ಇದು ಜಾತಿಗಳ ದೇಶ. ಯಾವುದೇ ಸಮುದಾಯದ ಮೇಲ್ಮುಖ ಚಲನೆಗೆ ಅಥವಾ ಕೆಳಮುಖ ಚಲನೆಗೆ ಜಾತಿಯೇ ಕಾರಣ. ಜಾತಿಗಳ ಮೇಲೆಯೇ ನಮ್ಮ ನೀತಿಗಳೂ ಆಧರಿಸಿವೆ. ಆದ್ದರಿಂದ ಜನಸಮುದಾಯದ ಸರ್ವತೋಮುಖ ಅಭಿವೃದ್ದಿಯ ನೀತಿಗಳನ್ನು ರೂಪಿಸಲು ಜಾತಿಗಳ ವಿವರಗಳು ಬೇಕೇ ಬೇಕು.
“For us caste census is not just a census, it is a foundation for policy making… Just conducting a caste census is not enough, it is also important to understand how the wealth is being distributed… ”
– Rahul Gandhi
“ನಮಗೆ ಜಾತಿ ಜನಗಣತಿ ಕೇವಲ ಗಣತಿ ಅಲ್ಲ, ಇದು ನೀತಿ ರಚನೆಗೆ ಅಡಿಪಾಯವಾಗಿದೆ. ಕೇವಲ ಜಾತಿ ಗಣತಿ ನಡೆಸುವುದು ಸಾಕಾಗುವುದಿಲ್ಲ, ಸಂಪತ್ತು ಹೇಗೆ ಹಂಚಿಕೆಯಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ”. ಜಾತೀವಾರು ಸಮೀಕ್ಷೆ ಯಾಕೆ ಬೇಕು ಎಂಬುದನ್ನು ಎಂತಹ ದಡ್ಡರಿಗೂ ಗೊಂದಲವಿಲ್ಲದಂತೆ ಸ್ಪಷ್ಟವಾಗಿ ಅರ್ಥ ಮಾಡಿಸಲು ರಾಹುಲ್ ಗಾಂಧಿ ಅವರ ಮೇಲಿನ ಸಾಲುಗಳು ಸಾಕು. ಆದರೆ ಇದನ್ನು ಅರಿಯುವ ಮನಸ್ಸಿರಬೇಕಷ್ಟೇ. ಕಣ್ಣುಪಟ್ಟಿ ಕಟ್ಟಿಕೊಂಡವರಿಗೆ ಸತ್ಯ ಕಾಣುವುದಾದರೂ ಹೇಗೆ?
ಇದು ಜಾತಿಗಳ ದೇಶ, ಯಾವುದೇ ಸಮುದಾಯದ ಮೇಲ್ಮುಖ ಚಲನೆಗೆ ಅಥವಾ ಕೆಳಮುಖ ಚಲನೆಗೆ ಜಾತಿಯೇ ಕಾರಣ. ಜಾತಿಗಳ ಮೇಲೆಯೇ ನಮ್ಮ ನೀತಿಗಳೂ ಆಧರಿಸಿವೆ. ಆದ್ದರಿಂದ ಜನಸಮುದಾಯದ ಸರ್ವತೋಮುಖ ಅಭಿವೃದ್ದಿಯ ನೀತಿಗಳನ್ನು ರೂಪಿಸಲು ಜಾತಿಗಳ ವಿವರಗಳು ಬೇಕೇ ಬೇಕು. ಅಂದರೆ ಇಷ್ಟು ವರ್ಷಗಳ ಕಾಲ ಸರ್ಕಾರ ನೀಡಿದ ಸವಲತ್ತು, ಅನುದಾನ, ಸಾಲ ಸೋಲ, ಕಾರ್ಯಕ್ರಮಗಳು ಮತ್ತು ಶಾಸನಗಳು ಯಾವ ಜಾತಿಗಳಿಗೆ ತಲುಪಿವೇ ಅಥವಾ ಯಾವ ಜಾತಿಗಳಿಗೆ ತಲುಪಿಲ್ಲ ಎಂಬ ವಿವರಗಳನ್ನು ಸಂಗ್ರಹಿಸಿ ಈವರೆಗೂ ಯಾವುದೇ ಸವಲತ್ತುಗಳು ತಲುಪದ ಸಮುದಾಯಗಳನ್ನು ಗುರುತಿಸಿ, ಅಂತಹ ಸಮುದಾಯಗಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಿ, ಅಂತವರನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಜಾತೀವಾರು ಸಮೀಕ್ಷೆ ಮಾಡಬೇಕಿದೆ.
‘ಜಾತೀವಾರು ಸಮೀಕ್ಷೆ’ ಎಂದರೆ ಜಾತಿಗಳಲ್ಲಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಗುರುತಿಸುವುದರೊಂದಿಗೆ ಆಯಾ ಜಾತಿಗಳ ಅಸ್ಮಿತೆಯನ್ನು ಸಾದರಪಡಿಸುವುದು.
ಈ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಮೇಲ್ಜಾತಿಗಳು ಮತ್ತು ಕೆಳಜಾತಿಗಳೆಂಬ ತಾರತಮ್ಯ ಇರುವುದಿಲ್ಲ. ಜಾತೀವಾರು ಸಮೀಕ್ಷೆಯನ್ನು ಕೇವಲ ಕೆಳಜಾತಿಗಳಿಗಾಗಿ ಮಾಡುವುದಿಲ್ಲ. ಇಲ್ಲಿ ಮೇಲ್ಜಾತಿ, ಕೆಳಜಾತಿಗಳಲ್ಲಿನ ಎಲ್ಲಾ ಜಾತಿ-ಧರ್ಮೀಯರನ್ನು ಒಳಗೊಂಡಂತೆ ಜಾತೀವಾರು ಸಮೀಕ್ಷೆಯನ್ನು ಮಾಡಲಾಗುತ್ತದೆ. ಜಾತೀವಾರು ಸಮೀಕ್ಷೆಯನ್ನು ವಿರೋಧಿಸುವ ಮೇಲ್ಜಾತಿಯ ಬಲಿಷ್ಠರಿಗೆ ತಮ್ಮ ಜಾತಿಯಲ್ಲಿನ ಬಡವರಿಗೆ ಈ ಜಾತೀವಾರು ಸಮೀಕ್ಷೆ ಹೇಗೆ ಲಾಭದಾಯಕವಾಗುತ್ತದೆ, ಹೇಗೆ ಸಹಾಯವಾಗುತ್ತದೆಂಬ ಕನಿಷ್ಠ ಅರಿವು ಇದ್ದಂತಿಲ್ಲ! ಅಥವಾ ಅರಿವಿದ್ದೂ ಕಳ್ಳಾಟ ಆಡುತ್ತಿದ್ದಾರೆ.
ಜಾತೀವಾರು ಸಮೀಕ್ಷೆಯಲ್ಲಿ ಒಂದು ಜಾತಿಯ ವ್ಯಕ್ತಿ ಅಥವಾ ಕುಟುಂಬ ಹೇಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ ಎನ್ನಲಿಕ್ಕೆ ಸದರಿ ಜಾತಿಯ ವ್ಯಕ್ತಿ ಅಥವಾ ಕುಟುಂಬಕ್ಕೆ ಎಷ್ಟು ಕೃಷಿ ಭೂಮಿಯಿದೆ? ಸ್ವಂತ ಮನೆ ಇದೆಯೇ? ಇದ್ದರೆ ಅದು ತಾರಸಿ ಮನೆಯೇ, ಹೆಂಚಿನ ಮನೆಯೇ, ಹುಲ್ಲುಮನೆಯೇ, ಗುಡಿಸಲೇ, ಗುಡಾರವೇ ಎಂಬುದರಿಂದ ಹಿಡಿದು ಆ ಕುಟುಂಬದಲ್ಲಿ ಅನಕ್ಷರತೆ ಎಷ್ಟಿದೆ? ನಿರುದ್ಯೋಗ ಎಷ್ಟಿದೆ? ಎಂತಹ ನೀರು ಕುಡಿಯುತ್ತಾರೆ? ಬಾವಿಯದೋ, ಕೆರೆಯದೋ, ನದಿಯದೋ, ಬೋರ್‌ವೆಲ್ಲಿನದೋ ಎಂಬುದರಿಂದ ಹಿಡಿದು, ಅವರು ಬಳಸುವ ಬಹಿರ್ದೆಸೆಯ ವಿವರಗಳವರೆಗೂ ಮಾಹಿತಿ ಸಂಗ್ರಹಿಸುತ್ತಾರೆ. ಈ ರೀತಿಯ ಸುಮಾರು ಐವತ್ತು ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸುವುದರ ಮೂಲಕ ಒಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ಅರಿಯಬಹುದು.
ಜಾತೀವಾರು ಸಮೀಕ್ಷೆಯನ್ನು ವಿರೋಧಿಸುವ so called ಮೇಲ್ಜಾತಿಗಳಲ್ಲಿ ಅತ್ಯಂತ ಕಡು ಬಡತನದಲ್ಲಿರುವ ಭೂಹೀನರು ಇಲ್ಲವೇ? ಕೃಷಿಕೂಲಿಕಾರರು, ಮನೆಯಿಲ್ಲದವರು ಇಲ್ಲವೇ? ಅನಕ್ಷರಸ್ಥರು, ನಿರುದ್ಯೋಗಿಗಳು ಇಲ್ಲವೇ? ಇಂಥವರನ್ನೆಲ್ಲ ಗುರುತಿಸಿ, ಇಂಥವರನ್ನು ಸಬಲಗೊಳಿಸಲು ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಬೇಡವೇ? ಜಾತೀವಾರು ಸಮೀಕ್ಷೆಯನ್ನು ವಿರೋಧಿಸುವ ಮೇಲ್ಜಾತಿಯ ಶ್ರೀಮಂತರು ಅವರದೇ ಜಾತಿಯ ನಿರ್ಗತಿಕರ ಅಭಿವೃದ್ಧಿ ಯ ವಿರುದ್ಧವಿದ್ದಾರೆ ಎಂಬುದು ಇಲ್ಲಿ ಸಾಬೀತಾಗುತ್ತದೆ. ಮೇಲ್ಜಾತಿಯ ಶ್ರೀಮಂತರ ಹುನ್ನಾರಗಳನ್ನು ಅದೇ ಜಾತಿಯ ಬಡವರು ಅರಿತು ಜಾಗೃತರಾಗಬೇಕಿದೆ.
ಜಾತೀವಾರು ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಲಿಷ್ಠ ಜಾತಿಗಳ ಆಳುವ ವರ್ಗದವರು ತಮ್ಮ ರಾಜ್ಯಾಧಿಕಾರದ ಸ್ವಾರ್ಥಕ್ಕಾಗಿ, ತಮ್ಮ ವ್ಯಾಪಾರ, ಉದ್ದಿಮೆಯ ಸ್ವಾರ್ಥಕ್ಕಾಗಿ ಮತ್ತು ತಮ್ಮ ವೈಯಕ್ತಿಕ ಲಾಭಗಳಿಗಾಗಿ ವಿರೋಧಿಸುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟ. ಇಲ್ಲಿ ತಮ್ಮ ಸಮುದಾಯದ ಕಾಳಜಿಯಂತೂ ಲವಲೇಶವೂ ಇದ್ದಂತಿಲ್ಲ.
ತಮ್ಮ ಜಾತಿಯ ಬಡವರನ್ನು ಕೇವಲ ತಮ್ಮ ಮತದಾರರೆಂದು ಮಾತ್ರ ಪರಿಗಣಿಸುವ ಮೇಲ್ಜಾತಿಯ ಮೇಲ್ವರ್ಗದವರು “ಜಾತೀವಾರು ಸಮೀಕ್ಷೆಯಿಂದ ಏನೋ ಆಗಬಾರದ್ದು ಆಗಿಬಿಡುತ್ತದೆ” ಎಂಬಂತೆ ತಮ್ಮ ಜಾತಿಯ ದುರ್ಬಲರಲ್ಲಿ ಒಂದು ರೀತಿಯ ಅಸ್ಥಿರತೆ, ಭಯ ಮತ್ತು ಆತಂಕಗಳನ್ನು ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ತಮ್ಮ ಜಾತಿಯ ಮುಗ್ಧರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ನಾವು ಸದ್ಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಹೊರತುಪಡಿಸಿ ನಮ್ಮ ಕಣ್ಣ ಮುಂದೆ ಢಾಳಾಗಿ ಕಾಣುವ ರಾಜಕಾರಣವನ್ನು ನೋಡೋಣ. ಇದರಲ್ಲಿ ಎಷ್ಟು ಜನ ತಮ್ಮ ಜಾತಿಯ ಬಡವರ, ನಿರ್ಗತಿಕರ ಪ್ರಾತಿನಿಧ್ಯವಿದೆ ಎಂಬುದನ್ನು ಗಮನಿಸಿ. ಕೇವಲ ಶ್ರೀಮಂತ ಉದ್ಯಮಿಗಳು, ತಲೆಮಾರುಗಳಿಂದ ರಾಜಕೀಯ ಅಧಿಕಾರ ಹಿಡಿದ ಕುಟುಂಬಗಳು, ತಮ್ಮ ಆಪ್ತರು, ತಮ್ಮ ಪ್ರೇಯಸಿಯರನ್ನು ಹೊರತುಪಡಿಸಿ, ತಮ್ಮದೇ ಜಾತಿಯ ಹಣ, ಅಂತಸ್ತು ಇಲ್ಲದ ಯಾವ ಪ್ರತಿಭಾವಂತರನ್ನು ಕರೆದು ರಾಜಕೀಯ ಪ್ರಾತಿನಿಧ್ಯ ನೀಡಿದ್ದಾರೆ? ಇನ್ನು ಜಾತೀವಾರು ಸಮೀಕ್ಷೆಯನ್ನು ವಿರೋಧಿಸುವ ಮೇಲ್ಜಾತಿಯ ಜಗತ್ ಗುರುಗಳು ಯಾರ ಹಿತವನ್ನು ಕಾಯಲು ಹೊರಟಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಇದನ್ನೂ ಓದಿ ಕೊಪ್ಪಳ | ಮರಕುಂಬಿ ಪ್ರಕರಣ; ಜೀವಾವಧಿ ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಓರ್ವ ಅಪರಾಧಿ ಸಾವು
ಜಾತೀವಾರು ಸಮೀಕ್ಷೆ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಯಾರ ಕೈಗೂ ಇನ್ನೂ ತಲುಪಿಲ್ಲ. ಯಾರೂ ಇದನ್ನು ತೆರೆದು ಕೂಡಾ ನೋಡಿಲ್ಲ. ಹೀಗಿರುವಾಗ “ಜಾತೀವಾರು ಸಮೀಕ್ಷೆ ಅವೈಜ್ಞಾನಿಕ” ಎನ್ನುವವರಿಗೆ ಕಣ್ಣು ಮತ್ತು ಮಿದುಳು ಇರಬಹುದೆಂಬ ನಂಬಿಕೆ ಇದೆಯೆ?!
ಈ ಎಲ್ಲಾ ಹಿನ್ನೆಲೆಯಲ್ಲಿ ಜಾತೀವಾರು ಸಮೀಕ್ಷೆಯನ್ನು ವಿರೋಧಿಸುತ್ತಿರುವವರು ತಮ್ಮ ವೈಯಕ್ತಿಕ ಲಾಭ ಮತ್ತು ಹಿತಾಸಕ್ತಿಗಾಗಿ ವಿರೋಧಿಸುತ್ತಿದ್ದಾರೆಯೇ ಹೊರತು, ಇಲ್ಲಿ ಯಾವುದೇ ರೀತಿಯ ಜನಪರ, ಜಾತಿಪರ ಕಾಳಜಿ ಕಾಣುತ್ತಿಲ್ಲ.

ಡಾ ಸಿ ಎಸ್ ದ್ವಾರಕಾನಾಥ್
ಹಿರಿಯ ವಕೀಲರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ