ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಬಹುಮತದೊಂದಿಗೆ ಜಯಭೇರಿ ಸಾಧಿಸಿದ ಬೆನ್ನಲ್ಲೇ ಮೈಸೂರಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಅಡ್ಡಂಡ ಕಾರ್ಯಪ್ಪ ಮೈಸೂರಿನ ರಂಗಾಯಣದ ನಿರ್ದೇಶಕರಾದ ಮೇಲೆ ಸದಾ ಒಂದಿಲ್ಲ ಒಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದ್ದರು. ವಿಶೇಷವಾಗಿ ಕಾಂಗ್ರೆಸ್ ಮತ್ತು ಒಂದು ಕೋಮು ವಿರುದ್ಧ ವಿವಾದಗಳನ್ನು ಸೃಷ್ಟಿಸಿದ್ದರು.
‘ಟಿಪ್ಪು ನಿಜಕನಸುಗಳುʼ ನಾಟಕ ರಚಿಸಿ ಒಂದು ಕೋಮುವನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿ ವಿವಾದ ಸೃಷ್ಟಿಸಿದ್ದರು. ನಂತರ ‘ಸಿದ್ದರಾಮಯ್ಯ ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಮುಂದಾದಾಗ ತೀವ್ರ ಟೀಕೆಗೆ ಗುರಿಯಾಗಿದ್ದರು. ಚುನಾವಣೆ ಮುನ್ನ ಉರಿಗೌಡ ಮತ್ತು ನಂಜೇಗೌಡ ಪಾತ್ರಗಳನ್ನು ಹರಿಯಬಿಟ್ಟು ಒಕ್ಕಲಿಗ ಮತ್ತು ಮುಸ್ಲಿಂರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈಹಾಕಿರುವ ಆರೋಪ ಎದುರಿಸಿದ್ದರು.
ಒಕ್ಕಲಿಗ ಸಮುದಾಯದ ನಿರ್ಮಲಾನಂದನಾಥ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಮೇಲೆ ಸ್ವಾಮೀಜಿ ಅವರ ಕ್ಷಮೆ ಕೋರಿದ್ದರು.
ಇತ್ತೀಚೆಗೆ ಮಡಿಕೇರಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿದ ಆರೋಪದ ಮೇರೆಗೆ ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿತ್ತು.
ಅದಕ್ಕೂ ಮುನ್ನ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ಮೇ 4ರಂದು ಬಿಜೆಪಿ ಪ್ರಚಾರ ಸಭೆಯಲ್ಲಿ ಕಾರ್ಯಪ್ಪ ಅವರು ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕದಡಿ, ಶತ್ರುತ್ವ ಉಂಟು ಮಾಡುವ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ಸ್ಥಳದಲ್ಲಿದ್ದ ಕ್ಷಿಪ್ರ ಪರಿಶೀಲನಾ ತಂಡದ ಅಧಿಕಾರಿ ಕುಮಾರಸ್ವಾಮಿ ದೂರು ನೀಡಿದ್ದರು.
ಹಾಗೆಯೇ ‘ಫೇಸ್‌ಬುಕ್ ಖಾತೆಯಲ್ಲಿ ಮತೀಯ ಸಂಘರ್ಷ ಉಂಟು ಮಾಡುವ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಏಪ್ರಿಲ್ 26ರಂದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.