ಬೆಂಗಳೂರಿನ ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ಮಂಗಳವಾರ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದುಬಿದ್ದ ಅವಘಡದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿ ಒಟ್ಟು ಐವರು ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು(ಬುಧವಾರ) ಬೆಳಗ್ಗೆ ಓರ್ವ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಒಟ್ಟು ಐದು ಮಂದಿ ಮೃತಪಟ್ಟಿರುವುದು ದೃಢ ಪಟ್ಟಿದೆ. ಇದೇ ವೇಳೆ ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಉಳಿದ ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ರಾತ್ರಿಯಿಡೀ ಅವಶೇಷಗಳಡಿ ಸಿಲುಕಿದವರ ಪತ್ತೆಕಾರ್ಯ ನಡೆಯಿತು. ಮಧ್ಯರಾತ್ರಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನು ಕೆಲವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರ ತೆಗೆಯಲು ಜೆಸಿಬಿ, ಹಿಟಾಚಿಗಳ ಮೂಲಕ ಕುಸಿದ ಕಟ್ಟಡದ ಅವಶೇಷಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಕಾಮಗಾರಿಯ ವೇಳೆಗೆ 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೂಲಿ ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ
ಮಂಗಳವಾರವೇ ಬಿಹಾರದ ಅರ್ಮಾನ್(26) ಎಂಬ ಕಾರ್ಮಿಕ ಮೃತಪಟ್ಟಿದ್ದರು. ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅವರ ರಕ್ಷಣೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ಮುನಿರಾಜು ರೆಡ್ಡಿ ಎಂಬವರು ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾರೆ. ಯಾದಗಿರಿ, ಬಿಹಾರ, ಆಂಧ್ರಪ್ರದೇಶದ 21 ಮಂದಿ ಕಾರ್ಮಿಕರು ಈ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಹಗಲಿನಲ್ಲಿ ಕೆಲಸ ಮಾಡಿ, ರಾತ್ರಿ ವೇಳೆ ಕಟ್ಟಡದಲ್ಲಿಯೇ ಮಲಗುತ್ತಿದ್ದರು.
ಮಂಗಳವಾರ ಬೆಳಗ್ಗೆಯೇ ಎಲ್ಲ ಕಾರ್ಮಿಕರು ಕಟ್ಟಡ ಒಳಭಾಗದಲ್ಲಿ ಟೈಲ್ಸ್ ಸೇರಿ ಇತರ ಕೆಲಸ ಮಾಡುತ್ತಿದ್ದರು. ಆದರೆ, ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಕಟ್ಟಡದ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡು ಇಡೀ ಕಟ್ಟಡ ಬಲಭಾಗಕ್ಕೆ ಬಿದ್ದಿದೆ. ಈ ವೇಳೆ ಒಂದಿಬ್ಬರು ಕಾರ್ಮಿಕರು ಕಟ್ಟಡದಿಂದ ಮರಳಿನ ಮೇಲೆ ಜಿಗಿದು ಪ್ರಾಣ ಉಳಿಸಿಕೊಂಡರೆ, ಇನ್ನು ಕೆಲವರು ಒಳಗಡೆಯೇ ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ತಂಡ ಮಾಹಿತಿ ನೀಡಿದೆ.
