ಕಲಬುರಗಿ ಜಿಲ್ಲೆಯ ಶಾಹಬಾದ್ ತಾಲೂಕಿನ ಎಐಡಿವೈಒ ಸ್ಥಳೀಯ ಸಮಿತಿಯು ನಗರದ ಬಸವೇಶ್ವರ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ಕ್ರಾಂತಿಕಾರಿ ಅಶ್ಫಾಕುಲ್ಲಾ ಖಾನ್ ಅವರ 125ನೇ ಜನ್ಮದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್ ಎಚ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, “ಹಿಂದೂಸ್ತಾನದ ಸಹೋದರರೇ ನೀವು ಯಾವುದೇ ಧರ್ಮದವರಾಗಿ ದೇಶದ ಕೆಲಸದಲ್ಲಿ ಭಾಗಿಯಾಗಲು ನಿಮ್ಮೊಳಗೆ ನೀವು ಜಗಳವಾಡಬೇಡಿ. ದಾರಿ ಬೇರೆ ಬೇರೆ ಇದ್ದರೂ ನಮ್ಮೆಲ್ಲರ ಉದ್ದೇಶ ಒಂದೇ, ಅದು ಭಾರತ ಸ್ವಾತಂತ್ರ್ಯಗೊಳಿಸುವುದಾಗಿದೆಯೆಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ಹೇಳುತ್ತಿದ್ದರು” ಎಂದರು.
“ಅವರು ಚಿಕ್ಕ ವಯಸ್ಸಿನಲ್ಲೇ ದೇಶಪ್ರೇಮ ಹಾಗೂ ಬ್ರಿಟಿಷರ ವಿರುದ್ಧ ಕ್ರೋಧವನ್ನೇ ಬೆಳೆಸಿಕೊಂಡ ಅಶ್ಫಾಕುಲ್ಲಾ ಖಾನ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದೇ ನನ್ನ ಗುರಿಯೆಂದು ನಿರ್ಧರಿಸಿದ್ದರು. ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಅವರ ವಿಚಾರಗಳಿಂದ ಪ್ರಭಾವಿತರಾಗಿ ಕ್ರಾಂತಿಕಾರಿ ಸಂಘಟನೆಯಾದ ಎಚ್‌ಆರ್‌ಎನ ಸದಸ್ಯರಾದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹಿಂದೂ- ಮುಸ್ಲಿಂರ ಮಧ್ಯೆಯಿದ್ದ ಅಪೂರ್ವ ಸ್ನೇಹದ ಆಳವನ್ನು ಈ ಒಂದು ಘಟನೆಯಿಂದ ತಿಳಿಯಬಹುದು” ಎಂದು ಹೇಳಿದರು.
“ಆಶ್ವಾಕುಲ್ಲಾ ಒಮ್ಮೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದರು. ಅವರು ಆಗಾಗ ‘ರಾಮ್’, ‘ರಾಮ್’ ಎಂದು ಕನವರಿಸುತ್ತಿದ್ದರು. ಆತನ ತಂದೆತಾಯಿ ಇದೊಂದು ‘ಸೈತಾನನ ಕಾಟ’ವೆಂದು ತಪ್ಪರ್ಥ ಮಾಡಿಕೊಂಡು, ಸೈತಾನನನ್ನು ಓಡಿಸಲು ಮೌಲ್ವಿಯನ್ನು ಕರೆತರಲು ಅಶ್ಫಾಕುಲ್ಲಾ ಖಾನ್ ಅವರ ಸ್ನೇಹಿತನಿಗೆ ಹೇಳಿದ್ದರು. ಅದೃಷ್ಟವಶಾತ್, ಆತನಿಗೆ ರಾಮ್ ರಹಸ್ಯ ಅರ್ಥವಾಯಿತು. ಮೌಲ್ವಿಯ ಬದಲು ರಾಮ್ ಪ್ರಸಾದ್ ಬಿಸ್ಮಿಲ್ ಆಗಮಿಸಿದರು. ಅವರನ್ನು ಹಾಸಿಗೆಯ ಬಳಿ ನೋಡಿದ ಅಶ್ಫಾಕುಲ್ಲಾ ಕನವರಿಸುವುದನ್ನು ನಿಲ್ಲಿಸಿದರು. ಬ್ರಿಟಿಷ್ ಸರ್ಕಾರದ ‘ಒಡೆದು ಆಳುವ’ ನೀತಿಯ ಹಿನ್ನೆಲೆಯಲ್ಲಿ ಒಬ್ಬ ಹಿಂದೂ ಮತ್ತು ಒಬ್ಬ ಮುಸ್ಲಿಂ ಹುಡುಗನ ಮಧ್ಯೆ ಈ ಸ್ನೇಹ, ಆ ಕಾಲದಲ್ಲಿ ಅದ್ವಿತೀಯವಾದುದು. ಆತನ ಗುಣನಡತೆಯಲ್ಲಿ ಕ್ರಾಂತಿಕಾರಿ ನೈತಿಕತೆ ಮತ್ತು ಸಿದ್ಧಾಂತದ ಪ್ರಭಾವ ಎಷ್ಟಿತ್ತೆಂದರೆ, ಭಾಷೆ ಅಥವಾ ಧರ್ಮದ ಪ್ರಶ್ನೆಗಳು ಬದಿಗೆ ಸರಿದಿದ್ದವು. ಇಡೀ ಮುಸ್ಲಿಂ ಜನಾಂಗವನ್ನು ರಾಜಿರಹಿತ ಸ್ವಾತಂತ್ರ್ಯ ಸಂಗ್ರಾಮದ ಹಿಡಿತಕ್ಕೆ ತರುವ ಬಗ್ಗೆ ಅವರು ಚಿಂತಿಸುತ್ತಿದ್ದರು” ಎಂದು ಸ್ಮರಿಸಿದರು.
“ಜನರನ್ನು ಸ್ವಾತಂತ್ರ್ಯ ಚಳುವಳಿಗೆ ಬರುವಂತೆ ಉತ್ತೇಜಿಸಲು, ಬಿಸ್ಮಿಲ್ ಅವರಿಗೆ ಉರ್ದುವಿನಲ್ಲಿ ಕವನ ಬರೆಯಬೇಕೆಂದು ಅವರು ಕೇಳಿಕೊಂಡರು. ಆದರೆ ಆ ಸಮಯದಲ್ಲಿ ಹೆಚ್ಚಿನ ಕ್ರಾಂತಿಕಾರಿ ಸಾಹಿತ್ಯ ಮತ್ತು ದೇಶಭಕ್ತಿ ಕವನಗಳು ಹಿಂದಿಯಲ್ಲಿ ಬರೆದವುಗಳಾಗಿದ್ದವು. ತನ್ನ ಸಂಗಾತಿಗಳನ್ನು ತನಗಾಗಿ ಅವುಗಳನ್ನೆಲ್ಲಾ ಓದಿ ಹೇಳಬೇಕೆಂದು ಕೇಳಿಕೊಳ್ಳುತ್ತಿದ್ದರು. ಈ ರೀತಿಯಾಗಿಯೇ, ಆನಂದಮಠ, ಐರಿಷ್ ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಗಳು, ಮೋತಿಲಾಲರ ಕವನ ‘ಕನಯ್‌ಲಾಲ್’, ಕಾಜಿ ನಜ್ರುಲ್ ಇಸ್ಲಾಮ್‌ರ ಕ್ರಾಂತಿಕಾರಿ ಕವನಗಳು ಅವರಿಗೆ ಪರಿಚಿತವಾಗಿದ್ದವು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ನಿರ್ಭೀತವಾದ ಪತ್ರಿಕೋದ್ಯಮ ತುಂಬಾ ಅಗತ್ಯ: ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ
“ಧೀರರು ಸಾವಿಗೆ ಹೆದರುವುದನ್ನು ನಾನೆಂದೂ ಕಂಡಿಲ್ಲವೆಂಬುದು ಅಶ್ಫಾಕುಲ್ಲಾರ ಮರೆಯಲಾಗದ ಹೇಳಿಕೆಯಾಗಿದೆ. ಭಾರತ ಸ್ವಾತಂತ್ರ್ಯವನ್ನು ಗೆದ್ದ ನಂತರ ಮತ್ತು ಬಿಳಿಯರ ಆಡಳಿತದ ಜಾಗದಲ್ಲಿ, ಬಡವ-ಶ್ರೀಮಂತ, ಜಮೀನ್ದಾರ-ರೈತರ ಭೇದಗಳನ್ನು ಜೀವಂತವಾಗಿಟ್ಟುಕೊಂಡು, ಸ್ವದೇಶಿ ಶೋಷಕರು ಅಧಿಕಾರವನ್ನು ಕೈವಶಮಾಡಿಕೊಂಡರೆ, ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ– ದೇವರೇ ನಮ್ಮ ಮಾತೃಭೂಮಿಯಲ್ಲಿ ಸಮಾನತೆ ಬರುವವರೆಗೂ ನಮಗೆ ಅಂತಹ ಸ್ವಾತಂತ್ರ್ಯ ಕೊಡಬೇಡ. ಯಾವುದೇ ಭೇದಭಾವ ಇಲ್ಲದೆ ನಾವೆಲ್ಲರೂ ಸಮಾನರೆಂದು ಹೇಳಿದರೆ ಇಂತಹ ಮಹಾನ್ ಕ್ರಾಂತಿಕಾರಿಯ ವಿಚಾರಗಳನ್ನು ಯುವಜನರು ಅರಿಯಬೇಕಾಗಿದೆ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಹಾಬಾದ್ ಅಧ್ಯಕ್ಷ ರಘು ಪವಾರ್, ಕಾರ್ಯದರ್ಶಿ ರಮೇಶ ದೇವಕರ್, ಉಪಾಧ್ಯಕ್ಷ ತೇಜಸ್ ಆರ್ ಇಬ್ರಾಹಿಂಪುರ, ಕಿರಣ ಮಾನೆ, ಆನಂದ ದಂಡಗುಲಕರ್, ಶಾಮ ಪವಾರ್, ಅಜೇಯ ದೊರೆ ಸೇರಿದಂತೆ ಇತರ ಯುವಜನರು ಇದ್ದರು.