24 ವರ್ಷಗಳ ಹಿಂದೆ ಅವಿಭಜಿತ ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಜರುಗಿದ ಕಂಬಾಲಪಲ್ಲಿ ದಲಿತರ ನರಮೇಧ ಇನ್ನೂ ನ್ಯಾಯದ ಬೆಳಕನ್ನು ಕಂಡಿಲ್ಲ. ರಾಜ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಹತ್ತು ವರ್ಷಗಳಿಂದ ಸುಪ್ರೀಮ್ ಕೋರ್ಟಿನಲ್ಲಿ ಕೊಳೆಯುತ್ತಿದೆ.
ಭಾರತದ ದಲಿತರು ಆದಿವಾಸಿಗಳು ಹಾಗೂ ಹೆಣ್ಣುಕುಲದ ಮೇಲೆ ನಡೆದಿರುವ ಅಮಾನುಷ ದೌರ್ಜನ್ಯಗಳು ಅಂಕಿಅಂಶಗಳ ಅಳತೆಗೆ ದಕ್ಕದಷ್ಟು ಅಪಾರ ಅನಂತ. ವಿದ್ಯಾಭ್ಯಾಸ, ವಿಜ್ಞಾನ, ನಾಗರಿಕತೆ ಯಾವುವೂ ಜಾತಿ ವ್ಯವಸ್ಥೆ ಮತ್ತು ಗಂಡಾಳಿಕೆಯ ಕೂದಲನ್ನೂ ಕೊಂಕಿಸಿಲ್ಲ. ಬದಲಾಗಿ ಈ ಅಂಶಗಳು ಇನ್ನಷ್ಟು ಹೆಚ್ಚು ಕ್ರೌರ್ಯವನ್ನು ರೂಕ್ಷ ಮತ್ತು ಸೂಕ್ಷ್ಮ ರೂಪಗಳಲ್ಲಿ ಹರಿಯಬಿಟ್ಟಿವೆ. ಪೊಲೀಸು ಠಾಣೆ- ನ್ಯಾಯಾಲಯಗಳ ಮೆಟ್ಟಿಲು ಹತ್ತಲೂ ತ್ರಾಣವಿಲ್ಲದ ಈ ವರ್ಗಗಳ ಮೇಲೆ ನಡೆಯುವ ಅತ್ಯಾಚಾರ, ಹತ್ಯೆ, ದೌರ್ಜನ್ಯಗಳು ಬಯಲಿಗೆ ಬಾರದೆ ಹುದುಗಿ ಹೋಗುತ್ತವೆ.
ಬಯಲಿಗೆ ಬಂದ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಹೋರಾಡುವುದು ಮತ್ತು ಅದನ್ನು ದಕ್ಕಿಸಿಕೊಳ್ಳುವುದು ಉಕ್ಕಿ ಹರಿಯುವ ಪ್ರವಾಹದ ವಿರುದ್ಧ ಈಜುವುದಲ್ಲದೆ ಬೇರೇನೂ ಅಲ್ಲ. ನ್ಯಾಯವೆಂಬುದು ದಲಿತರ ಪಾಲಿನ ಬಿಸಿಲು ಕುದುರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆಸಿದ್ದ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅತಿ ಅಪರೂಪದ ನ್ಯಾಯದಾನವಿದು. ಆದರೆ ಜಿಲ್ಲಾ ನ್ಯಾಯಾಲಯದ ಈ ತೀರ್ಪಿನ ಪ್ರಯಾಣ ಇಲ್ಲಿಗೇ ನಿಲ್ಲುವುದಿಲ್ಲ. ಹೈಕೋರ್ಟು, ಸುಪ್ರೀಮ್ ಕೋರ್ಟುಗಳ ಮೆಟ್ಟಿಲೇರಲಿದೆ. ಈ ನ್ಯಾಯದಾನ ತೆಳುವಾಗಿ ಅಥವಾ ತಲೆಕೆಳಗಾಗಿ ನಿಂತರೆ ಆಶ್ಚರ್ಯಪಡಬೇಕಿಲ್ಲ.

ಉದಾಹರಣೆಗೆ ಸುಮಾರು 24 ವರ್ಷಗಳ ಹಿಂದೆ ಅವಿಭಜಿತ ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಜರುಗಿದ ಕಂಬಾಲಪಲ್ಲಿ ದಲಿತರ ನರಮೇಧ ಇನ್ನೂ ನ್ಯಾಯದ ಬೆಳಕನ್ನು ಕಂಡಿಲ್ಲ. ರಾಜ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಹತ್ತು ವರ್ಷಗಳಿಂದ ಸುಪ್ರೀಮ್ ಕೋರ್ಟಿನಲ್ಲಿ ಕೊಳೆಯುತ್ತಿದೆ.
ಕಂಬಾಲಪಲ್ಲಿ ನರಮೇಧದ ವಿಚಾರಣೆ ಎರಡೂ ನ್ಯಾಯಾಲಯಗಳಲ್ಲಿ ನ್ಯಾಯವಾಗಿ ನಡೆದಿಲ್ಲ. ಕಾರಣ ಖುಲಾಸೆಯ ಆದೇಶಗಳನ್ನು ತಳ್ಳಿ ಹಾಕಿ ಮರು ವಿಚಾರಣೆಗೆ ಆದೇಶ ನೀಡಬೇಕೆಂಬುದು ರಾಜ್ಯ ಸರ್ಕಾರದ ಮೇಲ್ಮವಿಯ ತಿರುಳು. ಮನುಷ್ಯರಾಗಿ ಬದುಕಿ ಉಳಿಯಲು ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಂಡದ್ದೇ ಕಂಬಾಲಪಲ್ಲಿ ದಲಿತರ ಏಕೈಕ ಅಪರಾಧ ಆಗಿತ್ತು ಎಂಬುದು ಮೇಲ್ಮನವಿಯ ನಿವೇದನೆ.
ಈ ನಡುವೆ ಈ ನರಮೇಧದ ಮುಖ್ಯಸಾಕ್ಷಿಯಾಗಿ ಉಳಿದಿದ್ದ ವೆಂಕಟರಾಯಪ್ಪ (78) ಕೂಡ 2017ರಲ್ಲೇ ತೀರಿ ಹೋದರು. ಕಂಬಾಲಪಲ್ಲಿಯಲ್ಲಿ ಮೇಲ್ಜಾತಿಗಳು ಇಟ್ಟ ಬೆಂಕಿಯಲ್ಲಿ ಜೀವಂತ ಸುಟ್ಟು ಕರಕಲಾದ ಏಳು ಮಂದಿ ದಲಿತರ ಪೈಕಿ ವೆಂಕಟರಾಯಪ್ಪ ಅವರ ಪತ್ನಿ ರಾಮಕ್ಕ, ಮಗಳು, ಇಬ್ಬರು ಗಂಡುಮಕ್ಕಳು ಹಾಗೂ ಸೋದರಿ ಸೇರಿದ್ದಾರೆ.
ಕೋಲಾರದ ಕಂಬಾಲಪಲ್ಲಿ ದಲಿತ ನರಮೇಧ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟಿನಿಂದ ನ್ಯಾಯ ಸಂದಿಲ್ಲವೆಂದು ದೂರಿ ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಮ್ ಕೋರ್ಟು 2015ರ ಫೆಬ್ರವರಿಯಲ್ಲಿ ವಿಚಾರಣೆಗೆ ಅಂಗೀಕರಿಸಿತ್ತು. ಆಂಧ್ರಪ್ರದೇಶದ ಗಡಿ ಭಾಗಕ್ಕೆ ಅಂಟಿಕೊಂಡಂತಿರುವ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ 2000ದ ಮಾರ್ಚ್ ಹನ್ನೊಂದರಂದು 150ಕ್ಕೂ ಹೆಚ್ಚು ಮೇಲ್ಜಾತಿ ರೆಡ್ಡಿಗಳ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿ, ಏಳು ಮಂದಿ ದಲಿತರನ್ನು ಮನೆಯೊಳಗೆ ಕೂಡಿ ಹಾಕಿ ಚಿಮಣಿಗಳಿಂದ ಸೀಮೆ ಎಣ್ಣೆ ಸುರಿದು, ಅವರನ್ನು ಹೊರಗೆ ಬರಲು ಬಿಡದೆ, ಅವರ ರಕ್ಷಣೆಗೆಂದು ಬಂದವರನ್ನು ತಡೆದು ಕೊಂದು ಹಾಕಿದ ಕ್ರೂರ ಪ್ರಕರಣವಿದು.
ಭೂಮಾಲೀಕ ರೆಡ್ಡಿಗಳ ಜಮೀನುಗಳಲ್ಲಿ ಕೂಲಿ ಮಾಡಿ ಹೊಟ್ಟೆ ಹೊರೆಯುತ್ತಿದ್ದ ದಲಿತರು ಶಿಕ್ಷಣ ಪಡೆದು ತಮಗೆ ಸಮಾನರಾಗಿ ಬೆಳೆಯುವುದನ್ನು, ಹಕ್ಕುಗಳ ಚಲಾವಣೆಗೆ ಮುಂದಾದ ವಿದ್ಯಮಾನವನ್ನು ಮೇಲ್ಜಾತಿ ರೆಡ್ಡಿಗಳು ನಿತ್ತರಿಸದೆ ಕೊಂದು ಹಾಕಿದ್ದರು. ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯರೂ, ಸಾಮಾಜಿಕವಾಗಿ ಮೇಲ್ಮಟ್ಟದವರೂ ಹಾಗೂ ಬಹುಸಂಖ್ಯಾತರೂ ಆದ ಮೇಲ್ಜಾತಿಗಳವರು (ಬಹುತೇಕ ರೆಡ್ಡಿಗಳು) ಸಮಾಜದ ಅತ್ಯಂತ ಕೆಳವರ್ಗಕ್ಕೆ ಸೇರಿದ ಮಾಲ-ಮಾದಿಗರೆಂಬ ದಲಿತರ ಮೇಲೆ ನಡೆಸಿದ ದಾಳಿಯದು. ಮನುಷ್ಯರಾಗಿ ಬದುಕಿ ಉಳಿಯಲು ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಂಡದ್ದೇ ಈ ದಲಿತರು ಮಾಡಿರುವ ಏಕೈಕ ಅಪರಾಧ.

ಮೂರು ಮನೆಗಳಿಗೆ ಇಟ್ಟ ಬೆಂಕಿಯಲ್ಲಿ ರಾಮಕ್ಕ, ಶ್ರೀರಾಮಪ್ಪ, ಅಂಜನಪ್ಪ, ಪಾಪಮ್ಮ, ಸುಬ್ಬಮ್ಮ, ನರಸಿಂಹಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರ ಸುಟ್ಟಗಾಯಗಳಿಂದಾಗಿ ಕುಂಟಿ ಪಾಪಣ್ಣ ಆಸ್ಪತ್ರೆಯ ದಾರಿಯಲ್ಲೇ ಅಸುನೀಗಿದ. ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡು 32 ಮಂದಿ ಆಪಾದಿತರ ಮೇಲೆ ಚಾರ್ಜ್‌ಶೀಟ್ ಸಿದ್ಧಪಡಿಸಿದರು. 91 ಮಂದಿ ಸಾಕ್ಷೀದಾರರ ಪೈಕಿ 24 ಮಂದಿ ಘಟನೆಯನ್ನು ಕಣ್ಣಾರೆ ಕಂಡವರು. ಒಟ್ಟು 91 ಮಂದಿ ಸಾಕ್ಷೀದಾರರ ಪೈಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ್ದು ಕೇವಲ 56 ಮಂದಿಯನ್ನು ಮಾತ್ರವೇ. ಅಧೀನ ನ್ಯಾಯಾಲಯದ ದಾಖಲೆ ದಸ್ತಾವೇಜುಗಳು ಶೋಚನೀಯ ಕತೆಯನ್ನು ಸಾರುತ್ತವೆ. ಇಡೀ ವಿಚಾರಣೆಯನ್ನು ಅತ್ಯಂತ ಕಳಪೆಯಾಗಿ ನಡೆಸಲಾಯಿತು. ಕೆಲವು ಸರ್ಕಾರಿ ಸಾಕ್ಷಿಗಳ ವಿನಾ ಉಳಿದೆಲ್ಲ ಸಾಕ್ಷಿಗಳು ತಮ್ಮ ಆರಂಭದ ಹೇಳಿಕೆಗಳನ್ನು ನಿರಾಕರಿಸಿ ತಿರುಗಿಬಿದ್ದರು ಎಂಬುದಾಗಿ ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರಾಸಿಕ್ಯೂಷನ್ನಿನ(ಸರ್ಕಾರಿ) ಮೂವತ್ತೆರಡು ಮಂದಿ ಪ್ರತ್ಯಕ್ಷ ಸಾಕ್ಷೀದಾರರು ತಾವು ಒತ್ತಡಕ್ಕೊಳಗಾಗಿ ತಿರುಗಿಬಿದ್ದದ್ದಾಗಿ ಕಾರಣಗಳನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುತ್ತಾರೆ. ಸತ್ಯ ಹೇಳಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತಾರೆ. ಆದರೆ ಅವರ ಮನವಿಗೆ ರಾಜ್ಯ ಹೈಕೋರ್ಟು ಕಿವುಡಾಗುತ್ತದೆ. ಈ ಪ್ರಕರಣದ ವಿಚಾರಣೆಯೇ ಒಂದು ಪ್ರಹಸನದಂತೆ ನಡೆದಿದ್ದು, ಕಾಯಿದೆ ಕಾನೂನು ಪ್ರಕಾರ ನಡೆದ ವಿಚಾರಣೆ ಎಂದು ಹೇಳಲು ಬರುವುದೇ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಗುಜರಾತಿನ ಬೆಸ್ಟ್ ಬೇಕರಿ ಹತ್ಯಾಕಾಂಡದ ಕೇಸಿನಲ್ಲಿ ಎಲ್ಲ ಸಾಕ್ಷೀದಾರರು ತಿರುಗಿಬಿದ್ದಿದ್ದ ಪರಿಸ್ಥಿತಿಯಲ್ಲಿ ಸುಪ್ರೀಮ್ ಕೋರ್ಟು ನೀಡಿರುವ ತೀರ್ಪನ್ನು ರಾಜ್ಯದ ಮೇಲ್ಮನವಿಯಲ್ಲಿ ಧಾರಾಳವಾಗಿ ಉಲ್ಲೇಖಿಸಲಾಗಿದೆ.
ಹೀಗೆ ಸರ್ಕಾರಿ ಸಾಕ್ಷೀದಾರರು ಸಗಟಾಗಿ ತಿರುಗಿಬಿದ್ದ ಪರಿಸ್ಥಿತಿಯಲ್ಲಿ ನ್ಯಾಯಾಧೀಶರು ಕೇವಲ ಟೇಪ್ ರೆಕಾರ್ಡಿನ ಕೆಲಸ ನಿರ್ವಹಿಸಿ ಮೂಕಪ್ರೇಕ್ಷಕರಾಗುವುದು ಸಲ್ಲದು….ಕಳಂಕಿತ ಸಾಕ್ಷ್ಯ, ತತ್ವಹೀನ ಸರ್ಕಾರಿ ವಕೀಲ, ಅನ್ಯಾಯದ ತನಿಖೆ, ಸಾಕ್ಷೀದಾರರನ್ನು ಬೆದರಿಸಿ ತಿರುಗಿ ಬೀಳುವಂತೆ ಮಾಡುವ ಹಿನ್ನೆಲೆಯ ಖುಲಾಸೆಗಳು ಕಾನೂನಿನ ಕಣ್ಣಿನಲ್ಲಿ ಖುಲಾಸೆಗಳೇ ಅಲ್ಲ. ಬದಲಾಗಿ ಅವುಗಳು ವಂಚನೆ ಮತ್ತು ಸತ್ಯದ ವಿಡಂಬನೆ ಎಂಬ ಸುಪ್ರೀಮ್ ಕೋರ್ಟಿನ ಮಾತುಗಳನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಕರಣದ ನ್ಯಾಯದಾನ ಹಳಿ ತಪ್ಪದಂತೆ ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯದಲ್ಲಿ ಹೈಕೋರ್ಟು ವಿಫಲವಾಗಿದ್ದು ಮೂಕಪ್ರೇಕ್ಷಕನಂತೆ ನಡೆದುಕೊಂಡಿದೆ.
ಅಪರಾಧ ನಡೆದದ್ದು ಹೇಗೆ ಮತ್ತು ಯಾರ್ಯಾರು ಕಾರಣರು ಹಾಗೂ ಈ ಅಪರಾಧ ನಡೆಯಲು ಪ್ರಾಸಿಕ್ಯೂಷನ್ನಿನ ನಿರ್ಲಕ್ಷ್ಯ ಎಷ್ಟರಮಟ್ಟಿಗೆ ಕಾರಣ ಎಂಬುದನ್ನು ಅರಿಯಲು ಸಾಕ್ಷಿಗಳನ್ನು ನ್ಯಾಯಾಲಯ ಪ್ರಶ್ನಿಸಬೇಕಿತ್ತು. ಹೀಗೆ ಮಾಡದೆ ಇರುವುದು ಅಧೀನ ನ್ಯಾಯಾಲಯದ ವೈಫಲ್ಯ. ತಿರುಗಿ ಬಿದ್ದಿರುವ ಪ್ರಾಸಿಕ್ಯೂಷನ್ ಸಾಕ್ಷಿಗಳು ತಾವು ಹಾಗೆ ತಿರುಗಿ ಬಿದ್ದದ್ದು ಒತ್ತಾಯದ ಮೇರೆಗೇ ವಿನಾ ಸ್ವಇಚ್ಛೆಯಿಂದ ಅಲ್ಲ ಎಂಬ ಪ್ರಾಸಿಕ್ಯೂಷನ್ನಿನ ಸಾಕ್ಷಿಗಳ ಪ್ರಮಾಣಪತ್ರಗಳನ್ನು ನಿರ್ಲಕ್ಷಿಸುವ ಮೂಲಕ ಹೈಕೋರ್ಟು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಪ್ರಾಸಿಕ್ಯೂಷನ್ನಿನ ಪರವಾದ ಎಲ್ಲ ಸಾಕ್ಷಿಗಳೂ ತಿರುಗಿಬಿದ್ದು, ಕೇಸೇ ಬಿದ್ದು ಹೋಗುವಂತಾಗಿ ನ್ಯಾಯದಾನ ಹಳಿ ತಪ್ಪಿದ ಈ ಪ್ರಕರಣದಲ್ಲಿ ಹೊಸದಾಗಿ ವಿಚಾರಣೆ ನಡೆಸುವಂತೆ ಆದೇಶ ನೀಡುವುದು ಹೈಕೋರ್ಟಿನ ಪ್ರಾಥಮಿಕ ಕರ್ತವ್ಯವಾಗಿತ್ತು ಎಂದೂ ಮೇಲ್ಮನವಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ.
ಪ್ರಾಸಿಕ್ಯೂಷನ್ನಿನ ಎಲ್ಲ ಸಾಕ್ಷಿದಾರರೂ ತೆಲುಗು ಮಾತ್ರವೇ ಬಲ್ಲವರಾಗಿದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಹಾಗೆಯೇ ಅಧೀನ ನ್ಯಾಯಾಲಯದ ನ್ಯಾಯಾಧೀಶರಿಗೆ ತೆಲುಗು ಭಾಷೆ ಗೊತ್ತಿರಲಿಲ್ಲ. ಎರಡೂ ಭಾಷೆಗಳನ್ನು ಬಲ್ಲೆನೆಂದು ಹೇಳಿಕೊಳ್ಳುವ ಸ್ಥಳೀಯ ವಕೀಲರೊಬ್ಬರ ನೆರವನ್ನು ನ್ಯಾಯಾಧೀಶರು ಪಡೆದರು. ಕ್ರಿಮಿನಲ್ ಕಾನೂನಿನ ಪ್ರಕಾರ ಇಂತಹ ಭಾಷಾಂತರ ಮಾಡಿದ ವಕೀಲರು ತಾವು ಮಾಡಿದ ಭಾಷಾಂತರ ಸರಿಯೆಂದು ಪ್ರಮಾಣಪತ್ರ ಸಲ್ಲಿಸಬೇಕು. ಈ ಭಾಷಾಂತರವನ್ನು ಸಾಕ್ಷೀದಾರರ ಭಾಷೆಗೆ (ಈ ಪ್ರಕರಣದಲ್ಲಿ ತೆಲುಗಿಗೆ) ಭಾಷಾಂತರಿಸಿ ಅವರಿಗೆ ಓದಿ ಹೇಳಿ ಸರಿಯಾಗಿದೆ ಎಂದು ಅವರಿಂದ ಸಮ್ಮತಿಯ ರುಜು ಪಡೆಯಬೇಕು. ನ್ಯಾಯಾಧೀಶರು ಈ ಯಾವುದೇ ಕಾನೂನು ವಿಧಿವಿಧಾನಗಳನ್ನು ಪಾಲಿಸಿಲ್ಲ. ಈ ಸಂಗತಿಯನ್ನು ಕೂಡ ಹೈಕೋರ್ಟು ಅವಗಣಿಸಿದ ಕಾರಣ ತೀರ್ಪನ್ನು ತಳ್ಳಿ ಹಾಕಬೇಕು. ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಅಂದು ಕರ್ತವ್ಯದ ಮೇಲೆ ಹಾಜರಿದ್ದ ಪೊಲೀಸ್ ಪೇದೆಯನ್ನು ನ್ಯಾಯಾಲಯಕ್ಕೆ ಕರೆಸಿ ವಿಚಾರಣೆಗೆ ಒಳಪಡಿಸದಿರುವ ಗಂಭೀರ ಲೋಪವನ್ನು ಕೂಡ ಹೈಕೋರ್ಟು ಪರಿಗಣಿಸಿಲ್ಲ.
ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಸಾಕ್ಷಿಯ ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ವಿಚಾರಣೆ ನಡೆಸಿದ್ದೇ ಅಲ್ಲದೆ, ಈ ಸಂಬಂಧ ತಮಗಿದ್ದ ವಿಶೇಷಾಧಿಕಾರವನ್ನು ಬಳಸಲು ವಿಫಲರಾದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಯಾವುದೇ ಸಕಾರಣಗಳನ್ನು ಪಟ್ಟಿ ಮಾಡದೆ ಉಂಡಾಗುತ್ತಿಗೆ ಖುಲಾಸೆ ಮಾಡಿದ್ದಾರೆ. ಈ ಅಂಶವನ್ನು ಗಮನಕ್ಕೆ ತಂದಾಗಲೂ ಹೈಕೋರ್ಟು ಅವಗಣಿಸಿ ತೀರ್ಪು ನೀಡಿದೆ ಎಂದು ಮೇಲ್ಮನವಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ.
ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಆಂಧ್ರದ ಕರಮಚೇಡು ದಲಿತ ನರಮೇಧದಲ್ಲಿ ಅಧೀನ ನ್ಯಾಯಾಲಯ 159 ಮಂದಿಗೆ ಆಜೀವ ಕಾರಾಗೃಹವಾಸ ಶಿಕ್ಷೆ ನೀಡಿತ್ತು. ಅಲ್ಲಿನ ಹೈಕೋರ್ಟು ಎಲ್ಲ ಆಪಾದಿತರನ್ನು ಖುಲಾಸೆಗೊಳಿಸಿತ್ತು. ಸುಪ್ರೀಮ್ ಕೋರ್ಟು ಜೀವಾವಧಿ ಶಿಕ್ಷೆಯನ್ನು ಮುಖ್ಯ ಆಪಾದಿತನಿಗೆ ಸೀಮಿತಗೊಳಿಸಿ ಇತರೆ 29 ಮಂದಿಗೆ ಮೂರು ವರ್ಷಗಳ ಸಜೆಯನ್ನು ವಿಧಿಸಿತ್ತು.
ಇದನ್ನೂ ಓದಿ ಜಾತೀವಾರು ಸಮೀಕ್ಷೆಗೆ ಮೇಲ್ಜಾತಿಯಲ್ಲಿನ ಉಳ್ಳವರೇ ಯಾಕೆ ಅಡ್ಡಿ?!
ಆಂಧ್ರದ ಚುಂಡೂರು ದಲಿತ ನರಮೇಧದ ಮತ್ತೊಂದು ಪ್ರಕರಣದಲ್ಲಿ ಅಧೀನ ನ್ಯಾಯಾಲಯ 21 ಮಂದಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟು ರದ್ದು ಮಾಡಿ ಖುಲಾಸೆಗೊಳಿಸಿತ್ತು. ಹೆಚ್ಚು ಕೂಲಿಯನ್ನು ಕೇಳಿದರೆಂದು ಸಿಟ್ಟಿಗೆದ್ದ ಮೇಲ್ಜಾತಿಯ ಭೂಮಾಲೀಕರು 21 ಮಂದಿ ದಲಿತರನ್ನು ಕೊಚ್ಚಿ ಹಾಕಿದ್ದು ಬಿಹಾರದ್ದೇ ಬಥಾನಿ ತೋಲದ ನರಮೇಧ. ಅಧೀನ ನ್ಯಾಯಾಲಯ ನೀಡಿದ್ದ ಮರಣದಂಡನೆ- ಜೀವಾವಧಿ ಶಿಕ್ಷೆಯನ್ನು ರದ್ದು ಮಾಡುವ ಪಟ್ನಾ ಹೈಕೋರ್ಟು ಸಾಕ್ಷ್ಯಾಧಾರಗಳಿಲ್ಲವೆಂದು ಎಲ್ಲ ಆಪಾದಿತರನ್ನೂ ಖುಲಾಸೆ ಮಾಡಿತ್ತು. ಈ ಸಂಬಂಧದ ಮೇಲ್ಮನವಿಯ ವಿಚಾರಣೆ ಸುಪ್ರೀಮ್ ಕೋರ್ಟಿನಲ್ಲಿ ಇನ್ನೂ ಪೂರ್ಣಗೊಂಡಿಲ್ಲ.
ಬೆಲ್ಚಿ, ಪಿಪ್ರಾ, ಪಾರಸಬಿಘಾದ ದಲಿತ ಹಂತಕರು ಕೂಡ ಕಾನೂನಿನ ಕುಣಿಕೆಗೆ ಇಡಿಯಾಗಿ ಸಿಲುಕಿಲ್ಲ. ನ್ಯಾಯದಾನ
ವ್ಯವಸ್ಥೆಗೆ ಚಿಕಿತ್ಸೆಯ ಜರೂರು ಅಗತ್ಯವಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು