- ಎನ್‌ಇಪಿ ರದ್ದು ಮಾಡಿ, ದ್ವೇಷ ತುಂಬಿದ ಪಠ್ಯ ಪರಿಷ್ಕರಣೆಯನ್ನು ಕೈಬಿಡಿ
- ಸದಾಶಿವ ಆಯೋಗದ ವರದಿ ಜಾರಿ ಮಾಡಿ, ಮುಸ್ಲಿಂ ಮೀಸಲಾತಿ ಮರುಸ್ಥಾಪಿಸಿ
ಕರ್ನಾಟಕದ ಪ್ರಜ್ಞಾವಂತ ಮತದಾರರು ಸಂವಿಧಾನ ವಿರೋಧಿಗಳನ್ನು ತಿರಸ್ಕರಿಸಿ, ಸಾಮಾಜಿಕ ನ್ಯಾಯ ಕಲ್ಪಿಸಿ, ರಾಜ್ಯದಲ್ಲಿ ಶಾಂತಿ ಕಾಪಾಡುತ್ತಾರೆ ಎಂಬ ಭರವಸೆ ಮೇಲೆ ಕಾಂಗ್ರೆಸ್ ಕೈ ಹಿಡಿದು ಇಡೀ ದೇಶಕ್ಕೆ ಒಂದು ಬಲವಾದ ಸಂದೇಶ ರವಾನಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಕೂಡ ರಾಜ್ಯದಾದ್ಯಂತ ಕಾಂಗ್ರೆಸ್ ಬೆಂಬಲಿಸುವಂತೆ, ಮತ ಚಲಾಯಿಸಲು ಪ್ರೋತ್ಸಾಹಿಸುವಂತೆ ಕರೆ ನೀಡಲಾಗಿತ್ತು. ನಮ್ಮ ಮನವಿಗೆ ಸ್ಪಂಧಿಸಿ, ಕಾಂಗ್ರೆಸ್‌ನ್ನು ಬೆಂಬಲಿಸಿದ ಎಲ್ಲ ದಲಿತ ಚಳವಳಿಯ ಒಡನಾಡಿಗಳಿಗೆ ಮತ್ತು ಕಾರ್ಯಕರ್ತರಿಗೆ ಭೀಮ ನಮನಗಳು” ಎಂದು ತಿಳಿಸಿದ್ದಾರೆ.
“ಕೇಂದ್ರದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಮತ್ತು ಅನೈತಿಕ ಆಪರೇಷನ್ ಕಮಲದ ಮೂಲಕ ಕಳೆದ ಮೂರುವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ಒಂದು ಕಡೆಯಾದರೆ, ಅವರ ಹಿಂದಿ ಹೇರಿಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತ ಹಲವಾರು ನಿರ್ಧಾರಗಳು ಕನ್ನಡಿಗರನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ” ಎಂದು ವಿವರಿಸಿದ್ದಾರೆ.
“ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆಗಳಿಗೆ ಮಂಡಿಯೂರುತ್ತಾ, ಬಿಜೆಪಿ ಹೈಕಮಾಂಡ್ ತಾಳಕ್ಕೆ ತಕ್ಕಂತೆ ಕುಣಿದ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕನ್ನಡಿಗರ ಹಿತ ಕಾಯುವಲ್ಲಿ ವಿಫಲರಾದರು” ಎಂದು ಆರೋಪಿಸಿದ್ದಾರೆ.
“ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಗ್ಯಾಸ್ ಸೇರಿದಂತೆ ಹಲವು ದಿನಬಳಕೆ ವಸ್ತುಗಳು ರಾಜ್ಯದ ಬಡಜನರ ಕೈ ಸಡುತ್ತಿದ್ದರೆ, ಮತ್ತೊಂದು ಕಡೆ ಅಜಾನ್, ಹಲಾಲ್, ಬುರ್ಕಾ ಹಾಗೂ ಮುಸ್ಲಿಂ ಸಮುದಾಯದ ವ್ಯಾಪರಕ್ಕೆ ಜಾತ್ರೆ – ದೇವಾಲಯಗಳಲ್ಲಿ ಹೇರಿದ್ದ ನಿಷೇಧವನ್ನು ಸಮರ್ಥಿಸಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಕ್ರಿಯೆಗೆ ಪ್ರತಿಕ್ರಿಯೆ” ಎಂದು ಹೇಳಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನವನ್ನು ಕಳೆದಿದ್ದರು” ಎಂದು ಕಿಡಿಕಾರಿದ್ದಾರೆ.
“ಬಿಜೆಪಿಯ ಇಂಥ ಹಲವು ಅತಿರೇಕದ ವರ್ತನೆಗಳಿಗೆ ಮತ್ತು ಸಂವಿಧಾನ ವಿರೋಧಿ ನಿಲುವುಗಳಿಗೆ ಕನ್ನಡಿಗರು ತಕ್ಕ ಪಾಠ ಕಲಿಸಿದ್ದಾರೆ. 2023ರ ಮೇ 13ರಂದು ಹೊರಬಿದ್ದ ಕರ್ನಾಟ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಬಹುಮತ ಪಡೆದಿದ್ದು, ಪ್ರಜಾಪ್ರಭೂತ್ವ ವಿರೋಧಿ ಬಿಜೆಪಿ ಮಣ್ಣುಮುಕ್ಕಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರಿನ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮ
“ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದ ಜನರು ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಆದ್ದರಿಂದ, ತನ್ನ ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್ ತಾನು ನೀಡಿರುವ ಪ್ರಮುಖ ಭರವಸೆಗಳನ್ನು (ಕಾಂಗ್ರೆಸ್ ಗ್ಯಾರಂಟಿಗಳು) ಜಾರಿಗೆ ತರಬೇಕು” ಎಂದು ತಿಳಿಸಿದ್ದಾರೆ.
“ದಲಿತ ಮತ್ತು ದಮನಿತ ಸಮುದಾಯದ ಮಕ್ಕಳಿಗೆ ಮಾರಕವಾಗಿರುವ ಅವೈಜ್ಷಾನಿಕ ಎನ್‌ಇಪಿ (ಹೊಸ ಶಿಕ್ಷಣ ನೀತಿ)ಯನ್ನು ರದ್ದು ಮಾಡಬೇಕು. ದ್ವೇಷ ತುಂಬಿದ ಪಠ್ಯ ಪರಿಷ್ಕರಣೆಯನ್ನು ಕೈಬಿಟ್ಟು, ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯವನ್ನೇ ಮುಂದುವರಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಪ್ರೌಢ ಶಾಲಾ ಮಕ್ಕಳಿಗೆ ಈ ವರ್ಷದಿಂದ ಬೈಸಿಕಲ್ ವಿತರಣೆ ಜತೆಗೆ, ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನೂ ಬಿಡುಗಡೆ ಮಾಡಬೇಕು. ಎಸ್‌ಸಿಎಸ್‌ಪಿ / ಟಿಎಸ್‌ಪಿ ಕಾಯ್ದೆಯಲ್ಲಿನ 7(ಡಿ) ಕಲಂ ತೆಗೆದು, ಪರಿಶಿಷ್ಟರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಬಿಜೆಪಿ ಪಕ್ಷ ತನ್ನ ದ್ವೇಷ ರಾಜಕಾರಣದಿಂದ ರದ್ದು ಮಾಡಿದ್ದ ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸಬೇಕು. ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿ, ಪರಿಶಿಷ್ಟ ಸಮುದಾಯದ ಎಲ್ಲ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ ಜಾರಿ ಮಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆದ್ಯತೆ ನೀಡಬೇಕು” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಪರವಾಗಿ ಆಗ್ರಹಿಸಿದ್ದಾರೆ.