ಬದಲಾದ ಕಾಲಮಾನದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಕೊಳೆಯುವ ಹಂತಕ್ಕೆ ತಲುಪಿದೆ. ಬೆಳೆ ಕೈಸೇರುವ ಕಾಲದಲ್ಲಿ ವಿಪರೀತ ಮಳೆಯಿಂದ ಬೆಳೆ ಹಾನಿಗೊಳಗಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಮಳೆಯಿಂದ ರಾಜ್ಯದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ರೈತಾಪಿ ವರ್ಗ ತತ್ತರಿಸಿ ಹೋಗಿದೆ. ರೈತರು ಬೆಳೆದ ಬೆಳೆಗಳು ಹೊಲದಲ್ಲೇ ಕೊಳೆಯುತ್ತಿವೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬೆಳೆಯು ರೈತನ ಕೈ ಸೇರುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಬೆಳೆ ಜಮೀನಿನಲ್ಲಿಯೇ ಹಾಳಾಗುತ್ತಿದೆ. ಕೊಯ್ಲಿಗೆ ಬಂದಿರುವ ಹೂವು, ಹಣ್ಣು, ತರಕಾರಿಗಳು ಕೊಳೆಯುತ್ತಿವೆ. ಟೊಮ್ಯಾಟೋ, ಸೇವಂತಿಗೆ, ಚೆಂಡು ಹೂವು, ಶೇಂಗಾ(ಕಡಲೆಕಾಯಿ), ರಾಗಿ, ಮೆಕ್ಕೆ ಜೋಳ, ತೊಗರಿ ಮಳೆಯ ಹೊಡೆತಕ್ಕೆ ಸಿಲುಕಿ ನಾಶವಾಗುತ್ತಿದೆ.
ಟೊಮ್ಯಾಟೋ ಹಣ್ಣು, ಸೇವಂತಿಗೆ, ಚೆಂಡು ಹೂವು ಬೆಳೆದಿರುವ ರೈತರು ಸ್ಥಿತಿ ಹೇಳದಾಗಿದೆ. ಮಳೆಯಿಂದ ಟೊಮ್ಯಾಟೋ ಗಿಡಗಳಿಗೆ ಎಲೆ ಚುಕ್ಕಿ ರೋಗ, ಕಾಯಿ ಚುಕ್ಕಿ ರೋಗ ಬರುತ್ತಿದೆ. ಇದರಿಂದ ಕಾಯಿ ಕೊಳೆಯುತ್ತಿವೆ. ಚೆಂಡು ಹೂವು ಜಮೀನಿನಲ್ಲೇ ಕೊಳೆತು ಹೋಗುತ್ತಿದೆ. ಅರ್ಧ ಭಾಗ ಹೂವು, ತರಕಾರಿ ಮಾರುಕಟ್ಟೆಗೆ ಹೋದರೆ, ಉಳಿದದ್ದು ಹೊಲದಲ್ಲೇ ಹಾಳಾಗುತ್ತಿದೆ. ಇದರಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈಸೇರದಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂಬುದು ಹೂವು, ತರಕಾರಿ ಬೆಳೆಗಾರರ ಅಳಲು.

ಮುಂಗಾರು ಹಂಗಾಮಿನ ಮಳೆಯಾಶ್ರಿತ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಬಯಲುಸೀಮೆ ರೈತರ ಕೈಹಿಡಿಯುತ್ತಿಲ್ಲ. ಈಗಾಗಲೇ ಶೇಂಗಾ ಗಿಡಗಳನ್ನು ಕಿತ್ತಿರುವ ಕೆಲ ರೈತರು, ಮಳೆಯ ಕಾರಣ ಕಡಲೆಕಾಯಿ ಬಳ್ಳಿಯನ್ನು ಇನ್ನೂ ಹೊಲದಲ್ಲೇ ಬಿಟ್ಟಿದ್ದು, ಕಡಲೆಕಾಯಿ ಬಿಡಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಕಡಲೆಕಾಯಿ ಬಳ್ಳಿಯಂತೂ ಮಳೆಯಿದ ಬಹುತೇಕ ಕೊಳೆತು ಹೋಗಿದ್ದು, ಹಸುಗಳಿಗೆ ಕಡಲೆಕಾಯಿ ಬಳ್ಳಿ ಮೇವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಶೇಂಗಾ ಬೆಳೆಗಾರರು ಕಂಗಾಲಾಗಿದ್ದಾರೆ.

ಬಾಗೇಪಲ್ಲಿ ತಾಲ್ಲೂಕು ಬಿಳ್ಳೂರ ನಲಸಾನಂಪಲ್ಲಿ ಗ್ರಾಮದ ಬಿ.ವಿ.ವೆಂಕಟರವಣ ಶೇಂಗಾ ಪ್ರಮುಖವಾಗಿ ಬೆಳೆಯಲಾಗುತ್ತಿದೆ.
ಪ್ರಸಕ್ತ ವರ್ಷ ಮಳೆ ನಿರೀಕ್ಷೆ ಮೀರಿ ಸುರಿದಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾದರೂ ರೈತರಲ್ಲಿ ಖುಷಿ ಇಲ್ಲ. ಶೇಂಗಾ ಬೆಳೆಗೆ ಮಳೆಯಿಂದ ಪ್ರಯೋಜನವಾಗಿಲ್ಲ. ಅಗತ್ಯ ಇರುವಾಗ ಕೈಕೊಟ್ಟ ಮಳೆ, ಬೆಳೆ ಕೈಸೇರುವ ಹಂತದಲ್ಲಿ ಅತಿಯಾಗಿ ಸುರಿದು ಸಂಪೂರ್ಣ ನಾಶ ಮಾಡಿದೆ ಎಂಬ ಕೊರಗು ರೈತರಲ್ಲಿದೆ. ಶೇಂಗಾ ಬಿತ್ತನೆಯ ಸಹವಾಸವೇ ಸಾಕು ಎನ್ನುವಷ್ಟು ರೈತರು ಹೈರಾಣಾಗಿದ್ದಾರೆ.
ರೈತ ಬಿ.ವಿ.ವೆಂಕಟರಮಣ ಮಾತನಾಡಿ, 5 ಎಕರೆ ಜಮೀನಿನಲ್ಲಿ ಶೇಂಗಾ ಬೆಳೆಗಳನ್ನು ಬೆಳೆದಿದ್ದೇವೆ. ಇನ್ನೇನು ಬೆಳೆಯನ್ನು ಕಟಾವು ಮಾಡಿ ಮನೆಗೆ ತರಬೇಕು ಎನ್ನುವಷ್ಟರಲ್ಲಿ ಮಳೆ ಆರಂಭವಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ರೈತರ ಬದುಕು ಮೂರಾಬಟ್ಟೆಯಾಗಿದೆ ಎಂದು ಹೇಳಿದರು.
ಕೆಲ ರೈತರು ಕಟಾವು ಮಾಡಿದರೆ, ಇನ್ನೂ ಕೆಲ ರೈತರು ಜಮೀನಿನಲ್ಲಿ ಬಿಟ್ಟಿದ್ದರು. ಆದರೆ, ಸತತ ಮಳೆಗೆ ಶೇಂಗಾ ಬೆಳೆ ಕೊಳೆತು ಹೋಗಿದೆ. ಸಾಲಸೋಲ ಮಾಡಿ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಮಳೆಗೆ ಬೆಳೆದಿದ್ದ ಬೆಳೆ ಕಣ್ಣೆದುರೆ ನಾಶದ ಅಂಚಿಗೆ ಬಂದಿದೆ. ಹಾಗಾಗಿ, ಮಳೆಯಿಂದ ರೈತರಿಗೆ ಉಂಟಾದ ಬೆಳೆ ಹಾನಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.