ಸುಮಾರು 35 ವರ್ಷಗಳಲ್ಲಿ ಇತರರ ಚುನಾವಣಾ ಪ್ರಚಾರ ಮಾಡುತ್ತಿದ್ದ ನಾನು ಈಗ ನನಗಾಗಿ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಕಳೆದ 35 ವರ್ಷಗಳಲ್ಲಿ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಇತರೆ ಕಾಂಗ್ರೆಸ್ ನಾಯಕರುಗಳ ಚುನಾವಣಾ ಪ್ರಚಾರವನ್ನು ಪ್ರಿಯಾಂಕಾ ಗಾಂಧಿ ಮಾಡಿದ್ದಾರೆ.
ರಾಯಬರೇಲಿ ಮತ್ತು ವಯನಾಡ್ ಲೋಕಸಭೆ ಚುನಾವಣೆಯ ಕಣಕ್ಕಿಳಿದ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ. ವಯನಾಡ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಯ್‌ಬರೇಲಿ ಕ್ಷೇತ್ರವನ್ನು ರಾಹುಲ್ ಉಳಿಸಿಕೊಂಡಿದ್ದಾರೆ. ವಯನಾಡ್‌ನಲ್ಲಿ ಉಪಚುನಾವಣೆ ನಡೆಯಲಿದ್ದು ಉಪಚುನಾವಣೆಗೆ ನಾಮಪತ್ರ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದಾರೆ.
ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ನಾನು ನನ್ನ ತಂದೆ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಪರ ಪ್ರಚಾರ ಮಾಡುವಾಗ ನನಗೆ 17 ವರ್ಷ ವಯಸ್ಸಾಗಿತ್ತು. ಅದಾದ ಬಳಿಕ ನಾನು ನನ್ನ ತಾಯಿ, ಸಹೋದರ ಮತ್ತು ನನ್ನ ಅನೇಕ ಮಿತ್ರರಿಗಾಗಿ ಪ್ರಚಾರ ಮಾಡಿದೆ. 35 ವರ್ಷಗಳಿಂದ ನಾನು ವಿವಿಧ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ನನಗಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ವಯನಾಡು ಉಪಚುನಾವಣೆ | ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ
“ಈ ಬಾರಿ ನನಗೆ ನಿಮ್ಮ ಬೆಂಬಲ ನೀಡಿ ಎಂದು ಕೋರುವುದು ಒಂದು ವಿಭಿನ್ನವಾದ ಭಾವನೆಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮನ್ನು ಪ್ರತಿನಿಧಿಸುವುದೇ ನನಗೆ ಸಿಗುವ ಗೌರವವಾಗಿದೆ” ಎಂದರು.
ಇನ್ನು 400ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ವಯನಾಡ್ ಭೂಕುಸಿತದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ನಾನು ನನ್ನ ಕಣ್ಣಾರೆ ಆ ವಿನಾಶವನ್ನು ನೋಡಿದೆ. ಕುಟುಂಬವನ್ನು ಕಳೆದುಕೊಂಡ ಮಕ್ಕಳನ್ನು ನಾನು ನೋಡಿದೆ. ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ನಾನು ಭೇಟಿ ಮಾಡಿದೆ. ಇಡೀ ಜೀವನವನ್ನೇ ಕಳೆದುಕೊಂಡ ಜನರನ್ನು ನಾನು ಭೇಟಿಯಾದೆ. ಅವರು ಪರಸ್ಪರ ಸಹಾಯ ಮಾಡುವುದರಲ್ಲಿ ನಿರತರಾಗಿದ್ದರು. ದುರಾಸೆಯಿಲ್ಲದೆ, ಸಹಾನುಭೂತಿಯಿಂದ ಒಬ್ಬರಿಗೊಬ್ಬರು ಬೆಂಬಲಿಸಿದ್ದಾರೆ” ಎಂದು ತಿಳಿಸಿದರು.
ವಯನಾಡ್‌ನಲ್ಲಿ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುವ ಸಂದರ್ಭದಲ್ಲೇ ವಯನಾಡ್ ಚುನಾವಣಾ ಫಲಿತಾಂಶ ಹೊರಬೀರಲಿದೆ.
