ಕೋಲ್ಕತ್ತಾ ಟ್ರೈನಿ ವೈದ್ಯ ಅತ್ಯಾಚಾರ-ಹತ್ಯೆ ಪ್ರಕರಣ ಮತ್ತು ಮಹಾರಾಷ್ಟ್ರದ ಬದ್ಲಾಪುರದಲ್ಲಿನ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಗಳ ವಿರುದ್ಧದ ಆಕ್ರೋಶ ಮುಂದುವರೆದಿದೆ. ಹಲವಾರು ಪ್ರತಿಭಟನೆಗಳು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಎರಡು ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇಂಧೋರ್ ಮತ್ತು ರೇವಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಅಕ್ಟೋಬರ್ 21ರಂದು ರೇವಾದಲ್ಲಿ ಅಮಾನುಷ ಘಟನೆ ನಡೆದಿದೆ. ದೇವಸ್ಥಾನದ ಸಮೀಪದಲ್ಲಿದ್ದ ಪಿಕ್ನಿಕ್ ಸ್ಪಾಟ್‌ನಲ್ಲಿ ದಂಪತಿಗಳ ಮೇಲೆ ಕಾಮುಕರ ಗುಂಪು ಹಲ್ಲೆ ನಡೆಸಿದೆ. ಪತಿಯನ್ನು ಮರಕ್ಕೆ ಕಟ್ಟಿಹಾಕಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಕಾಮುಕರ ಗುಂಪು ತಮ್ಮ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಪೊಲೀಸರಿಗೆ ದೂರು ನೀಡಿದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದೆ.
ಮರುದಿನ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಅಕ್ಟೋಬರ್ 22ರಂದು ಇಂಧೋರ್‌ನಲ್ಲಿ ನಿರಾಶ್ರಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿದೆ. ಮಂಗಳವಾರ ಮುಂಜಾನೆ 4 ಗಂಟೆಯ ಸಮಯದಲ್ಲಿ ದಿನಗೂಲಿ ಕಾರ್ಮಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಇಂಧೋರ್‌ನ ಸದರ್ ಬಜಾರ್ ಪ್ರದೇಶದಲ್ಲಿ ಸಂತ್ರಸ್ತ ಮಹಿಳೆ ರಕ್ತಸ್ರಾವ ಮತ್ತು ಅರೆಬೆತ್ತಲೆಯಾಗಿ ಅಲೆದಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ವಿಡಿಯೋ ತುಣುಕುಗಳನ್ನು ಪರಿಶೀಲಿಸಿದ್ದು, ಸಂತ್ರಸ್ತೆಯನ್ನು ಆರೋಪಿಯು ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ಎರಡು ಭೀಕರ ಅತ್ಯಾಚಾರ ಪ್ರಕರಣಗಳು ಘಟಿಸಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ, “ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದ ಮಗಳು ರಸ್ತೆಯಲ್ಲಿ ಬೆತ್ತಲೆಯಾಗಿದ್ದಾಳೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧೋರ್ ಮಹಿಳೆ ಕಂಡುಬಂದ ಸ್ಥಿತಿಯನ್ನು ಮಹಾಭಾರತದ ದ್ರೌಪದಿ ವಸ್ತ್ರಾಪಹರಣಕ್ಕೆ ಹೋಲಿಸಿರುವ ಪಟ್ಟಾರಿ, “ತನ್ನನ್ನು ತಾವು ‘ದೇವರು’ ಎಂದು ಪರಿಗಣಿಸುವ ಮುಖ್ಯಮಂತ್ರಿ ಯಾದವ್ ಅವರಿಗೆ ದ್ರೌಪದಿಯ ವಸ್ತ್ರಾಪಹರಣವು ಕಾಣಿಸಲಿಲ್ಲವೇ? ನಮ್ಮ ಹೆಣ್ಣುಮಕ್ಕಳ ಸ್ಥಿತಿಯ ಬಗ್ಗೆ ನನಗೆ ಆತಂಕವಿದೆ. ನಮ್ಮ ಹೆಣ್ಣುಮಕ್ಕಳ ಮೇಲಿನ ಅಪರಾಧಗಳು ನಿಲ್ಲುತ್ತಿಲ್ಲ. ಆದರೆ, ಮುಖ್ಯಮಂತ್ರಿ ಕಣ್ಣು ಮುಚ್ಚಿ ಕುಳಿತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಇಂದೋರ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಕಾನೂನು ತಕ್ಕ ಪಾಠ ಕಲಿಸಲಾಗುತ್ತದೆ. ಅವರನ್ನು ಬಿಡುವುದಿಲ್ಲ” ಎಂದು ಸಚಿವ ನರೇಂದ್ರ ಶಿವಾಜಿ ಪಟೇಲ್ ಹೇಳಿದ್ದಾರೆ.
ಈ ಹಿಂದೆ, 2023ರ ಸೆಪ್ಟೆಂಬರ್‌ನಲ್ಲಿ ಇದೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಂಥದ್ದೇ ಭೀಕರ ಕೃತ್ಯವೊಂದು ನಡೆದಿತ್ತು. ಅಪ್ತಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಆಕೆ ರಕ್ತಸ್ರಾವದಿಂದ ಸಹಾಯಕ್ಕಾಗಿ ಮನೆ-ಮನೆಗಳ ಎದುರು ಅಂಗಲಾಚಿದ್ದಳು. ಆದರೂ, ಯಾರೂ ಆಕೆಯ ನೆರವಿಗೆ ಬರಲಿಲ್ಲ. ದೇವಸ್ಥಾನದ ಅರ್ಚಕರೊಬ್ಬರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು.