ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗಳ ಪೈಕಿ ಬುಧವಾರ ತಡರಾತ್ರಿ ಕಾಂಗ್ರೆಸ್ ಎರಡು ಕ್ಷೇತಗಳ ಟಿಕೆಟ್ ಮಾತ್ರ ಘೋಷಿಸಿದೆ. ಶಿಗ್ಗಾಂವಿ ಟಿಕೆಟ್ ಇನ್ನೂ ಘೋಷಿಸದೆ, ಬಾಕಿ ಇರಿಸಿದೆ.
ಶಿಗ್ಗಾಂವಿ ಕ್ಷೇತ್ರಕ್ಕೆ ಮಾಜಿ ಸಚಿವ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮಗಳಾದ ವೈಶಾಲಿ ಕುಲಕರ್ಣಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂಬ ಪತ್ರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತಾದರೂ, ಅದು ‘ನಕಲಿ’ ಎಂದು ತಿಳಿದು ಬಂದಿದೆ.
ಸಂಡೂರು ಕ್ಷೇತ್ರಕ್ಕೆ ಬಳ್ಳಾರಿ ಸಂಸದ ಈ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಹಾಗೂ ಚನ್ನಪಟ್ಟಣಕ್ಕೆ ಅ.23ರಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿ ಪಿ ಯೋಗೇಶ್ವರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಕಗ್ಗಂಟಾದ ಶಿಗ್ಗಾಂವಿ ಟಿಕೆಟ್!
ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದ ಟಿಕೆಟ್ ಪಂಚಮಸಾಲಿ ಅಭ್ಯರ್ಥಿಗೋ ಅಥವಾ ಮುಸ್ಲಿಮರ ಅಭ್ಯರ್ಥಿ ಆಯ್ಕೆಗೆ ಭಾರಿ ಪೈಪೋಟಿ ನಡೆದಿರುವುದರಿಂದ ಯಾರನ್ನು ಅಂತಿಮವಾಗಿ ಕಣಕ್ಕೆ ಇಳಿಸುವ ತೀರ್ಮಾನಕ್ಕೆ ಬಾರದೇ ಗೊಂದಲಕ್ಕೆ ಬಿದ್ದಿರುವ ಕಾಂಗ್ರೆಸ್, ಈ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿಯ ಘೋಷಿಸದೇ ಕಾಯ್ದಿರಿಸಿದೆ. ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ, ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಮತ್ತು ಈ.ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಮೂವರು ಸಂಸದರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನ.23ರಂದು ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ನಾಮಪತ್ರ ಹಿಂಪಡೆಯಲು ಕೊನೆಯ ದಿನ ಅಕ್ಟೋಬರ್ 30 ಎಂದು ಆಯೋಗ ತಿಳಿಸಿದೆ.