- ರುವಾಂಡದಲ್ಲಿ 20 ಸಾವಿರ ಜನರ ಸುರಕ್ಷಿತ ಸ್ಥಳಾಂತರ
- ಭಾರೀ ಮಳೆಗೆ ಭೂಮಿ ಕುಸಿದು 110 ಜನರಿಗೆ ಗಾಯ
ರುವಾಂಡ ದೇಶದಲ್ಲಿ ಈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದೆ. ಪರಿಣಾಮ ಸುಮಾರು 135 ಮಂದಿ ಮೃತಪಟ್ಟಿದ್ದಾರೆ.
ಭೂಕುಸಿತದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮುನ್ನೆಚ್ಚರಿಕೆಯಾಗಿ ಅಪಾಯ ವಲಯದ 20 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೇ ಮೊದಲ ವಾರದಲ್ಲಿ ದೇಶದ ಉತ್ತರ ಹಾಗೂ ದಕ್ಷಿಣ ಪ್ರಾಂತ್ಯಗಳಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಇದರಿಂದ ಭೂಕುಸಿತ ಸಂಭವಿಸಿದೆ.
“ಭೂಕುಸಿತದಲ್ಲಿ ಸುಮಾರು 110 ಜನರು ಗಾಯಗೊಂಡಿದ್ದಾರೆ. 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಂತ್ಯಗಳ ನಾನಾ ಪ್ರದೇಶಗಳಲ್ಲಿನ 5,963 ಮನೆಗಳು ಧ್ವಂಸಗೊಂಡ ಪರಿಣಾಮ ರುವಾಂಡದ 20 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ” ಎಂದು ತುರ್ತು ನಿರ್ವಹಣಾ ಇಲಾಖೆ ಶನಿವಾರ (ಮೇ 13) ತಿಳಿಸಿದೆ.
ರುವಾಂಡ ದೇಶದ ಅಧ್ಯಕ್ಷ ಪಾಲ್ ಕಗಾಮೆ ಅವರು ಅಧಿಕ ಮಳೆಯಿಂದ ಹಾನಿಗೊಳಗಾದ ರುಬಾವು ಜಿಲ್ಲೆಯ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಇಮ್ರಾನ್ ಖಾನ್ ಬಂಧನಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ; ಗಂಟೆಯೊಳಗೆ ಮಾಜಿ ಪ್ರಧಾನಿ ಹಾಜರುಪಡಿಸಿದ ಎನ್‌ಎಬಿ
ಮಳೆ, ಭೂಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದು ಅವರು ಹೇಳಿದರು.