ಈ ದಿನ ಸಂಪಾದಕೀಯ | ಪ್ರಿಯಾಂಕಾ ಲೋಕಸಭೆ ಪ್ರವೇಶ; ಮೋದಿ ವಿರುದ್ಧದ ದಾಳಿಗೆ ಮತ್ತಷ್ಟು ಮೊನಚು

Date:

Advertisements

ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸಬೇಕೆಂಬುದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಹತ್ತು ವರ್ಷಗಳ ಆಗ್ರಹ. 2024ರ ಲೋಕಸಭಾ ಚುನಾವಣೆಯಲ್ಲಿ ತಾಯಿ ಸೋನಿಯಾ ಅವರ ರಾಯಬರೇಲಿ ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸಿದ್ದರು. ಆಗ ರಾಹುಲ್ ಅವರ ಹಳೆಯ ಕ್ಷೇತ್ರ ಅಮೇಠಿಯಿಂದ ಪ್ರಿಯಾಂಕಾ ಅವರನ್ನು ಹೂಡಬೇಕೆಂಬ ಒತ್ತಡವಿತ್ತು.

ಕೇವಲ 56 ಅಂಗುಲದ ಎದೆಯಳತೆ ಸಾಲದು. ಆ ಎದೆಯೊಳಗೆ ಒಂದು ಜನಪರ ಹೃದಯವೂ ಮಿಡಿಯುತ್ತಿರಬೇಕು ಎಂದಿದ್ದರು ಪ್ರಿಯಾಂಕಾ ಗಾಂಧಿ. ಬುಧವಾರ ಅವರು ಕೇರಳದ ವಯನಾಡು ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.  

ಗೆಲುವಿನ ದವಡೆಯಿಂದ ಸೋಲನ್ನು ಕಿತ್ತುಕೊಳ್ಳುವಲ್ಲಿ ಪಾರಂಗತ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಬಿಜೆಪಿಯ ತಂತ್ರಗಳ ವಿರುದ್ಧ ಮೈಮರೆಯದೆ ಹೋರಾಡಿದರೆ ವಯನಾಡಿನಿಂದ ಪ್ರಿಯಾಂಕಾ ಸಂಸತ್ ಪ್ರವೇಶ ಬಹುತೇಕ ನಿಶ್ಚಿತ.

Advertisements

ಮೋಶಾ ಬಿಜೆಪಿಯ ವಿರುದ್ಧ  ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕೈಗೆ ಹೊಸ ಹತಾರಾಗಿ ಒದಗಲಿದ್ದಾರೆ ಪ್ರಿಯಾಂಕ ಗಾಂಧಿ. ಪ್ರತಿಪಕ್ಷಗಳ ದಾಳಿಗೆ ಮತ್ತಷ್ಟು ಮೊನಚು ಮೂಡಲಿದೆ. ರಾಹುಲ್ ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಪಕ್ಷ ಮೈ ಕೊಡವಿತ್ತು. ನೆಲಕಚ್ಚಿದ್ದ ಈ ಪಕ್ಷ ಸ್ವಂತ ಕಾಲಿನ ಮೇಲೆ ಇನ್ನೂ ಬಲವಾಗಿ ಎದ್ದು ನಿಲ್ಲಬೇಕಿದೆ. ಈ ದಿಸೆಯಲ್ಲಿ ಪ್ರಿಯಾಂಕಾ ಇನ್ನಷ್ಟು ಶಕ್ತಿ ತುಂಬಲಿದ್ದಾರೆ.

ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಹೊಸಬರಲ್ಲ. ತಾಯಿ ಸೋನಿಯಾ ಮತ್ತು ಅಣ್ಣ ರಾಹುಲ್ ಜೊತೆಗೆ ಪಳಗಿ ಚುನಾವಣಾ ರಾಜಕಾರಣದ ಒಳಸುಳಿಗಳನ್ನು ಅರಿತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಾಜಕೀಯ ಮಹತ್ವದ ಪರಿಚಯವನ್ನೂ ನೀಡಿದ್ದಾರೆ. ಸಕ್ರಿಯ ರಾಜಕಾರಣದಿಂದ ದೂರವಿದ್ದರು. ಮಕ್ಕಳು ರೈಹಾನ್ ಮತ್ತು ಮಿರಾಯಾ ದೊಡ್ಡವರಾಗಿದ್ದಾರೆ. ಪ್ರಿಯಾಂಕಾ ಅವರ ರಾಜಕೀಯ ಗ್ರಹಿಕೆ ತಾಯಿ ಮತ್ತು ಅಣ್ಣನಿಗಿಂತಲೂ ಮಿಗಿಲು ಎಂಬುದು ಕಾಂಗ್ರೆಸ್ಸಿಗರ ಭಾವನೆ. ಈ ಅನಿಸಿಕೆ ಮುಂಬರುವ ವರ್ಷಗಳಲ್ಲಿ ಪರೀಕ್ಷೆಗೆ ಒಳಪಡಲಿದೆ.

ಕೇರಳದ ವಯನಾಡು ಮತ್ತು ಉತ್ತರಪ್ರದೇಶದ ರಾಯಬರೇಲಿ ಎರಡೂ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಈ ಎರಡರ ಪೈಕಿ ಒಂದನ್ನು ಮಾತ್ರವೇ ಉಳಿಸಿಕೊಳ್ಳುವುದು ಸಾಧ್ಯವಿತ್ತು. ವಯನಾಡು ಕ್ಷೇತ್ರದ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗೆ ಖಾಲಿಯಾದ ವಯನಾಡು ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್  ಆರಿಸಿತ್ತು.

ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸಬೇಕೆಂಬುದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಹತ್ತು ವರ್ಷಗಳ ಆಗ್ರಹ. 2024ರ ಲೋಕಸಭಾ ಚುನಾವಣೆಯಲ್ಲಿ ತಾಯಿ ಸೋನಿಯಾ ಅವರ ರಾಯಬರೇಲಿ ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸಿದ್ದರು. ಆಗ ರಾಹುಲ್ ಅವರ ಹಳೆಯ ಕ್ಷೇತ್ರ ಅಮೇಠಿಯಿಂದ ಪ್ರಿಯಾಂಕಾ ಅವರನ್ನು ಹೂಡಬೇಕೆಂಬ ಒತ್ತಡವಿತ್ತು.

ಆದರೆ ದರ್ಪದಿಂದ ಮೆರೆಯುತ್ತಿದ್ದ ಸ್ಮೃತಿ ಇರಾನಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಂದ ಸೋಲಿಸಬೇಕೆಂಬ ತಂತ್ರದ ಭಾಗವಾಗಿ ಪಕ್ಷದ ನಿಷ್ಠಾವಂತ ಕಿಶೋರಿಲಾಲ್ ಶರ್ಮ ಅವರನ್ನು ಅಮೇಠಿಯಿಂದ ಕಣಕ್ಕಿಳಿಸಲಾಯಿತು. ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬಂದರು ಪ್ರಿಯಾಂಕಾ ಗಾಂಧಿ.

ನೆಹರೂ-ಗಾಂಧಿ ಮನೆತನದ ಪ್ರಿಯಾಂಕಾ 1984ರಲ್ಲಿ ಅಜ್ಜಿ ಇಂದಿರಾಗಾಂಧೀಯವರ ಹತ್ಯೆ, 1991ರಲ್ಲಿ ತಂದೆ ರಾಜೀವ್ ಗಾಂಧಿ ಹತ್ಯೆಗಳ ದುರಂತಗಳನ್ನು ಕಂಡವರು. ರಾಜಕಾರಣದಿಂದ ದೂರವಿದ್ದವರು ಕಾಲಕ್ರಮೇಣ ಸಾರ್ವಜನಿಕ ಜೀವನವನ್ನು ಮರುಪ್ರವೇಶಿಸಿದರು. 2019ರಷ್ಟು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡರು.

ಪ್ರಿಯಾಂಕಾ ಅವರನ್ನು ಸೋಲಿಸಲು ಇಲ್ಲವೇ ಅವರ ಭಾರೀ ಬಹುಮತಕ್ಕೆ ಕತ್ತರಿ ಹಾಕಿ ಮುಖಭಂಗ ಉಂಟು ಮಾಡಲು  ಎಲ್ಲ ತಂತ್ರಗಳನ್ನೂ ಹೂಡಲಿದೆ ಮೋಶಾ ಬಿಜೆಪಿ. ಈವರೆಗಿನ ನಡೆಯನ್ನು ನೋಡಿರುವ ಪ್ರಕಾರ ಯಾವ ಹಂತಕ್ಕೆ ಬೇಕಾದರೂ ಇಳಿಯಲಿದೆ.

ಈ ಹಿಂದಿನ ಯುಪಿಎ ಸರ್ಕಾರಗಳ ಕಾಲದಲ್ಲಿ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಮೇಲೆ ಭೂ ಹಗರಣದ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳು ಮತ್ತೆ ಜೀವ ತಳೆಯಬಹುದು. ಜಾರಿ ನಿರ್ದೇಶನಾಲಯ (ಇ.ಡಿ.), ಆದಾಯ ತೆರಿಗೆ ದಾಳಿಗಳು ಶುರುವಾದರೆ ಆಶ್ಚರ್ಯಪಡಬೇಕಿಲ್ಲ.

ರಾಬರ್ಟ್ ವಾದ್ರಾ ಅವರ ರಾಜಕೀಯ ಪ್ರವೇಶದ ಬಯಕೆಯನ್ನು ಪ್ರಿಯಾಂಕಾ ಅವರೇ ಈ ಹಿಂದೆ ಚಿವುಟಿ ಹಾಕಿದ್ದುಂಟು. ಬಿಜೆಪಿ ತಮ್ಮ ಪತಿಯ ಮೇಲಿನ ಆರೋಪಗಳನ್ನು ತಮ್ಮ ವಿರುದ್ಧ ಬಳಸಿಕೊಂಡೀತು ಎಂಬ ಅಂಜಿಕೆ ಪ್ರಿಯಾಂಕಾ ಅವರಿಗೆ ಇದ್ದಂತಿಲ್ಲ. ನಾಮಪತ್ರ ಸಲ್ಲಿಕೆಯ ಗಳಿಗೆಯಲ್ಲಿ ಪತಿ ಮತ್ತು ಮಗ ರೇಹಾನ್ ಅವರನ್ನು ತಮ್ಮ ಎಡಬಲಕ್ಕೆ ಕುಳ್ಳಿರಿಸಿಕೊಂಡಿದ್ದರು. ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಈ ಆಸನಗಳಲ್ಲಿ ಕಂಡು ಬಂದರು.

ರಾಹುಲ್‌ಗೆ ಹೋಲಿಸಿದರೆ, ಕಾಂಗ್ರೆಸ್ಸಿನ ಒಳ-ಹೊರಗೆ ಪ್ರಿಯಾಂಕಾ ಹೆಚ್ಚು ಜನಪ್ರಿಯರು. ಅಜ್ಜಿ ಇಂದಿರಾಗಾಂಧಿಯನ್ನು ಹೋಲುತ್ತಾರೆ ಮತ್ತು ಅವರಂತೆಯೇ ಆಕ್ರಮಣಕಾರಿ- ವರ್ಚಸ್ವೀ ವ್ಯಕ್ತಿತ್ವ ಎಂಬುದು ಕಾಂಗ್ರೆಸ್ಸಿಗರ ನಂಬಿಕೆ. ಆದರೇನಂತೆ ವಂಶಪಾರಂಪರ್ಯದ ರಾಜಕಾರಣದಲ್ಲೂ ಗಂಡಾಳಿಕೆಯದೇ ಅಬ್ಬರ. ಕುಟುಂಬದ ಮಗಳು ಸಮರ್ಥಳಿದ್ದರೂ ಮಗನಿಗೇ ಮೊದಲ ಮಣೆ. ಈ ವಿಕೃತಿಗಳು- ಅರೆಕೊರೆಗಳನ್ನು ಅರೆಗಳಿಗೆ ಬದಿಗೊತ್ತಿ ನೋಡಿದ್ದೇ ಆದರೆ ಪ್ರಿಯಾಂಕ ಆಗಮನದಿಂದ ಹೆಣ್ಣು ಮಗಳೊಬ್ಬಳು ದೇಶ ರಾಜಕಾರಣದ ಮುನ್ನೆಲೆಗೆ ಬರುತ್ತಿದ್ದಾಳೆನ್ನುವುದು ಸ್ವಾಗತಾರ್ಹ ಬೆಳವಣಿಗೆ.

ಸಾಮಾನ್ಯ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಎತ್ತರಕ್ಕೆ ಏರುವುದು ಸಾಧ್ಯವಿರಲಿಲ್ಲ ಎಂಬುದು ಕಟು ವಾಸ್ತವ. ವಂಶಪಾರಂಪರ್ಯ ಎಂಬ ಊಳಿಗಮಾನ್ಯ ಮೌಲ್ಯಕ್ಕೆ ಜನತಂತ್ರದಲ್ಲಿ ಜಾಗವಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಗತಿ ಇಲ್ಲ. ನೆಹರೂ-ಗಾಂಧಿ ಕುಟುಂಬವು ಪಕ್ಷವನ್ನು ಒಂದಾಗಿ ಹಿಡಿದಿಡುವ ಅಂಟಿನಂತೆ ಕೆಲಸ ಮಾಡಿರುವುದು ಹೌದು. ನಾಯಕತ್ವವು ಕುಟುಂಬದ ಚೌಕಟ್ಟಿನಿಂದ ಹೊರ ಸರಿದಾಗಲೆಲ್ಲ ವಿಘಟನೆಯ ಭಯ ಈ ಪಕ್ಷವನ್ನು ಕಾಡಿದ್ದು ಹೌದು. ಕುಟುಂಬದ ಚೌಕಟ್ಟಿನಿಂದ ಈ ಪಕ್ಷವನ್ನು ಹೊರಕ್ಕೆ ಒಯ್ದು ಅದನ್ನು ಮುರಿದು ಕಟ್ಟುವ ದಿಟ್ಟತನ ಮತ್ತು ಆತ್ಮವಿಶ್ವಾಸದ ನಾಯಕ ಈ ಪಕ್ಷದಲ್ಲಿ ಇನ್ನೂ ಹುಟ್ಟಬೇಕಿದೆ. ದೇಶದ ರಾಜಕಾರಣ- ಅಧಿಕಾರಗ್ರಹಣ ನೂರು ಕುಟುಂಬಗಳ ವಂಶಪಾರಂಪರ್ಯದ ಉರುಳಿನಲ್ಲಿ ಗಿರಕಿ ಹೊಡೆದಿರುವುದು ಕಟು ವಾಸ್ತವ. ಈ ಜಾಡ್ಯ ಒಂದು ರಾಜಕೀಯ ಪಕ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಬಹುದು. ಮತ್ತೊಂದು ಪಕ್ಷದಲ್ಲಿ ತುಸು ಕಡಿಮೆ ಇದ್ದೀತು. ಎಡಪಕ್ಷಗಳು ಮಾತ್ರವೇ ಈ ವ್ಯಾಧಿಗೆ ಅಪವಾದ. ದಶಕಗಳ ಹಿಂದೆ ತೀವ್ರ ಚರ್ಚೆಯ ವಸ್ತುವಾಗಿದ್ದ ವಂಶಪಾರಂಪರ್ಯ ರಾಜಕಾರಣ ಕಾಲದ ಉರುಳಿನಲ್ಲಿ ಸವಕಲಾಗಿದೆ. ಆದರೆ ಸೈದ್ಧಾಂತಿಕ ರಾಜಕಾರಣ ಮತ್ತು ಸ್ವಸ್ಥ ಜನತಂತ್ರಕ್ಕೆ ವಂಶಪಾರಂಪರಿಕ ರಾಜಕಾರಣ ಸದಾ ನಿಷಿದ್ಧ.

ಚುರುಕು ಮಾತುಗಾರಿಕೆ, ವರ್ಚಸ್ವೀ ವ್ಯಕ್ತಿತ್ವ, ಮಾತಿನ ಏಟಿಗೆ ಎದುರೇಟು ನೀಡುವ ವರಸೆ, ನಡೆ-ನಿಲುವು-ದಿರಿಸು ಹಾಗೂ ರಾಜಕೀಯ ಪ್ರಜ್ಞೆ ಪ್ರಿಯಾಂಕಾ ಅವರಲ್ಲಿ ಧಾರಾಳವಾಗಿವೆ. ರಾಹುಲ್ ಕುರಿತು ಸಿನಿಕತನ ತೋರಿರುವ ಒಂದು ವರ್ಗದ ಮತದಾರರನ್ನು ಪ್ರಿಯಾಂಕ ಪಕ್ಷದತ್ತ ಸೆಳೆದಾರು ಎಂಬ ನಿರೀಕ್ಷೆಯೂ ಕಾಂಗ್ರಿಸ್ಸಿಗಿದೆ.

ವಯನಾಡಿನ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್ಸಿನ ಗುರಿಯಾಗಿರುತ್ತದೆ. 2024ರಲ್ಲಿ ಒಟ್ಟು ಚಲಾಯಿತ ಮತಗಳಲ್ಲಿ (10.84 ಲಕ್ಷ) 6.47 ಲಕ್ಷ ಮತಗಳನ್ನು ಪಡೆದಿದ್ದರು ರಾಹುಲ್. 3.64 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. 2019ರಲ್ಲಿ ಅವರ ಗೆಲುವಿನ ಅಂತರ 4.31 ಲಕ್ಷ ಮತಗಳು.

2024ರಲ್ಲಿ ಎರಡನೆಯ ಸ್ಥಾನದಲ್ಲಿದ್ದ ಸಿಪಿಐ 2.83 ಲಕ್ಷ ಮತಗಳನ್ನು ಗಳಿಸಿತ್ತು. 2019ರಲ್ಲಿ ಬಿಜೆಪಿಯ ಮಿತ್ರಪಕ್ಷ ಭಾರತ ಧರ್ಮ ಜನಸೇನಾದ ಅಭ್ಯರ್ಥಿ ಕಣದಲ್ಲಿದ್ದರು. 2024ರಲ್ಲಿ ಬಿಜೆಪಿ ಹುರಿಯಾಳು ಸ್ಪರ್ಧಿಸಿದ್ದರು. ಎರಡೂ ಚುನಾವಣೆಗಳಲ್ಲಿ ಬಿಜೆಪಿ ಮೂರನೆಯ ಸ್ಥಾನದಲ್ಲಿತ್ತು.

2024ರ ಲೋಕಸಭಾ ಚುನಾವಣೆಗಳಲ್ಲಿ ಕೇರಳ ತನ್ನ 20 ಲೋಕಸಭಾ ಸ್ಥಾನಗಳ ಪೈಕಿ 14ರಲ್ಲಿ ಕಾಂಗ್ರೆಸ್ಸನ್ನು ಆರಿಸಿತ್ತು. 2026ರಲ್ಲಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ ಈ ರಾಜ್ಯ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅವರಿಗೆ ತೀವ್ರ ಸ್ಪರ್ಧೆಯನ್ನು ಒಡ್ಡುವಲ್ಲಿ ಎಡರಂಗವೂ ಹಿಂದೆ ಬೀಳುವುದಿಲ್ಲ. ಹಲವು ಕೋನಗಳಿಂದ ಐತಿಹಾಸಿಕ ಎನಿಸಲಿದೆ ವಯನಾಡು ಉಪಚುನಾವಣೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X