ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ನಾನೂ ನೋಡ್ತೀನಿ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ವರ್ ಅವರು ಜಯಗಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಯೋಗೀಶ್ವರ್ ಪರ ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೆರೆಗಳಿಗೆ ಜೀವದಾನ ಮಾಡಿದ ಯೋಗೀಶ್ವರ್ ಅಭಿವೃದ್ಧಿ ಪರವಾಗಿ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು ಕಾಂಗ್ರೆಸ್ಸಿಗೆ ಮರಳಿದ್ದಾರೆ. ಇವರನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಯೋಗೀಶ್ವರ್ ಗೆಲ್ಲುವ ಮೂಲಕ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿಗೆ ಮರು ಚಾಲನೆ ನೀಡುತ್ತೇವೆ” ಎಂದು ತಿಳಿಸಿದರು.
“ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಬಿಜೆಪಿ ಒಕ್ಕೂಟದಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಶ್ರೀಮತಿ ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಯೋಗೀಶ್ವರ್ ಅವರೇ ಭರ್ಜರಿ ಜಯಗಳಿಸೋದು ಖಚಿತ” ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ
ಚನ್ನಪಟ್ಟಣಕ್ಕೆ 500 ಕೋಟಿ ಅನುದಾನ: ಡಿ ಕೆ ಶಿವಕುಮಾರ್
“ಚನ್ನಪಟ್ಟಣಕ್ಕೆ ಹೊಸರೂಪವನ್ನು ನೀಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಕರ್ನಾಟಕದ ಅಭಿವೃದ್ದಿಯೇ ನಮ್ಮ ಸಂಕಲ್ಪ. ಈ ಗುರಿಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಚನ್ನಪಟ್ಟಣದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಸುಮಾರು 500 ಕೋಟಿ ಅನುದಾನ ನೀಡಲಾಗಿದೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
“ಎರಡು ಬಾರಿ ಸಿಎಂ ಆಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಕೊಡುಗೆ ಏನು ಎನ್ನುವ ಪಟ್ಟಿಯನ್ನು ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ. ಕ್ಷೇತ್ರದ ಅಭಿವೃದ್ದಿಗೆ ಅವರ ಸಾಕ್ಷಿ ಗುಡ್ಡೆಯನ್ನು ಜನರ ಮುಂದಿಡಲಿ” ಎಂದು ಸವಾಲು ಹಾಕಿದರು.
“ಶುಭ ಘಳಿಗೆಯಲ್ಲಿ ಯೋಗೇಶ್ವರ್ ಪಕ್ಷ ಸೇರಿದ್ದಾರೆ. ಇವರ ಕೈ ಬಲಪಡಿಸುವುದರ ಮೂಲಕ ದೇಶಕ್ಕೆ ಬಲವಾದ ಸಂದೇಶ ನೀಡಬೇಕು. ಅತಿ ಹೆಚ್ಚು ಮತಗಳ ಅಂತರದಿಂದ ಇವರನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಸಚಿವರಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಮಾಜಿ ಸಚಿವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಮಾಜಿ ಸಂಸದರಾದ ಡಿ.ಕೆ.ಸುರೇಶ್ ಸೇರಿ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.