ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆ ಖರೀದಿಸಲು ಬಂದಿದ್ದ ದಂಪತಿಯ ಎರಡು ವರ್ಷದ ಮಗುವನ್ನು ಅಪಹರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಗುರುವಾರ ನಡೆದಿದೆ.
ಸೀತಾಪುರ ಗ್ರಾಮದಿಂದ ರಘು ನಾಯಕ್ ದಂಪತಿ ಕಡೂರು ನಗರಕ್ಕೆ ಹಬ್ಬದ ಪ್ರಯುಕ್ತ ವಸ್ತುಗಳನ್ನು ಖರೀದಿಸಲು ಬಂದಿದ್ದರು. ಕಡೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪದಲ್ಲಿರುವ ಎಣ್ಣೆ ಗಾಣದ ಅಂಗಡಿಗೆ ಮಗು ಮಾನಸಳನ್ನು ತಂದೆ ರಘು ನಾಯಕ್ ಕರೆದುಕೊಂಡು ಹೋಗಿದ್ದರು.
ಮಗು ಕಾಣದಿದ್ದಾಗ ಹುಡುಕಾಟ ನಡೆಸಿದ ತಂದೆ ರಘು ನಾಯಕ್, ಬಳಿಕ ಬಟ್ಟೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ, ಮಗವನ್ನು ಮಹಿಳೆಯೋರ್ವರು ಅಪಹರಿಸುವ ದೃಶ್ಯ ಸೆರೆಯಾಗಿತ್ತು.

ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡುವಂತೆ ನಟಿಸುತ್ತಿದ್ದ ಮಹಿಳೆಯೋರ್ವರು, ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ ಮಾನಸಳನ್ನು ಸೀರೆಯ ಸೆರಗು ಮುಚ್ಚಿಕೊಂಡು ಅಪಹರಿಸಿರುವುದು ತಿಳಿದುಬಂದಿದೆ. ತಕ್ಷಣ ಮಗುವಿನ ಪೋಷಕರು ಮಗುವಿನ ಅಪಹರಣವಾಗಿರುವುದಾಗಿ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿದ್ದೀರಾ: ಹಾಸನ | ಶಾಸಕ ಶಿವಲಿಂಗೇಗೌಡರ ಆಡಿಯೋ ವೈರಲ್; ಜೆಡಿಎಸ್ ವಕ್ತಾರ ಎಸ್‌ಪಿಗೆ ದೂರು
ಮಗು ಅಪಹರಣಗೊಂಡ ವಿಡಿಯೋ ಎಲ್ಲೆಡೆ ಸುದ್ದಿಯಾಗಿ ಪ್ರಸಾರವಾಗಿತ್ತು. ಈ ಎಲ್ಲ ಬೆಳವಣಿಗೆಯ ನಡುವೆಯೇ ಬೆಟ್ಟದ ತರೀಕೆರೆ ಸಮೀಪದ ಬೆಟ್ಟ ತಾವರೆಕೆರೆ ಗ್ರಾಮದ ಪ್ರಕಾಶ್ ಹಾಗೂ ಮೇರಿಯವರು ಎರಡು ವರ್ಷದ ಮಗು ಮಾನಸಳನ್ನು ತರೀಕೆರೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
“ಕಡೂರು ಬಸ್ ನಿಲ್ದಾಣದ ಸಮೀಪ ನಮಗೆ ಮಗುವೊಂದು ಸಿಕ್ಕಿದೆ ಎಂದು ತಿಳಿಸುತ್ತಾ ನನ್ನ ಅತ್ತೆಯವರು ಮಗುವನ್ನು ನಮ್ಮ ಮನೆಗೆ ನಿನ್ನೆ ಕರೆದುಕೊಂಡು ಬಂದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಮಗು ನಾಪತ್ತೆಯಾಗಿರುವ ಸುದ್ದಿ ನೋಡಿ ನಮಗೆ ಗಾಬರಿಯಾಯಿತು. ಹಾಗಾಗಿ, ಈ ಮಗುವನ್ನು ತರೀಕೆರೆ ಠಾಣೆಗೆ ಒಪ್ಪಿಸಿದ್ದೇವೆ” ಎಂದು ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
“ನಮ್ಮ ಮನೆಯಲ್ಲಿ ಮಕ್ಕಳಿಲ್ಲ. ಅದಕ್ಕಾಗಿ ಬಸ್ ನಿಲ್ದಾಣದ ಸಮೀಪವಿದ್ದ ಮಗುವನ್ನು ಮನೆಗೆ ಕರೆದುಕೊಂಡು ಹೋದೆವು” ಎಂದು ಮಗುವನ್ನು ಕರೆದುಕೊಂಡು ಹೋಗಿದ್ದ ಮಹಿಳೆ ಗಂಗಮ್ಮ ಪೊಲೀಸರ ಬಳಿ ತಿಳಿಸಿರುವುದಾಗಿ ತಿಳಿದುಬಂದಿದೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಾಲಕಿಯ ತಾಯಿ ಕಾವ್ಯಾ, “ನಮಗೆ ಮಗು ಸಿಕ್ಕಿದ್ದೇ ದೊಡ್ಡ ಖುಷಿ. ಮಗುವನ್ನು ತೆಗೆದುಕೊಂಡ ಹೋದ ಮಹಿಳೆಯ ವಿವರಗಳನ್ನು ನಾವು ಕೇಳುವುದಕ್ಕೆ ಹೋಗಿಲ್ಲ. ಮಗು ಸಿಕ್ಕ ಖುಷಿಯಲ್ಲಿ ಯಾವುದನ್ನೂ ನಾವು ಪ್ರಶ್ನಿಸಲು ಹೋಗಿಲ್ಲ” ಎಂದು ತಿಳಿಸಿದ್ದಾರೆ.
“ಸುದ್ದಿ ನೋಡಿ ತಾವರೆಕೆರೆ ಗ್ರಾಮದ ಪ್ರಕಾಶ್ ಹಾಗೂ ಮೇರಿ ತರೀಕೆರೆ ಠಾಣೆಗೆ ಮಗುವನ್ನು ಒಪ್ಪಿಸಿದ್ದಾರೆ. ಮಗು ಸುರಕ್ಷಿತವಾಗಿದೆ. ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ತನಿಖೆ ನಡೆಸುತ್ತೇವೆ” ಎಂದು ಕಡೂರು ಪೊಲೀಸ್ ಠಾಣೆಯ ಎಸ್‌ಐ ಈ ದಿನ. ಕಾಮ್ನ ಸಿಟಿಜನ್ ಜರ್ನಲಿಸ್ಟ್‌ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ: ಮುನ್ನ, ಸಿಟಿಜನ್ ಜರ್ನಲಿಸ್ಟ್, ಕಡೂರು
