ಬೆಲ್ ಹುಕ್ಸ್ ತನ್ನ All About Love ಕೃತಿಸರಣಿಯಲ್ಲಿ, ಬಿಡಿಬಿಡಿಯಾಗಿ ಎಲ್ಲ ಸಮಸ್ಯೆಗಳನ್ನೂ ಚರ್ಚಿಸಿದ್ದಾಳೆ. ಸಮಸ್ಯೆಯು ವ್ಯಕ್ತಿಗತವೇ ಇರಲಿ, ಅಥವಾ ಸಾಮುದಾಯಿಕವೇ ಇರಲಿ; ಪ್ರೀತಿಯ ದಾರಿಯಲ್ಲಿ ನಡೆದರೆ ಮಾತ್ರವೇ ನಾವು ಬಂಧಮುಕ್ತರಾಗಲು ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ.
ಪ್ರೀತಿಯನ್ನು ಒಂದು ವೈಯಕ್ತಿಕ ಭಾವ, ಸಂಗತಿ ಎಂದೇ ನಾವೆಲ್ಲರೂ ತಿಳಿಯುತ್ತೇವೆ. ಪ್ರೀತಿಯ ಬಗೆಗೆ ಮಾತನಾಡಿರುವ ಎಲ್ಲ ಚಿಂತಕರೂ ಸಾಧಾರಣವಾಗಿ ಹೀಗೆಯೇ ಹೇಳಿದ್ದಾರೆ. ಬೆಲ್ ಹುಕ್ಸ್, ಪ್ರೀತಿಯು ಸಮುದಾಯದ ಬೇರಿನಿಂದಲೇ, ಚಿಗುರೊಡೆದು ಬೆಳೆಯುತ್ತದೆ ಎನ್ನುತ್ತಾಳೆ. ಆಕೆಯ ಈ ದಾರ್ಶನಿಕ ಒಳನೋಟವು ಪ್ರೀತಿಗೆ ಇರುವ ಅದ್ಭುತಶಕ್ತಿಯನ್ನು ಗ್ರಹಿಸುವಂತೆ ಮಾಡುತ್ತದೆ. ಪ್ರೀತಿಯು ವೈಯಕ್ತಿಕ ವಿಮೋಚನೆಗೆ ದಾರಿ ಎಂಬುದು ಹೌದು. ಈ ಪ್ರೀತಿಗೆ, ಇಡೀ ಸಮುದಾಯ ವಿಮೋಚನೆಗೆ ದಾರಿ ತೋರಿಸುವ ರಾಜಕೀಯ ಅಸ್ತ್ರವಾಗುವ ಶಕ್ತಿ ಇದೆ. ಪ್ರೀತಿಗೆ ಇರುವ ಈ ಶಕ್ತಿಯು ತನ್ನಂತಾನೇ ಕಾಣಿಸಿಕೊಳ್ಳುವುದಿಲ್ಲ. ಅದನ್ನು ಕಾಣಬೇಕೆಂದರೆ, ನಮ್ಮಲ್ಲಿ ಕೆಲವು ಮೂಲಭೂತ ಸಿದ್ಧತೆಗಳು ಇರಬೇಕು; ಮತ್ತು ಇದಕ್ಕಾಗಿ ನಾವು ಪ್ರಜ್ಞಾಪೂರ್ವಕವಾಗಿ ಶ್ರಮವಹಿಸಲು ತಯಾರಿರಬೇಕು.
ಪ್ರೀತಿಯು ಅನೂಹ್ಯ ರೀತಿಯಲ್ಲಿ ತಾನಾಗಿ ಸಂಭವಿಸುತ್ತದೆ ಎಂಬ ಅಭಿಪ್ರಾಯ ಜನಪ್ರಿಯವಾದುದು. ಅದು ನಮ್ಮ ಅದೃಷ್ಟದಿಂದಾಗಿ ಒಲಿಯುತ್ತದೆ, ಎಂದೂ ತಿಳಿಯಲಾಗುತ್ತದೆ. ಆದರೆ, ಪ್ರೀತಿಯು ತಾನಾಗಿ ಸಂಭವಿಸುವುದಿಲ್ಲ; ಅದನ್ನು ನಮ್ಮ ಸ್ವಂತದ ಪರಿಶ್ರಮದಿಂದ ಆಗುಮಾಡಬೇಕು. ಇದನ್ನು ಕ್ರಮಬದ್ಧವಾಗಿ ಕಲಿಯಬೇಕು; ಹಿರಿಯರು ಎಳೆಯರಿಗೆ ಇದನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಇದಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು, ಬೆಲ್ ಹುಕ್ಸ್ ದಾರ್ಶನಿಕ ಒಳನೋಟವು ನಮಗೆ ನೀಡುತ್ತದೆ. ಸಮುದಾಯ ವಿಮೋಚನೆಗೆ ದಾರಿಯಾಗುವ ಪ್ರೀತಿಯು ವೈಯಕ್ತಿಕ ನೆಲೆಯಿಂದಲೇ ಮೊದಲಾಗುತ್ತದೆ. ನಮ್ಮನ್ನು ನಾವು ಪ್ರೀತಿಸುವುದು, ನಮ್ಮನ್ನು ನಾವು ಒಪ್ಪಿಕೊಳ್ಳುವುದು ಮೊದಲಿಗೆ ಸಾಧಿಸಬೇಕಾದ ಗುರಿಗಳು. ನಮಗೆ ದೊರೆತಿರುವ ಪಿತೃಪ್ರಧಾನ ತರಬೇತಿಯು, ಇವೆರಡಕ್ಕೂ ಅವಕಾಶ ಕೊಡುವುದೇ ಇಲ್ಲ. ಸ್ವ-ಪ್ರೀತಿಯಿಲ್ಲದ ಮೇಲೆ ಸ್ವಾಭಿಮಾನವೂ ಹುಟ್ಟುವುದಿಲ್ಲ. ಇದರಿಂದಾಗಿ ನಮಗೆ, ಯಾರಿಗಾದರೂ ಪ್ರೀತಿಯನ್ನು ಕೊಡುವುದೂ ಸಾಧ್ಯವಾಗುವುದಿಲ್ಲ; ಮತ್ತು ಯಾರಿಂದಲಾದರೂ ಅದನ್ನು ಪಡೆಯುವುದೂ ಸಾಧ್ಯವಾಗುವುದಿಲ್ಲ. ಒಂಟಿ ಬಡಕರಾಗಿ ತೀವ್ರ ಸಂಕಟಗಳನ್ನು ಅನುಭವಿಸುತ್ತೇವೆ; ಮತ್ತು ದುರ್ಬಲರಾಗುತ್ತೇವೆ. ಬೇಟೆಗೆ ಸುಲಭವಾಗಿ ದಕ್ಕುವ ಬಲಿಪಶುಗಳಂತೆ ಆಗುತ್ತೇವೆ. ಇಂಥಾ ವ್ಯಕ್ತಿಗಳ ಹೆಚ್ಚಳದಿಂದ, ಆ ಸಮುದಾಯವು ಇಡಿಯಾಗಿ ದುರ್ಬಲವಾಗುತ್ತದೆ.
ನಮ್ಮ ಮೇಲೆ, ನಮ್ಮ ಇಡೀ ಸಮುದಾಯದ ಮೇಲೆ ನಡೆಯುವ ಆಕ್ರಮಣಗಳಿಗೆ, ಹೊರಗಿನ ಯಾರನ್ನೋ ಶತ್ರುವಾಗಿ ಕಲ್ಪಿಸಿಕೊಳ್ಳುತ್ತೇವೆ. ಸಿಮೋನ್ದ ಬೊವಾ ಹೇಳುವ ಒಂದು ಮಾತನ್ನು ನೆನಪಿಡಬೇಕು. ನಾವು ಅವಕಾಶ ಕೊಡದೆ, ಯಾರೂ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾರರು. ಶತ್ರುವಿನೊಂದಿಗೆ ಹೋರಾಟ ಆಮೇಲಿನ ಪ್ರಶ್ನೆ. ಅದಕ್ಕೆ ಮೊದಲು, ನಮಗೆ ನಾವೇ ಹಾಕಿಕೊಂಡಿರುವ ಬಂಧನಗಳಿಂದ ನಾವು ಮುಕ್ತರಾಗಬೇಕು. ಪ್ರೀತಿಸುವ, ಮತ್ತು ಆ ಪ್ರೀತಿಯನ್ನು ಪಡೆಯುವ ಜೀವ ಸಹಜಚೈತನ್ಯವನ್ನು ಮರುಗಳಿಕೆ ಮಾಡಬೇಕು. ನಮ್ಮ ಈ ಯಾನದಲ್ಲಿ, ಸ್ತ್ರೀವಾದೀ ದಾರ್ಶನಿಕ ಒಳನೋಟವು ನೀಡುವ ನೀಲನಕ್ಷೆಯು, ದೊಡ್ಡ ನೆರವಾಗಿ ಒದಗಬಲ್ಲುದು.
ಸ್ವಾತಂತ್ರ್ಯ ಎಂದರೆ, ಅಧಿಕಾರವನ್ನು ಪಡೆಯುವ ಮನೋಬಲ ಮತ್ತು ಸಾಮಾಜಿಕ ರಚನೆಯಲ್ಲಿ ಸಮಾನ ಹಕ್ಕುಗಳನ್ನು ಗಳಿಸುವುದು ಎಂಬ ತಪ್ಪುಗ್ರಹಿಕೆ ಇದೆ. ಈ ಕ್ರಮದಲ್ಲಿ ಹೆಚ್ಚೆಂದರೆ ಆರ್ಥಿಕ ಸ್ವಾಯತ್ತತೆ ಲಭ್ಯವಾದೀತು. ಸಾಮಾಜಿಕ ಕ್ರಮದಲ್ಲಿ ಯಾವ ಬದಲಾವಣೆಯೂ ಬರುವುದಿಲ್ಲ. ಪ್ರೀತಿಯನ್ನು ಅಧಿಕಾರಕ್ಕೆ ಸಮೀಕರಿಸಿ ನೋಡುವುದು ತಪ್ಪಾಗುತ್ತದೆ. ಅಧಿಕಾರವು ಕೆಲವು ಸೌಲಭ್ಯಗಳನ್ನು ಒದಗಿಸುತ್ತದೆ ನಿಜ. ಆದರೆ ಅದನ್ನು ಉಳಿಸಿಕೊಳ್ಳುವ ಧಾವಂತದಲ್ಲಿ ನಾವು ಮತ್ತಷ್ಟು ಬಗೆಯ ಬಂಧನಗಳಿಗೆ ಸಿಲುಕುತ್ತೇವೆ. ಮುಖ್ಯವಾಗಿ ಇದು ಒಂದು ಆಕ್ರಮಣಕಾರೀ ಸಂದೇಶ. ನಾವು ಅನುಭವಿಸಿದ ಕೆಡುಕನ್ನೇ, ನಾವು ಎದುರಾಳಿ ಎಂದು ತಿಳಿದವರ ಮೇಲೆ ಪ್ರಯೋಗಿಸುತ್ತೇವೆ. ಇದೊಂದು ವಿಷಚಕ್ರವಾಗಿಸುತ್ತದೆ.
ಇದನ್ನು ಓದಿದ್ದೀರಾ?: ಹೊಸ ಪುಸ್ತಕ | ಮಾನವೀಯತೆಯ ಉಳಿವಿಗೆ ಪ್ರತಿರೋಧದ ದನಿ ʼಸ್ವಾಭಿಮಾನದ ಗತ್ತಿನ್ಯಾಗʼ
ನಮ್ಮನ್ನು ನಾವು ಪ್ರೀತಿಸಲು ಕಲಿತರೆ, ಇನ್ನೊಬ್ಬರನ್ನು ಕೂಡಾ ಪ್ರೀತಿಸಲು ಕಲಿತಿರುತ್ತೇವೆ. ಇಂಥಾ ಸ್ವ-ಪ್ರೀತಿಯು ಆತ್ಮಾಭಿಮಾನಕ್ಕೆ ದಾರಿಯಾಗುತ್ತದೆ. ಈ ಪ್ರೀತಿಯನ್ನು ಕಲಿಯಲು, ಪ್ರಜ್ಞಾಪೂರ್ವಕವಾದ ತಯಾರಿಯ ಅಗತ್ಯವಿದೆ. ಜಾಗ್ರತ ಬದುಕು, ಸ್ವ-ಒಪ್ಪಿಗೆ, ಸ್ವ-ಸಮರ್ಥನೆ, ಸ್ವ-ಹೊಣೆಗಾರಿಕೆ, ಸ್ವ-ಸಮಗ್ರತೆ, ಹಾಗೂ ನಿಶ್ಚಿತ ಉದ್ದೇಶದ ಬದುಕು- ಈ ಆರು ಸಂಗತಿಗಳು ನಮ್ಮ ಕಲಿಕೆಯ ಮುಖ್ಯ ಆಧಾರಸ್ತಂಭಗಳು. ಈ ತಯಾರಿ ಇದ್ದರೆ ಮಾತ್ರವೇ, ನಾವು ನಮ್ಮ ಮೇಲೆ ಹೊರಗಿನ ಶಕ್ತಿಗಳು ಹೇರಿರುವ ಬಂಧನಗಳಿಂದ ಮುಕ್ತರಾಗುವ ದಾರಿಗಳು ಕಂಡಾವು. ನಮ್ಮನ್ನು ಬಂಧಿಸಿರುವ ಶಕ್ತಿಗಳು ಎಂದು ನಾವು ಯಾರು ಯಾರನ್ನೋ ಕಲ್ಪಿಸುತ್ತೇವೆ. ವರ್ಗ, ಜಾತಿ, ಜನಾಂಗ, ಹೆಣ್ಣು-ಗಂಡು ಎಂಬ ವಿರೋಧೀ ಗುಂಪುಗಳನ್ನು ಕಟ್ಟುತ್ತೇವೆ. ಆದರೆ, ಪಿತೃಪ್ರಧಾನತೆ, ಮತ್ತು ಲೈಂಗಿಕತಾವಾದ ಎಂಬವೇ ಇವೆಲ್ಲದರ ಹಿಂದೆಯೂ ಇರುವ ದುಷ್ಟಶಕ್ತಿಗಳು.
ಸ್ತ್ರೀವಾದೀ ದಾರ್ಶನಿಕ ಒಳನೋಟಗಳು ಈ ಸತ್ಯವನ್ನು ಸ್ಪಷ್ಟಗೊಳಿಸಿಕಾಣಿಸುತ್ತವೆ. ಪಿತೃಪ್ರಧಾನತೆಯ ಕಲಿಕೆಗಳು, ಮತ್ತು ಲೈಂಗಿಕತಾವಾದೀ ಚಿಂತನೆಗಳಿಂದ ಹೊರಬಂದರೆಮಾತ್ರವೇ ನಾವು ಬಂಧಮುಕ್ತರಾಗಬಹುದು. ಬಂಧಮುಕ್ತರಾಗುವ ದಾರಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸಮಸ್ಯೆಗಳು. ಬೆಲ್ ಹುಕ್ಸ್ ತನ್ನ All About Love ಕೃತಿಸರಣಿಯಲ್ಲಿ, ಬಿಡಿಬಿಡಿಯಾಗಿ ಎಲ್ಲ ಸಮಸ್ಯೆಗಳನ್ನೂ ಚರ್ಚಿಸಿದ್ದಾಳೆ. ಸಮಸ್ಯೆಯು ವ್ಯಕ್ತಿಗತವೇ ಇರಲಿ, ಅಥವಾ ಸಾಮುದಾಯಿಕವೇ ಇರಲಿ; ಪ್ರೀತಿಯ ದಾರಿಯಲ್ಲಿ ನಡೆದರೆ ಮಾತ್ರವೇ ನಾವು ಬಂಧಮುಕ್ತರಾಗಲು ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ.
ಮಾರ್ಟಿನ್ ಲೂಥರ್ ಕಿಂಗ್ “ಶತ್ರುವನ್ನೂ ಪ್ರೀತಿಸಬೇಕು, ಕ್ಷಮಿಸಬೇಕು” ಎಂಬ ಆದರ್ಶವನ್ನು ಹೇಳಿದ. ಆದರೆ, ಬೆಲ್ ಹುಕ್ಸ್, “ಶತ್ರುವಿಗೆ ಈ ಪ್ರೀತಿಯನ್ನೂ, ಕ್ಷಮೆಯನ್ನೂ ಪಡೆಯುವ ಅರ್ಹತೆ ಇದೆಯೇ ಎಂಬುದನ್ನು ನೋಡಬೇಕು; ಇಲ್ಲವಾದರೆ ನಮ್ಮ ಪ್ರೀತಿ ಹಾಗೂ ಕ್ಷಮೆಗಳು ನಮ್ಮ ದೌರ್ಬಲ್ಯಗಳು ಎಂಬಂತೆ ಕಂಡುಬಿಡುತ್ತವೆ” ಎಂದು ಹೇಳುತ್ತಾಳೆ. ಪ್ರೀತಿಯನ್ನು ಪಡೆಯುವ ಅರ್ಹತೆ ಎಂದರೆ, ನಮ್ಮಿಂದ ತಪ್ಪುಗಳು ನಡೆದಿದ್ದರೆ, ಬೇಷರತ್ತಾಗಿ ಅದನ್ನು ಒಪ್ಪಿಕೊಳ್ಳುವ ಧೈರ್ಯ, ಮತ್ತು ಅದನ್ನು ತಿದ್ದಿಕೊಳ್ಳುವ ಬಗ್ಗೆ ಬದ್ಧತೆ ಇರುವುದು ಎಂದೇ ಅರ್ಥ. ಶೋಷಣೆ, ದಮನ, ದಬ್ಬಾಳಿಕೆ, ಆಕ್ರಮಣ, ಒತ್ತಾಯದ ನಿರ್ಬಂಧ… ಒಟ್ಟಿನಲ್ಲಿ ಆಳುವ ಮನೋಭಾವ ಇದ್ದೆಡೆ, ಪ್ರೀತಿಯು ಇರಲು ಸಾಧ್ಯವೇ ಇಲ್ಲ. ವ್ಯಕ್ತಿವ್ಯಕ್ತಿಗಳ ನಡುವೆಯೇ ಇರಲಿ, ಅಥವಾ ವಿಭಿನ್ನ ಸಮುದಾಯಗಳ ನಡುವೆಯೇ ಇರಲಿ, ಸಂಘರ್ಷಗಳು ಆಗುವುದೇ ಪ್ರೀತಿಯ ಅಭಾವದಲ್ಲಿ. ನಾವು ಬಂಧನಕ್ಕೆ ಒಳಗಾಗುವುದಕ್ಕೆ ನಾವೇ ಕಾರಣರು; ಅಂದ ಮೇಲೆ ಬಂಧನದಿಂದ ಮುಕ್ತರಾಗುವುದು ನಮ್ಮ ಕೈಯಲ್ಲೇ ಇರುತ್ತದೆ. ಇಂಥಾ ಪ್ರೀತಿಯನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಭ್ಯಾಸ ಮಾಡುವ ಚೈತನ್ಯವನ್ನು ಕೂಡಿಸಿಕೊಂಡರೆ, ನಾವು ಬಂಧಮುಕ್ತರಾಗುತ್ತೇವೆ; ನಮ್ಮ ಸಮುದಾಯವೂ ಬಂಧಮುಕ್ತವಾಗುತ್ತದೆ. ಪ್ರೀತಿಯೇ ನಮ್ಮ ಭರವಸೆ, ಪ್ರೀತಿಯೇ ನಮ್ಮ ಬಂಧಮುಕ್ತಿಯ ದಾರಿ.
ಈ ದಾರ್ಶನಿಕ ಒಳನೋಟವನ್ನು ಒದಗಿಸಿದ ಬೆಲ್ ಹುಕ್ಸ್ ಕನ್ನಡದ ಜನಮನಗಳನ್ನು ಆವರಿಸಲಿ ಎಂಬುದು ನನ್ನ ಆಶಯ. ಆಕೆಯ Salvation ಎಂಬ ಕೃತಿಯನ್ನು ಕನ್ನಡದಲ್ಲಿ ಬಂಧಮುಕ್ತ ಎಂದು ನಿರೂಪಿಸಿದ್ದೇನೆ. ಇಂಥಾ ಗಂಭೀರ ವೈಚಾರಿಕ ಕೃತಿಯನ್ನು ಹಾಗೂ ಕನ್ನಡ ಓದುಗರು ಪ್ರೀತಿಯ ಈ ದಾರಿಯನ್ನು ಒಪ್ಪುತ್ತಾರೆ ಎಂಬ ನಿರೀಕ್ಷೆ ನನ್ನದು.
ಪ್ರೀತಿಯಿಂದ,
ಶ್ರೀಮತಿ ಎಚ್.ಎಸ್.
