ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭವನ್ನು ವಿರೋಧಿಸಿ ಇಂದು ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ.ಆದರೆ ಮೂಲ ನಾಲೆಗೆ ಧಕ್ಕೆಯಾಗದಂತೆ ತೆಗೆದುಕೊಂಡು ಹೋಗಬೇಕೆಂಬುದು ನಮ್ಮ ಆಗ್ರಹವಾಗಿದೆ.ಈ ಹಿಂದೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆಗಳು ನಡೆದಾಗ ಸರಕಾರ ತಾಂತ್ರಿಕ ಸಮಿತಿ ನೇಮಿಸಿ ವರದಿ ಬಂದ ನಂತರ ಸಾಧಕ, ಭಾಧಕಗಳನ್ನು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆಯಲಾಗಿತ್ತು. ತಾಂತ್ರಿಕ ವರದಿಯನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಹೊರಟಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಿ, ಕಾಮಗಾರಿ ತಡೆಯಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕುಣಿಗಲ್ ತಾಲೂಕಿಗೆ ನೀರು ಹರಿಯುತ್ತಿಲ್ಲ ಎಂದು ಎಕ್ಸ್ ಪ್ರೆಸ್ ಕೆನಲ್ ನಿರ್ಮಿಸುವುದರಾದರೆ ಹೇಮಾವತಿ ನೀರು ಹಂಚಿಕೆಯಾಗಿರುವ ಮಧುಗಿರಿ, ಕೊರಟಗೆರೆ, ತುಮಕೂರು, ಗುಬ್ಬಿ ತಾಲೂಕುಗಳಿಗೂ ಎಕ್ಸ್ ಪ್ರೆಸ್ ಕೆನಾಲ್ ನಿರ್ಮಾಣ ಮಾಡಲಿ,ಅಲ್ಲದೆ ಮೊದಲು ಜಿಲ್ಲೆಗೆ ಹಂಚಿಕೆಯಾಗಿರುವ 25 ಟಿ.ಎಂಸಿ ನೀರಿಗೆ ಗ್ಯಾರಂಟಿ ನೀಡಲಿ ಎಂದು ಮಾಜಿ ಸಚಿವ ಎಸ್.ಶಿವಣ್ಣ ಆಗ್ರಹಿಸಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ತಾಂತ್ರಿಕ ಸಲಹಾ ಸಮಿತಿಯ ವರದಿ ಬಗ್ಗೆ ಚರ್ಚೆಯಾಗಿ ಇದರ ಬಗ್ಗೆ ನಿರ್ಧಾರಗಳು ಆಗುವವರೆವಿಗೂ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ತಾವು ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಇದು ಕಾರ್ಯರೂಪಕ್ಕೆ ಬರದಿದ್ದಲ್ಲಿ ನಮ್ಮಗಳ ಹೋರಾಟವು ತೀವ್ರ ಸ್ವರೂಪ ಪಡೆದು ಶಾಶ್ವತವಾಗಿ ಹೆದ್ದಾರಿ ಬಂದ್ ಪುನಃ ಜಿಲ್ಲಾ ಬಂದ್ ಹಾಗೂ ಶಾಲಾ ಕಾಲೇಜ್‌ಗಳ ಬಂದ್ ಈ ರೀತಿಯಾಗಿ ಇಡೀ ಜಿಲ್ಲೆಯಲ್ಲಿಯೇ ಉಗ್ರವಾದ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ. ಹೇಮಾವತಿ ನೀರಿನ ವಿಚಾರವಾಗಿ ಮನೆಗೊಬ್ಬರು ಜೈಲಿಗೆ ಹೋಗಲು ಸಿದ್ದ ಎಂದರು.

ಎಕ್ಸ್ ಪ್ರೆಸ್ ಕೆನಾಲ್‌ನ 70ನೇ ಕಿ.ಮೀ.ನಿಂದ ಎಷ್ಟು ಡಿಸ್ಟಿಬ್ಯೂಟ್ ಕೆನಾಲ್ ಬರುತ್ತವೆ, ಎಷ್ಟರಲ್ಲಿ ನೀರು ಹೋಗುತ್ತವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಪೈಪ್‌ಲೈನ್ ವಿವ್ಯಾಸ ನೋಡಿದರೆ 4 ಟಿಎಂಸಿ ನೀರನ್ನು 8 ದಿವಸದಲ್ಲಿ ಸಂಪೂರ್ಣವಾಗಿ ಹರಿಸಬಹುದಾಗಿದೆ. ಹಾಗಾಗಿ ಯಾವ ರೀತಿ ನೀರು ಹರಿಸಲು ಕ್ರಮ ಕೈಗೊಳ್ಳುತ್ತೀರಾ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಹಣವನ್ನು ಇವರಿಗೆ ಹೇಗೆ ಬೇಕೋ ಹಾಗೆ ವ್ಯಯ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಭಾಗದ ರೈತರನ್ನು ಕರೆದು ಚರ್ಚೆ ಮಾಡಿ ವಿಮರ್ಶೆ ನಡೆಸಿದ ನಂತರ ಈ ಯೋಜನೆಯನ್ನು ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಚಾನಲ್‌ನ 3 ರಿಂದ 5 ಅಡಿ ಡೌನ್ ಆಗಿ ಡಿಸೈನ್ ಮಾಡಿರುವುದರಿಂದ ಸಂಪೂರ್ಣ ನೀರು ಹರಿಯುತ್ತದೆ. ಹಾಗಾಗಿ ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು, ಈ ಭಾಗದ ರೈತರ ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸೇನೆಯ ಧನಿಯಕುಮಾರ್ ಮಾತನಾಡಿ, ಹೇಮಾವತಿ ಹೋರಾಟ ಸಮಿತಿಯವರು, ಕನ್ನಡ ಪರ ಸಂಘಟನೆಗಳು ಹಾಗೂ ಸ್ವಾಮೀಜಿಗಳ ನೇತೃತ್ವಜಲ್ಲಿ ಹೋರಾಟ ಮಾಡಿ ತುಮಕೂರು ಬಂದ್ ಆಚರಣೆ ಮಾಡಲಾಗಿತ್ತು. ಪೈಪ್‌ಲೈನ್ ಮುಖಾಂತರ ನೀರು ಬಿಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ವರದಿ ಬರುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ರಾತ್ರೋರಾತ್ರಿ ಜೆಸಿಬಿ ಯಂತ್ರಗಳ ಹಾಗೂ ಪೈಪ್‌ಲೈನ್ ತಂದು ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಸರಕಾರ, ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು.ತಾಂತ್ರಿಕ ಸಮಿತಿಯ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು.ವರದಿಯನ್ನು ಬಹಿರಂಗ ಪಡಿಸದೆ ಕಾಮಗಾರಿ ನಡೆಸುವುದು ತರವಲ್ಲ. ಅಲ್ಲದೆ ಯಾವುದೇ ಭೂ ಸ್ವಾಧೀನವಿಲ್ಲದೆ ರಸ್ತೆಯ ಪಕ್ಕ,ಕೆರೆಗಳ ಏರಿಗಳ ಮೇಲೆ ಪೈಫ್‌ಲೈನ್ ಕಾಮಗಾರಿ ನಡೆಸುತ್ತಿರುವುದು ಖಂಡನೀಯ.ರೈತರನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಮುಂದಾದರೆ,ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುಣಿಗಲ್ ಭಾಗಕ್ಕೆ ನೀರು ಹರಿಯುತ್ತಿಲ್ಲ ಎಂದು ಎಕ್ಸ್ ಪ್ರೆಸ್ ಕೆನಾಲ್ ಮಾಡಿದರೆ, ಉಳಿದ ತಾಲೂಕುಗಳಿಗೆ ನೀರು ಹರಿಯುವುದು ಬಹುತೇಕ ಸ್ಥಗಿತಗೊಳ್ಳಲಿದೆ.ಹೇಮಾವತಿ ಎಕ್ಸಪ್ರೆಸ್ ಕೆನಾಲ್ ಯೋಜನೆಯೇ ಅವೈಜ್ಞಾನಿಕವಾಗಿದ್ದು, ಸುಮಾರು 900 ಕ್ಕೂ ಹೆಚ್ಚು ಕೋಟಿರೂಗಳನ್ನು ಅನಗತ್ಯವಾಗಿ ಖರ್ಚು ಮಾಡಲಾಗುತ್ತಿದೆ. ಇದರ ಬದಲು ಆಧುನಿಕರಗೊಂಡಿರುವ ಮೂಲ ನಾಲೆಯ ಮೂಲಕವೇ ನಿಗಧಿತ ಪ್ರಮಾಣದ ನೀರು ಹರಿಸಲು ಅವಕಾಶವಿದೆ.ಹಾಗಾಗಿ ಯೋಜನೆಯನ್ನು ಕೈಬಿಡಬೇಕೆಂಬುದು ರೈತರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ ಎಂದು ಗೋವಿಂದರಾಜು ತಿಳಿಸಿದರು.
ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಎ.ಗೋವಿಂದರಾಜು, ರಾಜ್ಯ ಕಾರ್ಯದರ್ಶಿ ಬಸವರಾಜು, ಚಿಕ್ಕಬೋರೇಗೌಡ, ರವೀಶ್, ಹೆಚ್.ಟಿ.ಭೈರಪ್ಪ, ಸಾಗರನಹಳ್ಳಿ ವಿಜಯಕುಮಾರ್, ಕನ್ನಡ ಸೇನೆಯ ಧನಿಯಕುಮಾರ್, ಕಳ್ಳಿಪಾಳ್ಯ ಲೋಕೇಶ್, ವೆಂಕಟಾಚಲ, ಟಿ.ಹೆಚ್. ಭೈರಪ್ಪ, ಹೊಸಕೋಟೆ ನಟರಾಜು, ಕೆ.ಪಿ.ಮಹೇಶ್, ನಂಜೇಗೌಡ, ದಸಂಸ ಮುಖಂಡ ಪಿ.ಎನ್.ರಾಮಯ್ಯ, ಜಿ.ಪಂ. ಮಾಜಿ ಸದಸ್ಯೆ ಯಶೋಧಮ್ಮ, ಜಗದೀಶ್, ಎ. ಸುನೀಲ್, ರಾಮಲಿಂಗಯ್ಯ, ಶಬ್ಬೀರ ಅಹಮದ್, ರಾಮಚಂದ್ರರಾವ್, ಇಮ್ರಾನ್ ಅಹಮದ್, ರಫೀಕ್ ಅಹಮದ್, ಅಬ್ಬು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.