ಸ್ಮರಣೆ | ಶಿಕ್ಷಣದ ಹಕ್ಕು, ಸಾಮಾಜಿಕ ನ್ಯಾಯದ ಧ್ಯೇಯ ಹೊಂದಿದ್ದ ಮೆಕಾಲೆ ನಿಜವಾದ ʼಲಾರ್ಡ್ʼ

Date:

Advertisements

ಮೆಕಾಲೆ ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಮಹಾನ್ ವ್ಯಕ್ತಿ. ಅದರ ಪರಿಣಾಮವಾಗಿ ಭಾರತದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿ ಆಧುನಿಕ ಭಾರತ ನಿರ್ಮಾಣವಾಗಲು ನೆರವಾಯಿತು.

ಭಾರತದಲ್ಲಿ ಲಾರ್ಡ್ ಮೆಕಾಲೆ ಎಂಬ ಚುಟುಕು ಹೆಸರಿನಿಂದ ಪ್ರಖ್ಯಾತನಾಗಿರುವ ಥಾಮಸ್ ಬ್ಯಾಬಿಂಗ್‌ಟನ್ ಮೆಕಾಲೆ 224 ವರ್ಷಗಳ ಹಿಂದೆ, ಅಂದರೆ 1800ರ ಅಕ್ಟೋಬರ್ 25ರಂದು ಇಂಗ್ಲೆಂಡಿನ ಲೆಸ್ಟರ್‌ ಶೈರ್ ಎಂಬಲ್ಲಿ ಜನಿಸಿದನು. ಈತ ಬ್ರಿಟಿಷ್ ಇತಿಹಾಸಕಾರ, ಕವಿ ಮತ್ತು ರಾಜಕಾರಣಿ. ಮೆಕಾಲೆ ಭಾರತದ ಆಧುನಿಕ ಶಿಕ್ಷಣದ ಪಿತಾಮಹ ಮಾತ್ರವಲ್ಲದೇ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ- ವರ್ಗದವರ ಪಾಲಿಗೆ ವಿದ್ಯಾನಿಧಿಯೂ ಹೌದು. ಹಾಗಾಗಿ ಮೆಕಾಲೆ ಹೆಸರು ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಮೆಕಾಲೆ ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಮಹಾನ್ ವ್ಯಕ್ತಿ. ಅದರ ಪರಿಣಾಮವಾಗಿ ಭಾರತದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆದು ಆಧುನಿಕ ಭಾರತ ನಿರ್ಮಾಣವಾಗಲು ನೆರವಾಯಿತು.

Advertisements

19ನೆ ಶತಮಾನವು ಯುರೋಪಿನ ವಸಾಹತುಶಾಹಿ ಸಾಮ್ರಾಜ್ಯಗಳಿಂದಾಗಿ ಇಡೀ ಪ್ರಪಂಚವು ಪಾಶ್ಚಾತ್ಯೀಕರಣಕ್ಕೆ ಒಗ್ಗಿಕೊಂಡಿತು. ಯುರೋಪಿಯನ್ನರು ತಮ್ಮ ತೆಕ್ಕೆಗೆ ಬಂದ ದೇಶಗಳಲ್ಲೆಲ್ಲ ತಮ್ಮ ಜ್ಞಾನ, ಸಂಸ್ಕೃತಿ ಮತ್ತು ಧರ್ಮವನ್ನು ಹರಡತೊಡಗಿದರು. ಭಾರತದಲ್ಲೂ ಯುರೋಪಿಯನ್ನರು ವಿಶೇಷವಾಗಿ ಬ್ರಿಟಿಷರು ತಮ್ಮ ಜ್ಞಾನ, ಸಂಸ್ಕೃತಿ ಮತ್ತು ಧರ್ಮವನ್ನು ಬಿತ್ತತೊಡಗಿದರು. ಇದರ ಫಲವಾಗಿ 1813ರಲ್ಲಿ ಈಸ್ಟ್ ಇಂಡಿಯಾ ಚಾರ್ಟರ್ ಎಂಬ ಹೆಸರಿನಲ್ಲಿ ಹೊಸತೊಂದು ಬೆಳಕಿನ ಕಿರಣವಾದ ಜ್ಞಾನದ ಕಾಯಿದೆ ರೂಪುಗೊಂಡಿತು. ಈ ಕಾಯಿದೆಯ ಪ್ರಕಾರ “ಭಾರತದಲ್ಲಿ ವಸೂಲಾಗುವ ಕಂದಾಯದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಇಲ್ಲದಷ್ಟು ಹಣವನ್ನು ಸ್ಥಳೀಯ ಜ್ಞಾನ, ಸಾಹಿತ್ಯ, ವಿಜ್ಞಾನದ ಕಲಿಕೆಗೆ ವಿನಿಯೋಗಿಸಬೇಕೆಂದು ಆದೇಶಿಸಲಾಯಿತು. ಇದರ ಪರಿಣಾಮವಾಗಿ ಭಾರತದಲ್ಲಿ ಶಿಕ್ಷಣದ ಪ್ರಸಾರವು ಆರಂಭವಾಯಿತು.

ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಂತೆ ಭಾರತದ ಮುಖ್ಯ ಪಟ್ಟಣಗಳಲ್ಲಿ ಶಾಲಾ-ಕಾಲೇಜುಗಳು ಆರಂಭವಾಗತೊಡಗಿದವು. ಆದರೆ ಹೆಚ್ಚಿನ ಶಾಲಾ ಕಾಲೇಜುಗಳಲ್ಲಿ ಪರ್ಶಿಯನ್/ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಾಗೂ ಅತಿ ವಿರಳವಾಗಿ ಲೋಕಾಯ ಭಾಷೆಗಳಲ್ಲಿ ಬೋಧನೆ ಪ್ರಾರಂಭವಾಯಿತು. ಸಂಸ್ಕೃತ ಮತ್ತು ಪರ್ಶಿಯನ್ ಭಾಷೆಯ ಬೋಧನೆಯಿಂದಾಗಿ ಸೀಮಿತವಾದ ವರ್ಗದವರಿಗೆ ಮಾತ್ರ ವಿದ್ಯೆ ಲಭಿಸುವಂತಾಯಿತು. ಸಂಸ್ಕೃತ ಬೋಧನೆಯ ಶಿಕ್ಷಣವು ಹಿಂದೂ ಮೇಲ್ಜಾತಿಯ ಬ್ರಾಹ್ಮಣರಿಗೆ ಲಭ್ಯವಾದರೆ, ಪರ್ಶಿಯನ್ ಅರೇಬಿಕ್ ಭಾಷೆಯ ಬೋಧನೆಯು ಮುಸಲ್ಮಾನರ ಉನ್ನತ ವರ್ಗದವರಿಗೆ ಲಭ್ಯವಾಗುತ್ತಿತ್ತು. ಸಾಮಾನ್ಯ ಜನರಿಗೆ ಅಂದರೆ ಹಿಂದುಳಿದ ಜಾತಿಯವರಿಗೆ ಮತ್ತು ಅಸ್ಪೃಶ್ಯರಿಗೆ ವಿದ್ಯೆ ಕನಸಾಗಿಯೇ ಉಳಿಯಿತು. ಅಲ್ಲದೇ ಶಿಕ್ಷಣವು ಭಾರತೀಯ ಧರ್ಮಗಳು, ತತ್ವಶಾಸ್ತ್ರ, ಕಲೆ, ಸಾಹಿತ್ಯ ಸೇರಿದಂತೆ ಸಾಂಪ್ರದಾಯಿಕ ಬೋಧನೆಗಳಿಗೆ ಸೀಮಿತವಾಗಿತ್ತು. ಶಿಕ್ಷಣ ನೀಡುತ್ತಿದ್ದ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಈಸ್ಟ್ ಇಂಡಿಯಾ ಕಂಪನಿಯಿಂದ ಸಹಾಯಧನ ಲಭ್ಯವಾಗುತ್ತಿತ್ತು.

ಇಂತಹ ಶಿಕ್ಷಣ ಪದ್ಧತಿ ಜಾರಿಯಾಗಿದ್ದ ಸಂದರ್ಭದಲ್ಲಿ ಮೆಕಾಲೆ 1830ರಲ್ಲಿ ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್‌ಗೆ ಸದಸ್ಯರಾಗಿ ಆಯ್ಕೆಯಾಗಿ 1834ರಲ್ಲಿ ಭಾರತದ “ಆಡಳಿತ ಸುಪ್ರೀಂ ಕೌನ್ಸಿಲ್” ನ ಸದಸ್ಯರಾಗಿ ನೇಮಿಸಲ್ಪಟ್ಟರು. ಭಾರತಕ್ಕೆ ಬಂದ ಮೆಕಾಲೆ 1838ರವರೆಗೆ ಅಂದರೆ ಸುಮಾರು ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಮೆಕಾಲೆ ತಮ್ಮ ಅಧಿಕಾರದ ಅವಧಿಯಲ್ಲಿ ಮುಖ್ಯವಾಗಿ ಎರಡು ಬದಲಾವಣೆಗಳನ್ನು ತಂದರು. ಅವುಗಳೆಂದರೆ 1) ಶೈಕ್ಷಣಿಕ ಬದಲಾವಣೆ 2) ಭಾರತೀಯ ದಂಡಸಂಹಿತೆ ರಚನೆ.

ಭಾರತದಲ್ಲಿ ಶಿಕ್ಷಣವು ನಿಂತ ನೀರಾಗಿರುವುದನ್ನು ಹಾಗೂ ಸೀಮಿತ ಜನರಿಗೆ ಮಾತ್ರ ವಿದ್ಯೆ ದೊರೆಯುತ್ತಿರುವುದನ್ನು ಮನಗಂಡ ಮೆಕಾಲೆ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅನೇಕ ಬದಲಾವಣೆಗಳನ್ನು ಜಾರಿಗೆ ತಂದನು. ಫೆಬ್ರವರಿ 1835ರಂದು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಸಿದ್ಧಪಡಿಸಿದ ʼಮಿನಿಟ್‌ ಆನ್‌ ಇಂಡಿಯನ್‌ ಎಜುಕೇಷನ್‌ʼ ಎಂಬ ಜ್ಞಾಪನಾ ಪತ್ರದಲ್ಲಿ ಅನೇಕ ಶಿಫಾರಸ್ಸುಗಳನ್ನು ಈಸ್ಟ್ ಇಂಡಿಯಾ ಕಂಪನಿಯ ಸರ್ಕಾರಕ್ಕೆ ಮಂಡಿಸಿದನು.

ಪ್ರಮುಖ ಶಿಫಾರಸ್ಸುಗಳು
1. ಭಾರತೀಯರಿಗೆ ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣವನ್ನು ನೀಡಬೇಕು.
2. ಇಂಗ್ಲಿಷ್ ಮಾತನಾಡುವ ಭಾರತೀಯರಿಗೆ ಶಿಕ್ಷಕರಾಗಿ ತರಬೇತಿ ನೀಡಬೇಕು.
3. ಮಾತೃ ಭಾಷೆಯ ಮೂಲಕ ಶಿಕ್ಷಣ ಪಡೆಯಲಾಗದ ಜನರಿಗೆ ಶಿಕ್ಷಣ ನೀಡಬೇಕು.
4. ಶಾಲಾ ಶಿಕ್ಷಣದ ಬೋಧನೆಯು ಯುರೋಪಿಯನ್ ಮಾದರಿಯ ಕಲಿಕೆಯಲ್ಲಿರಬೇಕು.
5. ಶಿಕ್ಷಣಕ್ಕೆ ಮೀಸಲಾದ ಎಲ್ಲಾ ಹಣಕಾಸನ್ನು ಇಂಗ್ಲಿಷ್ ಶಿಕ್ಷಣಕ್ಕೆ ಖರ್ಚು ಮಾಡಬೇಕು.
6. ಭಾರತದಲ್ಲಿ ಯುರೋಪಿಯನ್ ವಿಜ್ಞಾನ ಮತ್ತು ಸಾಹಿತ್ಯದ ಕಲಿಕೆಯನ್ನು ಉತ್ತೇಜಿಸಬೇಕು.
7. ಅರೆಬಿಕ್/ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಗಳ ಪುಸ್ತಕಗಳ ಪ್ರಕಟಣೆಗೆ ಬೆಂಬಲವನ್ನು ನಿಲ್ಲಿಸಬೇಕು.
8. ಸಾಂಪ್ರದಾಯಿಕ ಶಿಕ್ಷಣ ಬೆಂಬಲಿಸುತ್ತಿರುವ ವಿದ್ಯಾಸಂಸ್ಥೆಗಳು ಸದರಿ ಶಿಕ್ಷಣ ಬೆಂಬಲಿಸುವುದನ್ನು ಸಲ್ಲಿಸಬೇಕು ಹಾಗೂ ಇಂತಹ ಶಾಲಾ-ಕಾಲೇಜುಗಳಿಗೆ ನೀಡುತ್ತಿರುವ ಧನಸಹಾಯವನ್ನು ಕಡಿತಗೊಳಿಸಬೇಕು.

ಮೆಕಾಲೆ ತನ್ನ ಶಿಫಾರಸ್ಸಿನಲ್ಲಿ ಯುರೋಪಿಯನ್ ಜ್ಞಾನ, ಸಾಹಿತ್ಯ, ತತ್ವಶಾಸ್ತ್ರಗಳ ಬಗ್ಗೆ ಹೊಗಳಿಕೆಯ ಸುರಿಮಳೆಗೈದಿದ್ದಾನೆ. ಯುರೋಪಿಯನ್ ಶಿಕ್ಷಣದ ಬಗ್ಗೆ ಮೆಕಾಲೆಯ ಒಟ್ಟಾರೆ ಅಭಿಪ್ರಾಯಗಳು ಹೇಗಿತ್ತೆಂದರೆ, “ಯುರೋಪಿಯನ್ ಲೈಬ್ರರಿಯ ಒಂದು ಕಪಾಟಿನ ಸಾಹಿತ್ಯವು ಭಾರತ ಮತ್ತು ಅರೇಬಿಯಾದ ಸಂಪೂರ್ಣ ಸ್ಥಳೀಯ ಸಾಹಿತ್ಯಕ್ಕೆ ಸಮನಾಗಿದೆ”. ಒಟ್ಟಾರೆ ಪೌರಾತ್ಯ ಶಿಕ್ಷಣ ಮತ್ತು ಜ್ಞಾನದ ಬಗ್ಗೆ ಅಸಮ್ಮತ ವ್ಯಕ್ತಪಡಿಸಿದ ಮೆಕಾಲೆ ಪಾಶ್ಚಿಮಾತ್ಯ ಶಿಕ್ಷಣವು ಶ್ರೇಷ್ಠವಾದದ್ದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

Macaulay

ಮೆಕಾಲೆ ನೀಡಿದ ಶಿಫಾರಸ್ಸನ್ನು ಮನ್ನಿಸಿದ ಈಸ್ಟ್ ಇಂಡಿಯಾ ಕಂಪನಿ ಸರ್ಕಾರವು 1840ರಲ್ಲಿ ಬೋರ್ಡ್ ಆಫ್ ಎಜುಕೇಷನ್ ಸ್ಥಾಪಿಸಿತು. ಅದರ ಫಲವಾಗಿ ಒಂದೆರಡು ಜಾತಿ ಮತ್ತು ವರ್ಗದ ಜನರಿಗೆ ಸೀಮಿತವಾಗಿದ್ದ ಶಿಕ್ಷಣವು ಭಾರತದಾದ್ಯಂತ ಜಾತಿ, ಲಿಂಗ, ಧರ್ಮದ ಭೇದವಿಲ್ಲದೇ ಎಲ್ಲರಿಗೂ ತೆರೆದುಕೊಂಡಿತು. ಇದರ ಪರಿಣಾಮವಾಗಿ ಜ್ಯೋತಿ ಬಾಫುಲೆಯಂತಹ ಹಿಂದುಳಿದ ಜಾತಿಗೆ ಸೇರಿದವರು ಶಿಕ್ಷಣ ಪಡೆಯಲು ಹಾಗೂ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು. ಹಿಂದುಳಿದ ಜಾತಿಗಳ, ಅಸ್ಪೃಶ್ಯ ಹಾಗೂ ಗಿರಿಜನರ ವಿಮೋಚನಾ ಸ್ವಾತಂತ್ರ್ಯಕ್ಕೆ ನಾಂದಿಯಾಯಿತು.

ಇಂಗ್ಲಿಷ್ ಶಿಕ್ಷಣದ ಮೂಲಕ ಮೆಕಾಲೆ, ಬ್ರಿಟಿಷರ ಮತ್ತು ಭಾರತೀಯರ ನಡುವೆ ಒಂದು ಸೇತುವೆಯಾಗಿ ವ್ಯವಹರಿಸುವ ವಿದ್ಯಾವಂತರನ್ನು ನಿರ್ಮಿಸುವ ಕನಸು ಸಾಫಲ್ಯ ಕಂಡಿತು. ಆಡಳಿತದ ಅನುಕೂಲಕ್ಕೆ ಸ್ಥಳೀಯ ಜನರಿಗೆ ಶಿಕ್ಷಣ ನೀಡಿ ಪತ್ರ ಬರೆಯುವ ಹಾಗೂ ದಾಖಲೆ ಪತ್ರಗಳನ್ನು ಸಂಗ್ರಹಿಸಿಡುವ ಕಾರಕೂನರು ತುರ್ತಾಗಿ ಬೇಕಾಗಿದ್ದು ಅದನ್ನು ಸಾಧಿಸಿದಂತಾಯಿತು.

ಮೆಕಾಲೆಯ ಇಂಗ್ಲಿಷ್ ಶಿಕ್ಷಣದ ನೀತಿಯಿಂದಾಗಿ ಇಂಗ್ಲಿಷ್ ಭಾಷೆ ಭಾರತದಾದ್ಯಂತ ಹರಡಲು ಸಾಧ್ಯವಾಯಿತು. ಇಂಗ್ಲಿಷ್ ಶಿಕ್ಷಣದಿಂದಾಗಿ ಭಾರತದಲ್ಲಿ ರಾಷ್ಟ್ರೀಯತೆ ಬೆಳೆದು ಸ್ವಾತಂತ್ರ್ಯ ಚಳವಳಿಗೆ ಉತ್ತೇಜನ ದೊರೆಯಿತು. ಸಾಂಪ್ರದಾಯಿಕ ಶಿಕ್ಷಣಕ್ಕೆ ಬದಲಾಗಿ ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಹಾಕಿದಂತಾಯಿತು. ಭಾರತದಲ್ಲಿ ಹೊಸ ಸಾಹಿತ್ಯ ಪ್ರಕಾರಗಳು, ಬರವಣಿಗೆಗಳು, ಬರವಣಿಗೆಯ ಹೊಸ ತಂತ್ರಗಳು ಹೊರಹೊಮ್ಮಿ ವಿಶ್ವ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯದ ಪ್ರವೇಶವನ್ನು ಸಾಧ್ಯವಾಗಿಸಿತು. ಅಲ್ಲದೆ ಇಂಗ್ಲಿಷ್ ಶಿಕ್ಷಣದಿಂದಾಗಿ ಆಂಗ್ಲರ ಪರವಾದ ಅಭಿಪ್ರಾಯವು ರೂಪುಗೊಳ್ಳಲು ಯಶಸ್ವಿಯಾಯಿತು.

ಇದನ್ನೂ ಓದಿ ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ; ಮಹಿಳಾ ಪ್ರಾತಿನಿಧ್ಯಕ್ಕೆ ಇನ್ನೆಷ್ಟು ಕಾಲ ಕಾಯಬೇಕು?

ಇಂಡಿಯನ್ ಪೀನಲ್ ಕೋಡ್ ಕೊಡುಗೆ (ಭಾರತೀಯ ದಂಡಸಂಹಿತೆ)

ಭಾರತೀಯ ದಂಡಸಂಹಿತೆ ರಚನೆಯು ಮೆಕಾಲೆಯ ಮತ್ತೊಂದು ಕೊಡುಗೆ. ಭಾರತದಲ್ಲಿ ಮುಸ್ಲಿಮರ ಮತ್ತು ಹಿಂದೂ ರಾಜರ ಆಡಳಿತದಲ್ಲಿ ಜಾರಿಯಲ್ಲಿದ್ದ ಧರ್ಮ ಹಾಗೂ ಜಾತಿ ಆಧಾರಿತ ನ್ಯಾಯ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿದ ಮೆಕಾಲೆ ಐ.ಪಿ.ಸಿ.ಯ ಕರಡನ್ನು 1834ರಲ್ಲಿ ಸಿದ್ಧಪಡಿಸಿದನು. ಸಿದ್ಧಪಡಿಸಲಾದ ಕಾನೂನನ್ನು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಅಂದರೆ 1860ರಲ್ಲಿ ಇಂಪೀರಿಯಲ್ ಕೌನ್ಸಿಲ್ ಮೂಲಕ ಜಾರಿಗೊಳಿಸಲಾಯಿತು. ಅನಾದಿ ಕಾಲದಿಂದಲೂ ರೂಢಿಯಲ್ಲಿದ್ದ ಜಾತಿ ಆಧಾರಿತ ಧರ್ಮಗ್ರಂಥಗಳ ಆಧಾರಿತ ನ್ಯಾಯ ಪದ್ಧತಿಯನ್ನು ತಿರಸ್ಕರಿಸಿ ಎಲ್ಲಾ ಭಾರತೀಯರಿಗೆ ಏಕರೂಪದ ಶಿಕ್ಷೆಯ ಕಾನೂನು ಜಾರಿಗೆ ಬಂದಿತು.

ಹೀಗೆ ಭಾರತದಲ್ಲಿ “ಶಿಕ್ಷಣ ಎಲ್ಲರಿಗೂ ದೊರೆಯಬೇಕಾದ ಹಕ್ಕು, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಸಾಮಾಜಿಕ ನ್ಯಾಯಕ್ಕೆ ಎಲ್ಲರೂ ಅರ್ಹರು” ಎಂಬ ಧ್ಯೇಯವನ್ನು ಹೊಂದಿದ್ದ ಲಾರ್ಡ್ ಮೆಕಾಲೆ ನಿಜವಾಗಿಯೂ ಲಾರ್ಡ್ ಎಂಬ ವಿಶೇಷಣಕ್ಕೆ ಅರ್ಹ ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರೊ ರಾಚಪ್ಪ
ಪ್ರೊ. ಹೆಚ್. ರಾಚಪ್ಪ
+ posts

ನಿವೃತ್ತ ಪ್ರಾಂಶುಪಾಲರು. ಗೌರವ ಅಧ್ಯಕ್ಷರು, ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಹೆಚ್. ರಾಚಪ್ಪ
ಪ್ರೊ. ಹೆಚ್. ರಾಚಪ್ಪ
ನಿವೃತ್ತ ಪ್ರಾಂಶುಪಾಲರು. ಗೌರವ ಅಧ್ಯಕ್ಷರು, ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ

2 COMMENTS

    • Which education yoiu are speaking about? Education was restricted to few castes in our country. Because of him oppressed classes got education. Guess you belong to upper caste of Manuvada that is why you are against his policies. The people like you are the threat to harmony of Indian society. You are a criminal.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X