ಕಳೆದ ಒಂದು ವಾರದಿಂದ ಮಳೆ ಅಬ್ಬರ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿಗರ ಪರಿಸ್ಥಿತಿ ಹೇಳತೀರದಾಗಿದ್ದು, ಹಲವಾರು ಸಂಕಷ್ಟಗಳು ಎದುರಾಗಿವೆ. ಮಳೆಯ ಅಬ್ಬರಕ್ಕೆ ಹೆಣ್ಣೂರು ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿದ್ದಿದ್ದು, ಐದು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಪ್ರತಿವರ್ಷವೂ ಮಳೆ ಬೀಳುವ ಸಮಯದಲ್ಲಿ ಬೆಂಗಳೂರು ಕರೆಯಂತಾಗುತ್ತಿದ್ದು, ಮಳೆ ನೀರನ್ನು ನಿರ್ವಹಿಸುವಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ವಿರುದ್ಧ ನಗರವಾಸಿಗಳು ಆಕ್ರೋಶಗೊಂಡಿದ್ದಾರೆ.
ಉತ್ತರ ಬೆಂಗಳೂರು ಭಾಗದ ಯಲಹಂಕ, ಮಹದೇವಪುರ, ದಾಸರಹರ್ಳಳಿ, ಸರ್ಜಾಪುರ, ವೈಟ್ಫೀಲ್ಡ್, ಬೆಳ್ಳಂದೂರು ಹಾಗೂ ಮಾರತಹಳ್ಳಿ ಪ್ರದೇಶದಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿದೆ. ಹಲವು ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಸಂತ್ರಸ್ತರ ರಕ್ಷಣೆಗಿಳಿದಿವೆ. ಜನರನ್ನು ಸ್ಥಳಾಂತರಿಸಲು ದೋಣಿಗಳನ್ನು ಬಳಸುತ್ತಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಸಂಚಾರ ಅಸ್ತವ್ಯಸ್ತವಾಗಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಸಂಚಾರವೇ ಸವಾಲಾಗಿದೆ. ಶಾಲೆ, ಕಾಲೇಜು, ಕಚೇರಿಗಳು ಸೇರಿದಂತೆ ಕೆಲಸದ ಸ್ಥಳಗಳಿಗೆ ತೆರಳುವುದಕ್ಕೂ ತೊಂದರೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕಿ.ಮೀ.ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ. ಮಳೆಯ ನಡುವೆಯೂ ಜನರು ರಸ್ತೆಯಲ್ಲಿ ನಿಂತಿದ್ದಾರೆ. ಮರಗಳು ಮುರಿದು ಬೀಳುತ್ತಿವೆ. ವಿಮಾನ ಹಾರಾಟಕ್ಕೂ ತೊಂದರೆಯಾಗಿದೆ.
“ಅಕ್ಟೋಬರ್ 1ರಿಂದ ಈವರೆಗೆ ಬೆಂಗಳೂರಿನಲ್ಲಿ ಒಟ್ಟು 241 ಮಿ.ಮೀ ಮಳೆಯಾಗಿದೆ. 2005ರ ನಂತರ ಇದೇ ಮೊದಲ ಬಾರಿಗೆ ಒಂದೇ ತಿಂಗಳಿನಲ್ಲಿ ಈ ಪ್ರಮಾಣದ ಮಳೆ ದಾಖಲಾಗಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ” ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.