ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ, ಸಂತ ಹೊಸಪರ್ ಸಮುದಾಯ ಮತ್ತು ಆರೋಗ್ಯ ಕೇಂದ್ರ, ವಿಜಯಪುರ ಹಾಗೂ ವೀಣಾಧರಿ ಚೇತನ ವಿಶೇಷ ಬಾಧಿತರ ಒಕ್ಕೂಟ, ವಿಜಯಪುರ ಇವರ ಸಹಯೋಗದಲ್ಲಿ ವಿಶೇಷ ಬಾಧಿತರ ಬೆಂಬಲ ಸಭೆಯನ್ನು ನಡೆಸಲಾಯಿತು.
ಈ ಸಭೆಯನ್ನು ಉದ್ಘಾಟಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಡಾ.ಸಂಪತ್ ಗುಣಾರಿ ಮಾತನಾಡಿ, ವಿಜಯಪುರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್‌ಐವಿ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ ಮತ್ತು ಚಿಕಿತ್ಸೆ ಕೂಡಾ ಉಚಿತವಾಗಿ ನೀಡಲಾಗುತ್ತದೆ. ಹೆಚ್‌ಐವಿ ಪೀಡಿತರು ಸರ್ಕಾರದಿಂದ ಸಿಗುವ ಆರೋಗ್ಯ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರವು ಹೆಚ್‌ಐವಿ ಸೋಂಕಿತರ ಹಿತ ದೃಷ್ಟಿಯಿಂದ ಪ್ರತಿ ತಿಂಗಳು ದುಬಾರಿ ವೆಚ್ಚದ ಎ ಆರ್ ಟಿ ಮಾತ್ರೆಗಳನ್ನು ವಿತರಿಸುತ್ತಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್‌ಐವಿ ಸೋಂಕಿತರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸಿ ದಿನಾಲು ತಪ್ಪದೇ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ತಯಾರಿಸಿದ ಶುಚಿಯಾದ, ಪೌಷ್ಠಿಕ ಆಹಾರ ಸೇವನೆ ಮಾಡಿ ಯಾವುದೇ ಒತ್ತಡಕ್ಕೆ ಒಳಗಾಗದೇ ದಿನಾಲು ಕ್ರಿಯಾಶೀಲರಾಗಿ ಜೀವನ ಸಾಗಿಸಬೇಕು ಎಂದು ಹೆಚ್‌ಐವಿ ಬಾಧಿತರಿಗೆ ಹಾಗೂ ಪಿಡಿತರಿಗೆ ಡಾ. ಸಂಪತ್ ಗುಣಾರಿ ಆತ್ಮಸ್ಥೆರ್ಯ ತುಂಬಿದರು.

ಕರ್ನಾಟಕ ಸರ್ಕಾರ ಆಹಾರ ಇಲಾಖೆಗೆ ಸಂಬಂಧಿಸಿದ ಎಲ್ಲ ವ್ಯವಸ್ಥೆಯು ಕಂಪ್ಯೂಟರ್ ಮೂಲಕ ಮಾಡಲಾಗಿದೆ. ಆಹಾರ ಇಲಾಖೆಯ ಎಲ್ಲ ಸೇವೆ ಅಥವಾ ಸೌಲಭ್ಯವು ಎಲ್ಲರಿಗೂ ತಲುಪುವ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬವು ಆನ್ ಲೈನ್ ಅರ್ಜಿ ಸಲ್ಲಿಸಿ ರೇಶನ್ ಕಾರ್ಡ್ ಪಡೆಯಬಹುದಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಉಪ ಚುನಾವಣೆ | ಸಂಡೂರು, ಚನ್ನಪಟ್ಟಣಕ್ಕೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್: ಕಗ್ಗಂಟಾದ ಶಿಗ್ಗಾಂವಿ!
ಹೆಚ್‌ಐವಿ ಬಾಧಿತರಿಗೆ ವಿಶೇಷವಾಗಿ ಆಹಾರ ಇಲಾಖೆಯಲ್ಲಿ ಯಾವುದೇ ಸೌಲಭ್ಯವಿರುವುದಿಲ್ಲ. ಆದರೆ ಎಲ್ಲರೂ ಕೂಡ ರೇಶನ ಕಾರ್ಡ್ ಪಡೆದು ಪ್ರತಿ ವ್ಯಕ್ತಿಗೆ 5 ಕೆ ಜಿ ಆಹಾರ ಧಾನ್ಯ ಪಡೆದುಕೊಳ್ಳಬೇಕು ಎಂದು ವಿವರಿಸಿದರು. ಅದರಂತೆ ಇಂದಿನ ಸಭೆಯಲ್ಲಿ ರೇಶನ ಕಾರ್ಡಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಂಯೋಜಕಿ ಸಿಸ್ಟರ್ ಜಯಾ ಮೇರಿ, ವೀಣಾಧರಿ ಚೇತನ ವಿಶೇಷ ಬಾಧಿತರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶೈಲಾ ರೂಗಿ ಹಾಗೂ ಸಭೆಯಲ್ಲಿ 50ಕ್ಕೂ ಹೆಚ್ಚು ಹೆಚ್‌ಐವಿ ಬಾಧಿತರು ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶೃತಿ ನೀಡೊಣೆ ಮಾಡಿದರೆ, ಸುನೀತಾ ಮೋರೆ ಸ್ವಾಗತಿಸಿದರು.
