ಬೆಂಗಳೂರಿನ ಹೆಣ್ಣೂರು ಸಮೀಪದ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳ ಪರಿಶೀಲನೆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಗತ್ಯ ಇರುವ ಎಲ್ಲ ಆಧುನಿಕ ವ್ಯವಸ್ಥೆ ಬಳಿಸಿ ಕಾರ್ಮಿಕರಿಗೆ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.
ಪರಿಶೀಲನೆ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕುಸಿದ ಕಟ್ಟಡದಿಂದ ಮೃತಪಟ್ಟ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ತಲಾ ₹3 ಲಕ್ಷ, ಬಿಬಿಎಂಪಿಯಿಂದ ತಲಾ ₹2 ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಇಲಾಖೆಗಳಿಂದಲೇ ಭರಿಸಲಾಗುವುದು” ಎಂದು ಘೋಷಿಸಿದರು.
“ನಿಯಮಬಾಹಿರವಾಗಿ, ಸೂಕ್ತ ಅನುಮತಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿಭಾಗೀಯ ಅಧಿಕಾರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು” ಎಂದು ಸಿಎಂ ಸೂಚಿಸಿದರು.
“ಅನಧಿಕೃತ ನಿರ್ಮಾಣ ನಿಲ್ಲಿಸುವಂತೆ ನೋಟಿಸ್ ನೀಡಿದ್ದರೂ ನಿರ್ಮಾಣ ಮುಂದುವರೆಸಿದ ಮಾಲೀಕರು, ಗುತ್ತಿಗೆದಾರ, ಎಂಜಿನಿಯರ್ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಆಗಬೇಕು” ಎಂದು ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ಸಿಎಂ ಸೂಚನೆ ನೀಡಿದರು.
ಸಚಿವ ಬೈರತಿ ಸುರೇಶ್, ಎಂ ಸಿ ಸುಧಾಕರ್, ಶಾಸಕ ಬೈರತಿ ಬಸವರಾಜ ಹಾಗೂ ಬಿಬಿಎಂಪಿ ಆಯುಕ್ತರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರದಿಂದ 2 ಲಕ್ಷ ರೂ. ಪರಿಹಾರ
ಬೆಂಗಳೂರಿನ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಧಾನಿ ಕಾರ್ಯಾಲಯ ಸಂದೇಶ ಪ್ರಕಟಿಸಿದೆ. ಮೃತ 8 ಜನರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದ್ದು, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮೃತ ಕಾರ್ಮಿಕರ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿ ಎಂದಿದ್ದಾರೆ. ಜತೆಗೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.