ಒಂದು ದಶಕದ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶ ನೀಡಿತ್ತು.
ಈ ಶಿಕ್ಷೆಯ ಪ್ರಮಾಣ ಪ್ರಕಟವಾದ ಬೆನ್ನಲ್ಲೇ ಓರ್ವ ಅಪರಾಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಅಪರಾಧಿಯನ್ನು ರಾಮ ಲಕ್ಷಣ ಭೋವಿ(44) ಎಂದು ಗುರುತಿಸಲಾಗಿದೆ. ರಾಮ ಲಕ್ಷಣ ಭೋವಿ ಈ ಪ್ರಕರಣದಲ್ಲಿ 98ನೇ ಅಪರಾಧಿಯಾಗಿದ್ದರು.
ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 101 ಜನ ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿತ್ತು. ಇನ್ನುಳಿದ ಮೂವರಿಗೆ ಐದು ವರ್ಷ ಜೈಲು ಹಾಗೂ ತಲಾ ₹2,000 ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶ ನೀಡಿತ್ತು. ತೀರ್ಪು ಪ್ರಕಟವಾದ ಬಳಿಕ 100 ಜನರನ್ನು ಬಳ್ಳಾರಿ ಜೈಲಿಗೆ ಗುರುವಾರ ರಾತ್ರಿಯೇ ಕಳುಹಿಸಲಾಗಿದೆ.
ಇದನ್ನು ಓದಿದ್ದೀರಾ? ತುಮಕೂರು | ಕ್ಷುಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳ: ಗಂಭೀರ ಗಾಯಗೊಂಡಿದ್ದ ಅತ್ತೆ ಸಾವು!
ಅನಾರೋಗ್ಯದಿಂದ ಬಳಲುತ್ತಿದ್ದ ರಾಮಣ್ಣ ಭೋವಿ ಅವರನ್ನು ಗುರುವಾರ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಾಗ ಅಸ್ವಸ್ಥರಾಗಿದ್ದರು. ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ನ್ಯಾಯಾಲಯದ ಶಿಕ್ಷೆ ಆದೇಶ ಪ್ರಕಟವಾದ ಬಳಿಕ ರಾಮಣ್ಣ ಅವರನ್ನು ನ್ಯಾಯಾಲಯದಿಂದ ನೇರವಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಗಂಗಾವತಿ ಗ್ರಾಮೀಣ ಸಿಪಿಐ, “ಪ್ರಕರಣದಲ್ಲಿ 98ನೇ ಅಪರಾಧಿಯಾಗಿದ್ದ ರಾಮ ಲಕ್ಷಣ ಭೋವಿ ಎಂಬವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಕುರಿತು ಜೈಲು ಅಧೀಕ್ಷಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾಸ್ಪತ್ರೆ ಮುಂದೆ ಮೃತನ ಪತ್ನಿ ಮತ್ತು ಸಂಬಂಧಿಕರು ಜಮಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದ ನೂರಾರು ಜನರು ಆಸ್ಪತ್ರೆ ಮುಂದೆ ಜಮಾಯಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಏನಿದು ಮರಕುಂಬಿ ಪ್ರಕರಣ?
2014ರ ಆಗಸ್ಟ್ 28ರಂದು ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ‘ಪವರ್’ ಸಿನಿಮಾ ನೋಡಲು ಟಿಕೆಟ್ ಪಡೆಯುವಾಗ ದಲಿತರು ಹಾಗೂ ಸವರ್ಣೀಯರ ನಡುವೆ ಮಾತಿಗೆ ಮಾತು ಬೆಳೆದು ಶುರುವಾದ ಜಗಳ ಸಂಘರ್ಷಕ್ಕೆ ತಿರುಗಿತ್ತು.

ಈ ಕುರಿತು ಅದೇ ಗ್ರಾಮದ ಮಾದಿಗ ಸಮುದಾಯದ ಭೀಮೇಶ ಎಂಬವರು ದೂರು ನೀಡಿದ್ದರು. “ನಮ್ಮ ಗ್ರಾಮದ ಸವರ್ಣೀಯ ಮಂಜುನಾಥ ಈಳಿಗೇರ ಹಾಗೂ ಇತರರು ಟಿಕೆಟ್ ಪಡೆಯುವಾಗ ಯಾರೊ ವ್ಯಕ್ತಿಗಳ ಜೊತೆ ಜಗಳ ಮಾಡಿಕೊಂಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿತ್ತು. ಅದನ್ನು ನಾವೇ ಮಾಡಿಸಿದ್ದೇವೆ ಎಂದು ತಪ್ಪು ತಿಳಿದುಕೊಂಡು ಮಂಜುನಾಥ ಅವರು ಗ್ರಾಮಕ್ಕೆ ಸವರ್ಣೀಯರನ್ನು ಕರೆದುಕೊಂಡು ಬಂದು ನಮ್ಮ ಸಮುದಾಯದ ಜನರ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದ. ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿಯನ್ನೂ ಹಚ್ಚಲಾಗಿತ್ತು” ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ 117 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಡುವೆ ಕೆಲ ಆರೋಪಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಪೈಕಿ 101 ಮಂದಿಯ ವಿರುದ್ಧ ಆರೋಪ ಸಾಬೀತಾಗಿದೆ. ಅಕ್ಟೋಬರ್ 24ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.
ಇದನ್ನು ಓದಿದ್ದೀರಾ? ದಾವಣಗೆರೆ | ನ. 8-9ರಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಮೊದಲ ರಾಜ್ಯ ಸಮ್ಮೇಳನ
ಅದರಂತೆ, 2014ರಲ್ಲಿ ನಡೆದ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ಪ್ರಕರಣದ ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ತೀರ್ಪು ಪ್ರಕಟಿಸಿದ್ದರು.
ಇನ್ನುಳಿದಂತೆ ಮೂವರು ಅಪರಾಧಿಗಳು ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್‌ನಲ್ಲಿ ಐದು ವರ್ಷ ಶಿಕ್ಷೆ ವಿಧಿಸಿದ್ದಾರೆ.
