- ಮುಖ್ಯಮಂತ್ರಿ ಪಟ್ಟಕ್ಕೆ ಸಂಬಂಧಿಸಿ ಮಠಾಧೀಶರ ಫರ್ಮಾನು
- ಕಾಂಗ್ರೆಸ್ ಸಭೆಯ ನಡುವೆ ಸ್ವಾಮೀಜಿಗಳ ನಿರ್ಧಾರ ಪ್ರಕಟ
ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಲಾಭಿಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದು, ಮುಖ್ಯಮಂತ್ರಿ ಆಯ್ಕೆಗೆ ಶಾಂಗ್ರಿಲಾ ಹೋಟೆಲ್‌ನಲ್ಲಿ ಸಭೆ ಸೇರಿದ್ದಾರೆ. ಈ ನಡುವೆ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.
“ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಾಗ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುವ ಸಂಪ್ರದಾಯವಿದೆ. ಅದನ್ನು ಈಗಲೂ ಪಾಲಿಸುವಂತೆ ಆಗಲಿ. ಆ ಸಂಪ್ರದಾಯ ಮುರಿಯಬಾರದು” ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
“ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಹಗಲು- ರಾತ್ರಿ ಎನ್ನದೇ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಅವರನ್ನೇ ಮುಖ್ಯಮಂತ್ರಿ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೊಳ್ಳೇಗಾಲ | ಸ್ವಾಭಿಮಾನದ ಕ್ಷೇತ್ರದಲ್ಲಿ ಬಿಜೆಪಿಗೆ ಹೀನಾಯ ಸೋಲು
“ಶಿವಕುಮಾರ್ ಅವರು ಅತ್ಯಂತ ಬದ್ಧತೆ ಹಾಗೂ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅಧಿಕಾರ ಸಿಕ್ಕರೆ ಒಳ್ಳೆಯ ಆಡಳಿತ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು.ಈಗ ಶಿವಕುಮಾರ್‌ಗೆ ಅವಕಾಶ ಸಿಗಲಿ” ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.
ಸ್ವಾಮೀಜಿ ಮತ್ತು ಒಕ್ಕಲಿಗ ಸಂಘದ ನಿರ್ಧಾರವನ್ನು ಕೆಲವು ಶಾಸಕರು ಹೊತ್ತು ತಂದಿದ್ದು, ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಪ್ರಸ್ತಾಪಿಸಿ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಪ್ರತಿಪಾದಿಸಲಿದ್ದಾರೆ. ಹೈಕಮಾಂಡ್ ಈ ನಿರ್ಧಾರಕ್ಕೆ ಹೇಗೆ ಸ್ಪಂದಿಸಲಿದ ಎಂಬುದು ಕುತೂಹಲ ಮೂಡಿಸಿದೆ.