ತಾತ್ಕಾಲಿಕ ನೀರಿನ ಟ್ಯಾಂಕ್ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕಾರ್ಮಿಕ ಶಿಬಿರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯ ಪಿಂಪ್ರಿ ಚಿಂಚ್‌ವಾಡ್ ಟೌನ್‌ಶಿಪ್‌ನ ಭೋಸಾರಿ ಪ್ರದೇಶದಲ್ಲಿ ಕಾರ್ಮಿಕರು ತಾತ್ಕಾಲಿಕ ನೀರಿನ ಟ್ಯಾಂಕರ್‌ನ ಅಡಿಯಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೀರಿನ ಒತ್ತಡದಿಂದಾಗಿ ನೀರಿನ ಟ್ಯಾಂಕ್‌ನ ಗೋಡೆ ಸ್ಫೋಟಗೊಂಡಿದ್ದು, ಟ್ಯಾಂಕ್ ಕುಸಿದು ಬಿದ್ದಿದೆ ಎಂದು ಪಿಂಪ್ರಿ ಚಿಂಚ್‌ವಾಡ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ವಸಂತ ಪರದೇಶಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಮಾದಕ ವಸ್ತು ನೀಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಐವರ ಬಂಧನ
ಇನ್ನು ನೀರಿನ ಟ್ಯಾಂಕ್‌ನಡಿಯಲ್ಲಿ ಸ್ನಾನ ಮಾಡುತ್ತಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ಅವಘಡದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
