ಕೇರಳ ಮೂಲದ ಹಣಕಾಸು ಸಂಸ್ಥೆಯಿಂದ ಕೊಡಗು ಜಿಲ್ಲೆಯ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಗೋಣಿಕೊಪ್ಪಲಿಗೆ ಕರೆತಂದಿದ್ದಾರೆ.
ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್‌ನ ಸಿಇಒ ಸನ್ನಿ ಅಬ್ರಹಾಂ(50) ಎಂಬಾತ ಬಂಧಿತ ಆರೋಪಿ.
ಕೊಡಗು ಜಿಲ್ಲೆಯ ಕುಶಾಲನಗರ, ಗೋಣಿಕೊಪ್ಪ, ವಿರಾಜಪೇಟೆ ತಾಲೂಕುಗಳಲ್ಲಿ ಕೇರಳ ಮೂಲದ ‘ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ’ ಎಂಬ ಹಣಕಾಸು ಸಂಸ್ಥೆಗಳನ್ನು ವಿವಿಧೆಡೆ ತೆರೆದಿದ್ದರು. ಕುಶಾಲನಗರ ದಂಡಿನಪೇಟೆಯಲ್ಲಿರುವ ಶಾಖೆಯಲ್ಲಿ ಬೈಲುಕುಪ್ಪೆ ನಿವಾಸಿ ಚಂದ್ರಹಾಸ ₹99,500 ಪಿಗ್ಮಿ ಕಟ್ಟಿದ್ದರು. ಆದರೆ ಶಾಖೆಯವರು ಹಣ ಹಿಂದಿರುಗಿಸದೆ, ಕಚೇರಿಗೆ ಬೀಗ ಹಾಕಿದ್ದರು.
ಕೊಡಗು ಜಿಲ್ಲೆಯಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ಮಿ ಕಲೆಕ್ಷನ್, ಆರ್‌ಡಿ ಹಾಗೂ ಬಾಂಡ್ ಮುಖಾಂತರ ಹಣ ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಚೇರಿಯನ್ನು ಮುಚ್ಚಿ ಸಾರ್ವಜನಿಕರಿಗೆ ವಂಚಿಸಿ ತಲೆಮರೆಸಿಕೊಂಡಿದ್ದರು.
ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್‌ನ ಮುಖ್ಯಸ್ಥ ರಾಹುಲ್ ಚಕ್ರಪಾಣಿ, ಸಿಇಒ ಸನ್ನಿ ಅಬ್ರಹಾಂ ಮತ್ತು ಸಹಚರರು ಒಗ್ಗೂಡಿ ಜನಗಳಿಗೆ ವಂಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಕ್ಕಳ ಅಪಹರಣ ಪ್ರಕರಣ; ಕಾಲಿಗೆ ಗುಂಡು ಹಾರಿಸಿ ಆರೋಪಿಗಳ ಬಂಧನ, ಮಕ್ಕಳ ರಕ್ಷಣೆ
ಸದರಿ ವಂಚನೆ ಕುರಿತಾಗಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕಲಂ 406, 420 ರೆ/ವಿ ಐಪಿಸಿ ಮತ್ತು ಕಲಂ 21, 22, 23 ಅನಿರ್ಬಂಧಿತ ಠೇವಣಿ ಸ್ಕೀಮ್‌ಗಳ ನಿಷೇಧ ಕಾಯ್ದೆ-2019(ಬಿಯುಡಿಎಸ್) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಅನ್ವಯ ಪೊಲೀಸರು ಆರೋಪಿಗಳ ಜಾಡನ್ನು ಹಿಡಿದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ತೆರಳಿ, ಸಂಸ್ಥೆಯ ಸಿಇಒ ಸನ್ನಿ ಅಬ್ರಹಾಂ(58) ಎಂಬಾತನನ್ನು ಬಂಧಿಸಿ ಗೋಣಿಕೊಪ್ಪಲಿಗೆ ಕರೆತಂದಿದ್ದಾರೆ.