ಅಕ್ಟೋಬರ್ 24 ಅಥವಾ ಅಕ್ಟೋಬರ್ 25ರ ನಡುವೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತ ಅಪ್ಪಳಿಸಲಿದ್ದು ಇವೆರಡು ರಾಜ್ಯದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಈಸ್ಟ್ ಕೋಸ್ಟ್ ರೈಲ್ವೇಸ್ (ಇಸಿಒಆರ್) ಒಟ್ಟು 178 ರೈಲುಗಳನ್ನು ರದ್ದುಗೊಳಿಸಿದೆ. ಕರ್ನಾಟಕದ 10 ರೈಲುಗಳು ಕೂಡಾ ರದ್ದಾಗಿವೆ.
ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ಕೆಲವು ರೈಲು ಸೇವೆಗಳನ್ನು ಅಕ್ಟೋಬರ್ 23ರಿಂದ ಅಕ್ಟೋಬರ್ 25ರವರೆಗೆ ಮೂರು ದಿನಗಳವರೆಗೆ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನು ಓದಿದ್ದೀರಾ? ಅ.24ರಂದು ಒಡಿಶಾಕ್ಕೆ ಅಪ್ಪಳಿಸಲಿರುವ ಚಂಡಮಾರುತ: ಕರ್ನಾಟಕ ಸೇರಿ ಹಲವು ಕಡೆ ಮಳೆ
ಇನ್ನು ಚಂಡಮಾರುತದಿಂದಾಗುವ ಹಾನಿಯನ್ನು ಎದುರಿಸಲು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಿದ್ಧತೆಗಳನ್ನು ಮಾಡಲಾಗಿದೆ. 24/7 ವಿಪತ್ತು ನಿರ್ವಹಣಾ ಘಟಕವನ್ನು ಸ್ಥಾಪಿಸಲಾಗಿದೆ. ಉಭಯ ರಾಜ್ಯಗಳ ಕರಾವಳಿಯಲ್ಲಿ ಶಾಲಾ ಕಾಲೇಜುಗಳಿಗೆ ಅಕ್ಟೋಬರ್ 23ರಿಂದ 26ರವರೆಗೆ ರಜೆ ಘೋಷಿಸಲಾಗಿದೆ.
ಕರ್ನಾಟಕದಲ್ಲಿ ರದ್ದಾದ ರೈಲುಗಳ ವಿವರ
ಅಕ್ಟೋಬರ್ 23ರಂದು ಕಾಮಾಕ್ಯ-ಬೆಂಗಳೂರು, ಬೆಂಗಳೂರು- ಹೌರಾ, ಬೆಂಗಳೂರು-ಭುವನೇಶ್ವರ, ಬೆಂಗಳೂರು-ಗುವಾಹಟಿ ರೈಲುಗಳನ್ನು ರದ್ದು ಮಾಡಲಾಗಿದೆ. ಅಕ್ಟೋಬರ್ 24ರಂದು ಹೌರಾ-ಬೆಂಗಳೂರು, ಶಾಲಿಮಾರ್-ವಾಸ್ಕೊ ಡ ಗಾಮಾ, ಬೆಂಗಳೂರು-ಮುಜಾಫರಪುರ, ಬೆಂಗಳೂರು-ಹೌರಾ (22888), ಬೆಂಗಳೂರು-ಹೌರಾ (12246) ರೈಲುಗಳು ರದ್ದಾಗಿವೆ. ಇನ್ನು ಅಕ್ಟೋಬರ್ 25ರಂದು ಭುವನೇಶ್ವರ-ಬೆಂಗಳೂರು, ಅಕ್ಟೋಬರ್ 26ರಂದು ಬೆಂಗಳೂರು-ಕಾಮಾಕ್ಯ, ಅಕ್ಟೋಬರ್ 27ರಂದು ವಾಸ್ಕೊ ಡ ಗಾಮಾ- ಶಾಲಿಮಾರ್ ರೈಲುಗಳು ರದ್ದಾಗಿವೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮಂಗಳವಾರ ಸಂಜೆ ತೀವ್ರಗೊಂಡಿದ್ದು, ಚಂಡಮಾರುತ ತೀವ್ರವಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ. ಚಂಡಮಾರುತವು ಅಕ್ಟೋಬರ್ 25ರಂದು ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಗುಜರಾತ್ | ಭಾರೀ ಮಳೆ; ಚಂಡಮಾರುತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಚಂಡಮಾರುತದಿಂದಾಗಿ ಗಾಳಿಯ ವೇಗವು ಗಂಟೆಗೆ 100ರಿಂದ 110 ಮೈಲುಗಳವರೆಗೆ ಇರುತ್ತದೆ. ಒಡಿಶಾ, ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಕರಾವಳಿ ಕಾವಲು ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಇತರ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತದ ತೀವ್ರ ಪ್ರಭಾವ ಉಂಟಾಗುವ ಕರಾವಳಿ ಜಿಲ್ಲೆಗಳಲ್ಲಿ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 5,000ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಸುರೇಶ್ ಪೂಜಾರಿ ಹೇಳಿದ್ದಾರೆ. ಒಡಿಶಾದಲ್ಲಿ ಹತ್ತು ಲಕ್ಷ ಜನರನ್ನು ಸ್ಥಳಾಂತರಿಸುವ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
