ಕ್ಷುಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳ ನಡೆದು, ಗಂಭೀರ ಗಾಯಗೊಂಡಿದ್ದ ಅತ್ತೆ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಕೆಂಪಮ್ಮ ಎಂದು ಗುರುತಿಸಲಾಗಿದ್ದು, ಸೊಸೆ ಉಮಾದೇವಿ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಉಮಾದೇವಿ ತನ್ನ ಸಹೋದರಿಗೆ ಪೋನ್ ಪೇ ಮೂಲಕ ಏಳು ಸಾವಿರ ಹಣ ಕಳುಹಿಸಿದ್ದರು. ಹಣ ಕಳುಹಿಸಿದ್ದ ಬಗ್ಗೆ ತಿಳಿದುಕೊಂಡಿದ್ದ ಕೆಂಪಮ್ಮ, ತಮ್ಮ ಮಗ ರಾಜೇಶ್ ಬಳಿ ದೂರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಹಣ ಯಾಕೆ ಕಳುಹಿಸಿದ್ದೀಯಾ ಎಂದು ಪ್ರಶ್ನಿಸಿ ಪತ್ನಿ ಉಮಾದೇವಿ ಮೇಲೆ ಪತಿ ರಾಜೇಶ್ ಜಗಳ ಮಾಡಿದ್ದ ಎಂದು ತಿಳಿದುಬಂದಿದೆ.

ಇದರಿಂದ ಆಕ್ರೋಶಗೊಂಡಿದ್ದ ಸೊಸೆ ಉಮಾದೇವಿ, ‘ಹಣ ಕಳಿಸಿದ್ದನ್ನ ಹೇಳಿ ಗಂಡ-ಹೆಂಡತಿ ನಡುವೆ ಜಗಳ ತಂದಿಟ್ಟಿದ್ದೀರಾ’ ಎಂದು ಅತ್ತೆಯ ಕೈ ಹಾಗೂ ಕಾಲುಗಳಿಗೆ ದೊಣ್ಣೆಯಿಂದ ಥಳಿಸಿದ್ದರು. ಕೈ ಕಾಲುಗಳಿಗೆ ದೊಣ್ಣೆಯಿಂದ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು.
ಆ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್ ಕರೆದುಕೊಂಡು ಬರಲಾಗಿತ್ತು. ಆದರೆ, ಮನೆಗೆ ಬಂದ ಬಳಿಕ ಕೆಂಪಮ್ಮ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ದಾವಣಗೆರೆ | ಅಕ್ರಮವಾಗಿ ಮರ ಮಾರಾಟ: ಉಪ ಅರಣ್ಯಾಧಿಕಾರಿ, ಗಸ್ತು ಅರಣ್ಯ ರಕ್ಷಕ ಅಮಾನತು
ಘಟನೆಯ ಬಗ್ಗೆ ಮಾಹಿತಿ ತಿಳಿದ ಹೆಬ್ಬೂರು ಪೊಲೀಸ್ ಠಾಣೆಯ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿ ಉಮಾದೇವಿಯನ್ನ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
