ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಬಗ್ಗೆ ಖಚಿತ ಸುಳಿವು ನೀಡಿದರೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ಎಎನ್‌ಐ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ನಂಟು ಹೊಂದಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅನ್ಮೋಲ್ ಬಿಷ್ಣೋಯ್ ಅನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದೆ.
ಅನ್ಮೋಲ್ ಬಿಷ್ಣೋಯ್ ಅಲಿಯಾಸ್ ಭಾನು ಕೆನಡಾದಲ್ಲಿ ನೆಲೆಸಿದ್ದು ಅಮೆರಿಕಕ್ಕೆ ಆಗಾಗ ಪ್ರಯಾಣಿಸುತ್ತಿದ್ದಾನೆ ಎಂದು ಹೇಳಲಾಗಿದೆ. ಆತನ ಬಗ್ಗೆ ಖಚಿತ ಸುಳಿವು ನೀಡಿದವರಿಗೆ ಕಳೆದ ತಿಂಗಳೇ ಬಹುಮಾನವನ್ನು ಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಕ್ಯಾಬ್ ಬುಕ್ ಮಾಡಿ ಸಲ್ಮಾನ್ ಖಾನ್ ನಿವಾಸಕ್ಕೆ ಕಳುಹಿಸಿದ ವ್ಯಕ್ತಿ ಬಂಧನ
ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆಯ ಹಿಂದೆ ಅನ್ಮೋಲ್ ಬಿಷ್ಣೋಯ್ ಕೈವಾಡವಿದೆ ಎಂದು ಹೇಳಲಾಗಿದೆ.
ಇನ್ನು ಸಲ್ಮಾನ್ ಖಾನ್ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬರಿಗೆ ಮುಂಬೈ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನಿರಾಕರಿಸಿದೆ. ಅನ್ಮೋಲ್ ಬಿಷ್ಣೋಯ್ ಪ್ರಚೋದನೆಯಿಂದಾಗಿ ಆರೋಪಿಗಳು ಸಲ್ಮಾನ್ ಖಾನ್ ಅವರ ಕೊಲೆ ಮಾಡುವ ಉದ್ದೇಶದಿಂದ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಾತಕಿ ಲಾರೆನ್ಸ್‌ನನ್ನು ಸಮರ್ಥಿಸುತ್ತಿದೆ ಮೋದಿ ಭಕ್ತ ಪಡೆ!
ಈ ಪ್ರಕರಣದಲ್ಲಿ ಪಂಜಾಬ್‌ನ ಫಾಜಿಲ್ಕಾ ಮೂಲದ ಅನ್ಮೋಲ್ ಬಿಷ್ಣೋಯ್ ಮತ್ತು ಲಾರೆನ್ಸ್ ಬಿಷ್ಣೋಯ್ ಇಬ್ಬರೂ ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಈ ಪೈಕಿ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ.
ಇನ್ನು ಖಾನ್ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿದ್ದ ಅನ್ಮೋಲ್ ಬಿಷ್ಣೋಯ್ ವಿರುದ್ಧ ಏಪ್ರಿಲ್‌ನಲ್ಲಿ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿತ್ತು.
