ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ನಡೆಯಿತು.
‘ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
1824 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟೀಷರ ವಿರುದ್ದ ಹೋರಾಟ ನಡೆಸಿ ಇಂದಿಗೆ 200 ವರ್ಷ ಘಟಿಸಿದೆ. ಚೆನ್ನಮ್ಮ ಜೊತೆ ಸಂಗೊಳ್ಳಿರಾಯಣ್ಣ ಸಹ ಹೋರಾಡಿದ್ದರು. ಪ್ರತಿ ದಿನ ಪ್ರತಿ ಕ್ಷಣ ಅವರ ನೆನಪು ಇರಬೇಕು. ನೆನಪಷ್ಟೇ ಅಲ್ಲದೆ ಅವರ ಜೀವನ ಸಂದೇಶವನ್ನು ಪಾಲಿಸಬೇಕು. ಆಗ ಅವರ ಕನಸು ನನಸಾಗುತ್ತದೆ ಎಂದರು.
ಮಲೆ ಮಹೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಭರತ ಖಂಡದ ಸ್ವಾಭಿಮಾನದ ಪ್ರತೀಕ. ದೇಶಕ್ಕೆ ದಿಕ್ಸೂಚಿ ತೋರಿಸಿದ್ದಾರೆ. ಈ ದಿಕ್ಸೂಚಿಯಡಿ ನಾವೆಲ್ಲರೂ ನಡೆಯಬೇಕು. ಹುಟ್ಟು ಆಕಸ್ಮಿಕ, ಸಾವು ಖಚಿತ ಎಂಬಂತೆ ಬದುಕು ಹೇಗಿರಬೇಕು ಎಂದರೆ ನಮ್ಮ ಬಗ್ಗೆ ಬೇರೆಯವರು ಬರೆದಿಡಬೇಕು. ‘ಧೈಯಂ ಸರ್ವತ್ರ ಸಾಧನಂ’ ಎಂಬಂತೆ 1824ರಲ್ಲಿ ಬ್ರಿಟೀಷರ ವಿರುದ್ದ ದೇಶಕ್ಕಾಗಿ ಹೋರಾಡಿದರು. ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲುದು ಎಂಬುದನ್ನು ಕಿತ್ತೂರು ರಾಣಿ ಚೆನ್ನಮ್ಮ ಅವರು ಸಾಬೀತುಪಡಿಸಿದರು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಅವರು ನಿರಂತರ ಕತ್ತಿವರಸೆ, ಬಿಲ್ಲುಗಾರಿಕೆ ತರಬೇತಿ ಪಡೆದಿದ್ದರು. ನಿರಂತರವಾದ ಒಳ್ಳೆಯ ಅಭ್ಯಾಸಗಳು ನಮ್ಮನ್ನು ಉತ್ತಮಗೊಳಿಸುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು 1778 ರ ಅಕ್ಟೋಬರ್, 23 ರಂದು ಅಂದಿನ ಅಖಂಡ ಧಾರಾವಾಡದ (ಇಂದಿನ ಬೆಳಗಾವಿ ಜಿಲ್ಲೆಯ) ಕಾಕತಿ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಹಸ, ಶೌರ್ಯ, ಧೈರ್ಯ, ದೇಶಪ್ರೇಮದ ಪ್ರತಿರೂಪ. ಕನ್ನಡದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರಂತೆ ಎಲ್ಲರೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಇದನ್ನು ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆ | ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾದ ನಿಖಿಲ್ ಕುಮಾರಸ್ವಾಮಿ
ಬ್ಲಾಸಂ ಶಾಲೆಯ ಮುಖ್ಯ ಶಿಕ್ಷಕಿ ಅನಸೂಯ ಮಾತನಾಡಿ, ಕಿತ್ತೂರು ಚೆನ್ನಮ್ಮನವರು ತಮ್ಮ ಪತಿಯ ಮರಣದ ನಂತರ ಕಿತ್ತೂರು ರಾಣಿ ಚೆನ್ನಮ್ಮ ರಾಣಿಯಾಗುತ್ತಾರೆ. ಬ್ರಿಟೀಷರ ವಿರುದ್ದ ಕನ್ನಡದ ಮಹಿಳೆ ಹೋರಾಡಿ ಭಾರತದ ನಾರಿಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರನ್ನು ದೇಶದಾದ್ಯಂತ ಸ್ಮರಿಸುವಂತಾಗಬೇಕು ಎಂದರು.
ಅನೂಪ್ ಮಾದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಕುಮಾರ್, ಭವ್ಯ, ಮಣಜೂರು ಮಂಜುನಾಥ್ ಇದ್ದರು.
