯೆಗಳಿಗೆ ಕುಮ್ಮಕ್ಕು ನೀಡುತ್ತದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಿ.ಎಸ್ ಶ್ರೀಧರ್, “ಗೌರಿ ಹತ್ಯೆ ಆರೋಪಿಗಳಿಗೆ ಜಾಮೀನು ದೊರೆತಿದೆಯಷ್ಟೆ, ಅವರು ಆರೋಪ ಮುಕ್ತರಾಗಿಲ್ಲ. ಜಾಮೀನು ಸಿಕ್ಕಾಗಲೇ ಅವರಿಗೆ ಸನ್ಮಾನ ಮಾಡಿರುವುದು ಆತಂಕದ ವಿಚಾರ. ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆಯ ಹಿಂದೆ ಇರುವುದು ನಾವೇ ಎಂದು ಸಂಘ ಪರಿವಾರ ಒಪ್ಪಿಕೊಳ್ಳುತ್ತಿದೆ” ಎಂದರು.
ಈದಿನ.ಕಾಮ್ನ ಬಿ.ಸಿ ಬಸವರಾಜ್ ಮಾತನಾಡಿ, “ಹತ್ಯೆ, ಅತ್ಯಾಚಾರ ಆರೋಪಿಗಳಿಗೆ ಸನ್ಮಾನ ಮಾಡುವ ಪ್ರಕರಣಗಳು ಉತ್ತರ ಭಾರತದಲ್ಲಿ ವರದಿಯಾಗುತ್ತಿತ್ತು. ಕರ್ನಾಟಕದಲ್ಲಿ ಆದ ಉದಾಹರಣೆಗಳಿಲ್ಲ. ಇಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದೆ. ಕುವೆಂಪು, ಬವಸಣ್ಣನ ನಾಡಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ವಿಷಾದನೀಯ” ಎಂದು ಹೇಳಿದರು.
ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, “ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆ ಹಿಂದೆ ನಾವೇ ಇರುವುದು ಎಂದು ಸಂಘಪರಿವಾರ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದೆ. ಗೌರಿ ಹತ್ಯೆ ಪ್ರಕರಣದ ವಿಚಾರಣೆಯಲ್ಲೂ ವಿಳಂಬವಾಗುತ್ತಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೂ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ವಿಳಂಬವಾಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ತ್ವರಿತ ವಿಚಾರಣೆ ನಡೆಯಬೇಕಿದೆ” ಎಂದು ಆಗ್ರಹಿಸಿದರು.
“ಗೌರಿ ಹತ್ಯೆ ಪ್ರಕರಣದಲ್ಲಿ 2019ರ ವೇಳಗೆ 19 ಆರೋಪಿಗಳನ್ನು ಬಂಧಿಸಲಾಗಿತ್ತು. ಅದೇ ವರ್ಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ಅನ್ನೂ ಸಲ್ಲಿಸಲಾಗಿತ್ತು. 2022ರಿಂದ ಪ್ರಕರಣದ ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿವೆ. ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅದರೆ, ವಿಶೇಷ ನ್ಯಾಯಾಲಯ ಸ್ಥಾಪಿಸಲು ಸಾಧ್ಯವಿಲ್ಲವೆಂದು ಹೈಕೋರ್ಟ್ ಪ್ರತಿಕ್ರಿಯಿಸಿದೆ. ಇದು ಗಂಭೀರ ಪ್ರಕರಣವಾಗಿದ್ದು, ಸರ್ಕಾರವು ನ್ಯಾಯಾಲಯಕ್ಕೆ ಇದರನ್ನು ಅರ್ಥ ಮಾಡಿಸಬೇಕು. ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಚೆನ್ನಮ್ಮ, ವಕೀಲರಾದ ವಿನಯ್ ಶ್ರೀನಿವಾಸ್, ಪೂರ್ಣ, ಶ್ರೀಪಾದ್ ಭಟ್, ಹನುಮೇಗೌಡ, ಐಶ್ವರ್ಯ, ಕಾರ್ಮಿಕ ನಾಯಕಿ ಎಸ್ ವರಲಕ್ಷ್ಮೀ ಸೇರಿದಂತೆ ಗೌರಿ ಲಂಕೇಶ್ ಸಂಗಾತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು ಭಾಗವಹಿಸಿದ್ದರು.