ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಗುರುವಾರ ಎರಡನೇ ಬಾರಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಗೆ ಗೈರಾಗಿದ್ದಾರೆ. ಕೊನೆಗೆ ಸಮಿತಿಯು ಸಭೆಯನ್ನು ಮುಂದೂಡಿದೆ.
“ಕೆಲವು ಕಾರಣಗಳಿಂದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಬುಚ್ ಅವರು ಬೆಳಿಗ್ಗೆ ಸಮಿತಿಗೆ ತಿಳಿಸಿದರು” ಎಂದು ಪಿಎಸಿ ಅಧ್ಯಕ್ಷ ಕೆ ಸಿ ವೇಣುಗೋಪಾಲ್ ಹೇಳಿದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಖ್ಯಸ್ಥ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, “ಸಮಿತಿಯ ಮೊದಲ ಸಭೆಯಲ್ಲಿ ನಾವು ನಮ್ಮ ನಿಯಂತ್ರಣ ಸಂಸ್ಥೆಗಳ ಪರಿಶೀಲನೆಯ ಬಗ್ಗೆ ಸ್ವಯಂಪ್ರೇರಿತ ನಿರ್ಧಾರ ಮಾಡಿದೆವು. ಅದಕ್ಕಾಗಿಯೇ ನಾವು ಸೆಬಿಗೆ ಸಭೆಗೆ ಹಾಜರಾಗಲು ತಿಳಿಸಿದ್ದೇವೆ. ಸಮಿತಿಯ ಶಾಖೆಯು ಸಂಬಂಧಪಟ್ಟವರಿಗೆ ನೋಟಿಸ್ ಕಳುಹಿಸುತ್ತದೆ. ಮೊದಲನೆಯದಾಗಿ, ಅವರು ಸಭೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿದರು. ನಾವು ಅದನ್ನು ನಿರಾಕರಿಸಿದೆವು. ಅದಾದ ಬಳಿಕ ಅವರು ಮತ್ತು ಅವರ ತಂಡ ಸಭೆಗೆ ಹಾಜಾರಾಗುವುದಾಗಿ ಖಚಿತಪಡಿಸಿದ್ದರು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಸೆಬಿ ಅಧ್ಯಕ್ಷೆ ವಿರುದ್ಧ ಲೋಕಪಾಲ್‌ಗೆ ದೂರು ನೀಡಿದ ಸಂಸದೆ ಮಹುವಾ ಮೊಯಿತ್ರಾ
“ಇಂದು ಬೆಳಿಗ್ಗೆ 9:30ಕ್ಕೆ ಅವರು ದೆಹಲಿಗೆ ಪ್ರಯಾಣಿಸುವ ಸ್ಥಿತಿಯಲ್ಲಿಲ್ಲ ಎಂದು ನನಗೆ ತಿಳಿಸಿದರು. ಮಹಿಳೆಯೊಬ್ಬರ ಮನವಿಯಾದ ಕಾರಣ ನಾವು ಅದನ್ನು ಪರಿಗಣಿಸಿ ಸಭೆಯನ್ನು ಇನ್ನೊಂದು ದಿನಕ್ಕೆ ಮುಂದೂಡುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.
ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಕಳೆದ ವರ್ಷ ಬಹಿರಂಗಪಡಿಸಿದ್ದ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ 2024ರ ಆಗಸ್ಟ್ 10ರಂದು ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಸ್ಪೋಟಕ ವರದಿಯನ್ನು ಬಹಿರಂಗಪಡಿಸಿದೆ.
ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಹಿಂಡನ್‌ಬರ್ಗ್ ಆರೋಪಿಸಿದೆ. ಆದರೆ ಈ ಆರೋಪವನ್ನು ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಅಲ್ಲಗಳೆದಿದ್ದಾರೆ.
ಇದನ್ನು ಓದಿದ್ದೀರಾ? ಮಾಧವಿ ಬುಚ್ ವಿರುದ್ಧ ತಿರುಗಿಬಿದ್ದ ಸೆಬಿ ಉನ್ನತಾಧಿಕಾರಿಗಳು
ಇವೆಲ್ಲವುದರ ನಡುವೆ ಸದ್ಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪ್ರಸ್ತುತ ಸೆಬಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸುತ್ತಿದೆ. ಸಮಿತಿಯ ಮುಂದೆ ಹಾಜರಾಗುವಂತೆ ಬುಚ್‌ಗೆ ಸಮನ್ಸ್ ನೀಡಲಾಗಿದೆ. ಸಭೆಗೆ ಹಾಜರಾಗದ ಕಾರಣ ಸಭೆ ಮುಂದೂಡಲಾಗಿದೆ.
ಆದರೆ ಪಿಎಸಿ ಸಭೆಯನ್ನು ಮುಂದೂಡಿದ ನಂತರ, ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅವರು ವೇಣುಗೋಪಾಲ್ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
