ತುರುವೇಕೆರೆ | ಮೂಲಭೂತ ಸೌಲಭ್ಯಗಳ ಕೊರತೆ : ಕರ ನಿರಾಕರಣೆಗೆ ಡಿ.ಹೊಸಳ್ಳಿ ಗ್ರಾಮಸ್ಥರ ನಿರ್ಧಾರ

Date:

Advertisements

 ಸ್ವಾತಂತ್ರ ಬಂದು7 ದಶಕಗಳನ್ನು  ಕಳೆದರೂ ಸಹ ನಮ್ಮೂರಿಗೆ ಇನ್ನೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ನಮ್ಮೂರಲ್ಲಿ ಚರಂಡಿ ಇಲ್ಲ, ರಸ್ತೆ ಇಲ್ಲ, ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲ, ಮನೆ ಗಳಿಗೆ ನೀರಿನ ಸೌಕರ್ಯವಿಲ್ಲ. ಇ-ಖಾತೆ ಮಾಡಿಕೊಡಿ ಎಂದರೆ ಇಲ್ಲದ ಸಬೂಬು ಹೇಳ್ತಾರೆ. ಹಾಗಾಗಿ ನಾವು ಗ್ರಾಮ ಪಂಚಾಯಿಗೆ ಮುಂಬರುವ ದಿನಗಳಲ್ಲಿ ತೆರಿಗೆ (ಕರ) ಕಟ್ಟೋದೇ ಇಲ್ಲ ಎಂದು ತಾಲೂಕಿನ ದಂಡಿನಶಿವರ ಬಳಿ ಇರುವ ಡಿ.ಹೊಸಳ್ಳಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

 ಡಿ.ಹೊಸಳ್ಳಿ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಂ ಸಮುದಾಯದವರು ಬಹಳ ಅನ್ಯೋನ್ಯವಾಗಿ ಜೀವಿಸುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳ ಹಿಂದೆಯೇ ತಾಲೂಕು ಆಡಳಿತದ ವತಿಯಿಂದ ಇಲ್ಲಿಯ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿದೆ ಅಲ್ಲದೇ ಮನೆ ನಿರ್ಮಾಣಕ್ಕೆಂದು ಸಹಾಯ ಧನವನ್ನೂ ಸಹ ನೀಡಲಾಗಿದೆ. 

1000581372

 ಇಲ್ಲಿರುವ ಬಹುಪಾಲು ಮಂದಿ ಕೂಲಿನಾಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿರುವವರೇ ಆಗಿದ್ದಾರೆ. ಇಲ್ಲಿಯ ಜನರು ತಮಗೆ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯ ಅಮ್ಮಸಂದ್ರ ಗ್ರಾಮ ಪಂಚಾಯಿತಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೇ ವಂಚಿಸಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

Advertisements

 ಗ್ರಾಮದ ತುಂಬೆಲ್ಲಾ ಗದ್ದೆಯಂತಿರುವ ರಸ್ತೆಗಳು, ಚರಂಡಿ ಎಂಬುದು ಇಲ್ಲವೇ ಇಲ್ಲ. ಸರ್ಕಾರಿ ಶಾಲೆ ಇದೆ. ಆದರೆ ಅದರ ಮುಂಭಾಗ ಸಂಪೂರ್ಣ ಕೊಚ್ಚೆಯಿಂದ ಕೂಡಿದ ಜಾಗವಿದೆ. ಮಕ್ಕಳು ಶಾಲೆಗೆ ಬರಲೂ ಆಗದ ಸ್ಥಿತಿ ಇದೆ. ಜನರು ಕಷ್ಟವೋ, ಸುಖವೋ ಮನೆಯನ್ನು ಕಟ್ಟಿಕೊಂಡಿದ್ದಾರೆ. ಆದರೆ ಈ ಮನೆಗಳಿಗೆ ಇ- ಸ್ವತ್ತು ಮಾಡಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರಣ ಇಲ್ಲಿ ವಾಸಿಸುತ್ತಿರುವ ಮನೆಗಳು ಗೋಮಾಳದಲ್ಲಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಜಾಗಗಳನ್ನು ಕೊಟ್ಟಿರುವವರು ಅದೇ ಗ್ರಾಮ ಪಂಚಾಯ್ತಿಯವರು. ಮನೆ ಕಟ್ಟಲು ಸಹಾಯ ಧನ ನೀಡಿರುವವರೂ ಸಹ ಗ್ರಾಮ ಪಂಚಾಯ್ತಿಯವರೇ. ಈಗ ಮನೆಗಳಿಗೆ ಇ- ಸ್ವತ್ತು ಅಥವಾ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

 ಇಲ್ಲಿಯ ನಿವಾಸಿಗಳ ಮನೆಗಳಿಗೆ ತೆರಳಲು ರಸ್ತೆಯೇ ಇಲ್ಲ. ಇವರು ಕೊಚ್ಚೆಯಲ್ಲೇ ನಡೆದುಕೊಂಡು ಹೋಗಬೇಕಿದೆ. ಸರಿಯಾದ ವಿದ್ಯುತ್ ಸೌಕರ್ಯವಿಲ್ಲ. ಗ್ರಾಮದ ತುಂಬಾ ಗಿಡಗಂಟೆಗಳು ಆಳೆತ್ತರಕ್ಕೆ ಬೆಳೆದು ನಿಂತಿದೆ. ವಿಷಜಂತುಗಳ ಕಾಟದಲ್ಲಿ ದಿನವಿಡೀ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

1000583918

 ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಹಾಗಾಗಿ ಶೀಘ್ರವಾಗಿ ಅಂಗನವಾಡಿ ಕೇಂದ್ರವನ್ನು ತೆರೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 ತುರುವೇಕೆರೆ ತಾಲೂಕಿನಲ್ಲಿ ಇರುವ ಏಕೈಕ ಕೈಗಾರಿಕೆ ಎಂದರೆ ಅದು ಸಿಮೆಂಟ್ ಕಾರ್ಖಾನೆ. ಈ ಕಾರ್ಖಾನೆಗೆ ಸಮೀಪದಲ್ಲೇ ಈ ಗ್ರಾಮವೂ ಇದೆ. ಸಹಸ್ರಾರು ಕೋಟಿ ವ್ಯವಹರಿಸುವ ಈ ಕಾರ್ಖಾನೆಗೆ ಹಾಗೂ ಅಲ್ಲಿಯ ಕಾರ್ಮಿಕರಿಗೆ ಈ ಗ್ರಾಮದಿಂದಲೇ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕಾರ್ಖಾನೆಯ ಸಿ ಎಸ್ ಆರ್ ಹಣದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡಬಹುದು. ಆದರೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸದಸ್ಯರಿಗೆ ಇಚ್ಚಾಶಕ್ತಿಯ ಕೊರತೆ ಇರುವುದರಿಂದ ಇದು ಸಾಧ್ಯವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

 ಡಿ.ಹೊಸಳ್ಳಿ ಗ್ರಾಮದಲ್ಲಿರುವ ಮನೆಗಳಿಗೆ ಇ ಸ್ವತ್ತು ನೀಡಲು ಇಲ್ಲದ ಸಬೂಬು ಹೇಳುವ ಅಧಿಕಾರಿಗಳು ಗ್ರಾಮದ ಕೆಲವು ಮನೆಗಳಿಗೆ ಇ ಸ್ವತ್ತು ನೀಡಿದ್ದಾರೆ. ಅಲ್ಲದೇ ಕೆಲವು ಕಡೆ ಸಿಮೆಂಟ್ ರಸ್ತೆಯನ್ನೂ ಸಹ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. 

  ಗ್ರಾಮದಲ್ಲಿ ಶುಚಿತ್ವ ಎಂಬುದು ಇಲ್ಲವೇ ಇಲ್ಲ. ಗ್ರಾಮ ಸಂಪೂರ್ಣ ಕೊಳಚೆ ಮತ್ತು ಗಿಡಗಂಟೆಗಳಿಂದ ತುಂಬಿರುವುದರಿಂದ ಸೊಳ್ಳೆಗಳ ಕಾಟ ಅಧಿಕವಾಗಿದೆ. ಇಲ್ಲಿಯ ಜನರು ವಿವಿಧ ರೋಗರುಜಿನಗಳಿಂದ ಬಳಲುತ್ತಿದ್ದಾರೆ. ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಇದನ್ನು ವಿರೋಧಿಸಿ ಡಿ.ಹೊಸಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ತೆರಿಗೆ ಕಟ್ಟುವುದಿಲ್ಲ ಅಲ್ಲದೇ ಮುಂಬರುವ ಯಾವುದೇ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡಲಾಗುವುದು ಎಂದು ತೀರ್ಮಾನಿಸಿದ್ದಾರೆ. 

1000583924

 ಡಿ.ಹೊಸಳ್ಳಿ ಗ್ರಾಮಕ್ಕೆ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೆಂದು ಆಗ್ರಹಿಸಿ ಅಮ್ಮಸಂದ್ರ ಗ್ರಾಮ ಪಂಚಾಯ್ತಿಯ ಮುಂಭಾಗ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು. ಇದಕ್ಕೂ ಬಗ್ಗದಿದ್ದಲ್ಲಿ ರಸ್ತೆ ತಡೆ ಮಾಡುವ ಮೂಲಕ ತಾಲೂಕು ಆಡಳಿತದ ಗಮನಕ್ಕೆ ತರಲಾಗುವುದು ಎಂದು ಡಿ.ಹೊಸಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಅಮ್ಮಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಇದೊಂದು ನಿಷ್ಪ್ರೋಯೋಜಕ ಪಂಚಾಯ್ತಿ ಆಗಿರುವುದರಿಂದ ಕೂಡಲೇ ಈ ಪಂಚಾಯ್ತಿಯನ್ನು ಸೂಪರ್ ಸೀಡ್ ಮಾಡಿ ಎಂದು  ಜಿಲ್ಲಾ ಪಂಚಾಯ್ತಿಯ ಸಿಇಓ ರವರಿಗೆ ಮನವಿ ಮಾಡಿಕೊಂಡಿರುವುದಾಗಿ ಪಂಚಾಯ್ತಿಯ ಸದಸ್ಯ ಸಿದ್ದಗಂಗಯ್ಯ ತಿಳಿಸಿದ್ದಾರೆ. 

 ಗ್ರಾಮದ ಮುಖಂಡರಾದ ಯೋಗೀಶ್, ಕರಿಯಪ್ಪ, ಶಕೀಲಾಬಾನು, ಮಂಗಳಮ್ಮ, ಮಮತಾ, ವಿಶ್ವನಾಥ್, ಜೀನತ್ ಉನ್ನಿಸ್ಸಾ, ಮುನಿರಾಬಾನು ಸೇರಿದಂತೆ ಹಲವಾರು ಮಂದಿ ತಮಗಾಗುತ್ತಿರುವ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ತೆರೆದಿಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X