ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ; ಮಹಿಳಾ ಪ್ರಾತಿನಿಧ್ಯಕ್ಕೆ ಇನ್ನೆಷ್ಟು ಕಾಲ ಕಾಯಬೇಕು?

Date:

Advertisements

ಇದುವರೆಗೆ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಕೇವಲ ನಾಲ್ವರು ಮಹಿಳೆಯರು ಸಮ್ಮೇಳನದ ಅಧ್ಯಕ್ಷ ಗಾದಿ ಏರಿದ್ದಾರೆ. ಮಿಕ್ಕಂತೆ  82 ಸಮ್ಮೇಳನಗಳಲ್ಲಿ ಪುರುಷರೇ ಅಧ್ಯಕ್ಷರಾಗಿದ್ದಾರೆ. ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಮಹಿಳೆಯರು ದಶಕಗಳ ಕಾಲ ಕಾಯಬೇಕಿರುವುದು ನಾಚಿಕೆಗೇಡಿನ ಸಂಗತಿ.

ಮಂಡ್ಯದಲ್ಲಿ ಇದೇ ಡಿಸೆಂಬರ್‌ ನಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ವಿಚಾರದಲ್ಲಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅನಗತ್ಯ ವಿವಾದ ಎಬ್ಬಿಸಿದ್ದರು. ಸಾಹಿತ್ಯೇತರ ಕ್ಷೇತ್ರದ ಸಾಧಕರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ತಪ್ಪೇನು ಎಂಬ ಹೇಳಿಕೆ ನೀಡಿದ್ದೇ ಅಲ್ಲದೆ, ಸಕಲ ಸ್ವಾಮೀಜಿಗಳು, ರಾಜಕಾರಣಿಗಳು, ಕ್ರೀಡಾಪಟುಗಳ ಹೆಸರುಗಳುಳ್ಳ ಶಿಫಾರಸ್ಸು ಪಟ್ಟಿಯನ್ನು ಬಿಡುಗಡೆ ಮಾಡಿದ್ದರು.

ಕಸಾಪ ಅಧ್ಯಕ್ಷರಿಗೆ ತಾನು ಯಾವ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದೇನೆ? ಕನ್ನಡದ ಅತಿದೊಡ್ಡ ಸಂಸ್ಥೆಯಾದ ಕಸಾಪದ ಅಂಗರಚನೆ ಏನು? ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಬೇಕಾದವರ ಅರ್ಹತೆ ಏನು ಎಂಬುದರ ಅರಿವು ಇಲ್ಲವೇ ಎಂಬ ಪ್ರಶ್ನೆಯೇ ಅಸಂಗತ. ಯಾಕೆಂದರೆ ಮಹೇಶ್‌ ಜೋಶಿಯಂತಹ ಸಾಹಿತ್ಯೇತರ ಮತ್ತು ಬಿಜೆಪಿ, ಆರೆಸ್ಸೆಸ್‌ ಜೊತೆ ಬಹಿರಂಗವಾಗಿ ಗುರುತಿಸಿಕೊಂಡ ವ್ಯಕ್ತಿಯನ್ನು ಕಸಾಪ ಸದಸ್ಯರೆಲ್ಲ ಸೇರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇ ಒಂದು ಅನೈತಿಕ ನಡೆ. ಇನ್ನು ಈ ವ್ಯಕ್ತಿ ಕಸಾಪದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದಲ್ಲದೇ ಬಿಜೆಪಿ ಮುಖಂಡರು, ಕಾರ್ಯಕರ್ತರು ಇವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಎಂಬುದು ಗುಟ್ಟೇನಲ್ಲ. ಹೀಗಾಗಿ ಈ ವ್ಯಕ್ತಿಗೆ ಯಾವುದೋ ಒಂದು ಗುಪ್ತ ಕಾರ್ಯಸೂಚಿ ಇದ್ದೇ ಮೇಲಿನ ಹೇಳಿಕೆ ಹೊರಡಿಸಿರುವುದು ಎಂಬುದು ಎಂಥವರಿಗೂ ಅರ್ಥವಾಗುವ ಸಂಗತಿ.

ಸಾಹಿತ್ಯೇತರರ ಅಧ್ಯಕ್ಷತೆಗೆ ವಿರೋಧ ಬಂದ ನಂತರ ಈಗ ಆ ವಿಚಾರ ಹಿನ್ನೆಲೆಗೆ ಸರಿದಿದೆ. ಅಷ್ಟೇ ಅಲ್ಲ ಈ ಬಾರಿ ಮಹಿಳೆಯೊಬ್ಬರನ್ನು ಅಧ್ಯಕ್ಷತೆಗೆ ಪರಿಗಣಿಸುವ ಬಗ್ಗೆ ಕಸಾಪ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದು ಆಶಾದಾಯಕ ಬೆಳವಣಿಗೆ.

ಇದುವರೆಗೆ 86 ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. 86 ಅಧ್ಯಕ್ಷರಲ್ಲಿ ಮಹಿಳೆಯರು ಕೇವಲ‌ ನಾಲ್ವರು. ಮಿಕ್ಕಂತೆ  82 ಸಮ್ಮೇಳನಗಳಲ್ಲಿ ಪುರುಷರೇ ಅಧ್ಯಕ್ಷರಾಗಿದ್ದಾರೆ. ಕಸಾಪದ ಅಧ್ಯಕ್ಷತೆಗೆ ಮಹಿಳೆ ಚುಕ್ಕಾಣಿ ಹಿಡಿಯುವುದು ಈಗ ಕನಸಿನ ಮಾತು. ಅದು ಪಕ್ಕಾ ರಾಜಕೀಯ ಚುನಾವಣೆಯಂತಾಗಿದೆ. ಜಾತಿ ಬಲ, ಹಣ ಬಲ, ರಾಜಕೀಯ ಬಲ ಇರುವವರು ಮಾತ್ರ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ಎಂಬಂತಾಗಿ ದಶಕಗಳೇ ಸಂದಿವೆ. ಹಾಗಾಗಿಯೇ ಉದ್ಯಮಿಗಳು, ನಿವೃತ್ತ ಅಧಿಕಾರಿಗಳು ಕಸಾಪವನ್ನು ಮುನ್ನಡೆಸುವಂತಾಗಿದೆ. ಆದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತ್ಯ ಕ್ಷೇತ್ರದಲ್ಲಿ ದಶಕಗಳಿಂದ ಕೆಲಸ ಮಾಡಿದ ಸಾಕಷ್ಟು ಮಹಿಳೆಯರು ಇದ್ದರೂ ಪರಿಗಣಿಸದಿರುವುದು ಅಕ್ಷಮ್ಯ. ಇಷ್ಟು ವರ್ಷಗಳಿಂದ ನಾಡಿನ ಸಾಹಿತಿಗಳಾದಿಯಾಗಿ ಯಾರಿಗೂ ಇದು ತಾರತಮ್ಯ ಎನಿಸಿಲ್ಲ. ದೊಡ್ಡ ದೊಡ್ಡ ಪುರುಷ ಸಾಹಿತಿಗಳಾರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಮಹಿಳೆಯರನ್ನು ಪರಿಗಣಿಸಬೇಕು ಎಂದು ಧ್ವನಿ ಎತ್ತಿಲ್ಲ. ತಮಗೆ ಬಂದ ಅವಕಾಶವನ್ನು ಮಹಿಳೆಯರಿಗೆ ನೀಡಿ ಎಂದು ನಿರಾಕರಿಸಿದ ಉದಾಹರಣೆ ಇಲ್ಲ. ಪ್ರತಿ ವರ್ಷ ಸಮ್ಮೇಳನದ ತಯಾರಿ ಶುರುವಾಗುವಾಗ, ʼಈ ಬಾರಿ ಮಹಿಳೆ ಅಧ್ಯಕ್ಷೆಯಾಗಲಿʼ ಎಂಬ ಕ್ಷೀಣವಾದ ಧ್ವನಿಯೊಂದು ಅಲ್ಲಿ, ಇಲ್ಲಿ ಕೇಳಿಸಿ ತಣ್ಣಗಾಗುತ್ತದೆ. ಮತ್ತೆ ಯಥಾ ಪ್ರಕಾರ ಪುರುಷರದ್ದೇ ಒಡ್ಡೋಲಗ. ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಅಧ್ಯಕ್ಷತೆಯ ಪಟ್ಟಿಯನ್ನು ನೋಡಿದರೆ ಅಲ್ಲೂ ಮಹಿಳೆಯರ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

1974ರಲ್ಲಿ ಇದೇ ಮಂಡ್ಯದಲ್ಲಿ ನಡೆದ 48ನೇ ಸಾಹಿತ್ಯ ಸಮ್ಮೇಳನದಲ್ಲಿ ಜಯದೇವಿತಾಯಿ ಲಿಗಾಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಆ ಮೂಲಕ ಮೊದಲ ಅಧ್ಯಕ್ಷೆ ಎನಿಸಿದರು. ಅದಾಗಿ ಇಪ್ಪತ್ತು ವರ್ಷಗಳ ನಂತರ ಬಾಗಲಕೋಟೆಯಲ್ಲಿ ನಡೆದ 68ನೇ ಸಮ್ಮೇಳನದಲ್ಲಿ ಶಾಂತಾದೇವಿ ಮಾಳವಾಡ ಅಧ್ಯಕ್ಷೆಯಾಗಿದ್ದರು. ಮೂಡಬಿದರೆಯಲ್ಲಿ ನಡೆದ 71ನೇ ಸಮ್ಮೇಳನದ ಅಧ್ಯಕ್ಷತೆ ಡಾ. ಕಮಲಾ ಹಂಪನಾ, ಗದಗದಲ್ಲಿ ನಡೆದ 76ನೇ ಸಮ್ಮೇಳನದ ಅಧ್ಯಕ್ಷತೆ ಡಾ ಗೀತಾ ನಾಗಭೂಷಣ ಅವರದಾಗಿತ್ತು. ಆ ನಂತರ ಮತ್ತೆ ಮಹಿಳೆಯರಿಗೆ ಅವಕಾಶ ಸಿಕ್ಕಿಲ್ಲ. ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಮಹಿಳೆಯರು ಎರಡು- ಮೂರು ದಶಕ ಕಾಯಬೇಕಿರುವುದು ನಾಚಿಕೆಗೇಡಿನ ಸಂಗತಿ.

ರಾಜಕೀಯ, ಸಾಮಾಜಿಕ, ಔದ್ಯೋಗಿಕ, ಮಾಧ್ಯಮ, ಮನರಂಜನಾ ಕ್ಷೇತ್ರಗಳಂತೆ ಸಾಹಿತ್ಯ ಕ್ಷೇತ್ರದಲ್ಲೂ ಅಸಮಾನತೆ, ಲಿಂಗ ತಾರತಮ್ಯ ತಾಂಡವವಾಡುತ್ತಿದೆ. ಸಹಜೀವಿಗಳ ಬಗ್ಗೆ ಸಹಾನುಭೂತಿ, ಗೌರವ, ಸಮಾನತೆ ಇವೆಲ್ಲ ಸಾಹಿತ್ಯದ ಸದುದ್ದೇಶ. ಆದರೆ, ಮಹಿಳೆಯರದು ಅಡುಗೆ ಮನೆ ಸಾಹಿತ್ಯ ಎಂದು ಗೇಲಿ ಮಾಡುತ್ತ ಬಂದ ಪುರುಷ ಸಾಹಿತಿಗಳು, ಸಂಘಟಕರು ಇನ್ನೂ ಆ ಗುಂಗಿನಿಂದ ಹೊರ ಬಂದಂತೆ ಕಾಣುತ್ತಿಲ್ಲ. ಕನ್ನಡ ಸಾರಸ್ವತ ಲೋಕವನ್ನು ಚಂದಗಾಣಿಸಿದ ಹಲವು ಲೇಖಕಿಯರು ತೆರೆಮರೆಗೆ ಸರಿದಿದ್ದಾರೆ. ಇನ್ನೂ ಹಲವರಿದ್ದಾರೆ, ಮುಂದೆಯೂ ಇರುತ್ತಾರೆ. ಆದರೆ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗಾದಿಗೆ ಮಹಿಳಾ ಸಾಹಿತಿಗಳನ್ನು ಪರಿಗಣಿಸುವ ಮನಸ್ಸು ಮಾತ್ರ ಇಲ್ಲ.

ಶತಮಾನಗಳ ಹಿಂದೆ ಮೇಲ್ವರ್ಗಕ್ಕೆ ಮಾತ್ರ ಸಿಗುತ್ತಿದ್ದ ಅಕ್ಷರದ ಅವಕಾಶದ ಕಾರಣಕ್ಕೆ ಮೇಲ್ವರ್ಗದ ಸಾಹಿತಿಗಳ ಸಂಖ್ಯೆ ತುಸು ಹೆಚ್ಚು ಇರಬಹುದು. ಗಂಡಾಳ್ವಿಕೆಯ ಕಾರಣದಿಂದಾಗಿಯೇ ಮಹಿಳೆಯರು 20ನೇ ಶತಮಾನದ ಹಿಂದಿನವರೆಗೂ ಅಕ್ಷರ ವಂಚಿತರಾಗಿದ್ದರು. ಶತಶತಮಾನಗಳಿಂದ ಅಕ್ಷರದಿಂದ ವಂಚಿತರಾಗಿದ್ದ ಕೆಲವು ಸಮುದಾಯಗಳು ಈಗಷ್ಟೇ ಅಕ್ಷರ ಸಂಭ್ರಮವನ್ನು ಅನುಭವಿಸುತ್ತಿವೆ. ಹಾಗಾಗಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸುವಾಗ ಸರ್ವಾಧ್ಯಕ್ಷ ಗಾದಿಯಿಂದ ಹಿಡಿದು, ಸಮ್ಮೇಳನದ ಗೋಷ್ಠಿಗಳ ಅಧ್ಯಕ್ಷತೆಯ ವಿಚಾರದಲ್ಲೂ ಹಿಂದುಳಿದ ಸಮುದಾಯ, ಅಲ್ಪಸಂಖ್ಯಾತರು, ಮಹಿಳೆಯರನ್ನು ಅರ್ಹತೆಯ ಆಧಾರದಲ್ಲಿ ಪರಿಗಣಿಸುವುದು ಸಂವಿಧಾನದ ಆಶಯಕ್ಕೆ ಗೌರವ ಕೊಟ್ಟಂತೆಯೇ ಸರಿ.

ಇದನ್ನೂ ಓದಿ ಈ ದಿನ ವಿಶೇಷ | ಮರಕುಂಬಿ ಬೆಳಕಿನಲ್ಲಿ‌ ಕಂಬಾಲಪಲ್ಲಿಯ ಕತ್ತಲು

ಸಮಸಮಾಜದ ಆಶಯವೇ ಸಾಹಿತ್ಯದ ಮೂಲದ್ರವ್ಯ. ಸಾಹಿತಿಗಳ ಅತ್ಯುನ್ನತ ಸಂಸ್ಥೆ ಕಸಾಪದ ಕಾರ್ಯಕ್ರಮಗಳೂ ಈ ಆಶಯಕ್ಕೆ ಪೂರಕವಾಗಿರಬೇಕು. ಅಷ್ಟೇ ಅಲ್ಲ ಕಸಾಪ ರಾಜಕೀಯದಿಂದ, ಪಕ್ಷ, ವ್ಯಕ್ತಿಗಳಿಂದ ಆದಷ್ಟು ದೂರವಿರಬೇಕು. ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕಾರಣಿಗಳೇ ತುಂಬಿರುವುದು ಇತ್ತೀಚಿನ ಅಸಹ್ಯಕರ ಬೆಳವಣಿಗೆ. ಅದಕ್ಕೂ ಮಂಡ್ಯದ ಸಮ್ಮೇಳನದಲ್ಲಿ ಒಂದು ವಿರಾಮ ಬೀಳಬೇಕಿದೆ. ಈ ನಿಟ್ಟಿನಲ್ಲಿ ಕಸಾಪದ ಪದಾಧಿಕಾರಿಗಳು, ಸ್ವಾಗತ ಸಮಿತಿ, ಸಾಹಿತಿಗಳು ಎಲ್ಲರೂ ಯೋಚಿಸುವ ಅಗತ್ಯವಿದೆ.

Advertisements
ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X