ಕರ್ನಾಟಕ ಚುನಾವಣೆ | ಯಡಿಯೂರಪ್ಪ ಕಣ್ಣೀರಿಗೆ ಭಾರಿ ಬೆಲೆತೆತ್ತ ಬಿಜೆಪಿ

Date:

Advertisements
ಅಂದು ಯಡಿಯೂರಪ್ಪನವರನ್ನ ಸಿಎಂ ಹುದ್ದೆಯಿಂದ ಕೆಳಗಿಳಿಸಿ, ಅಳುತ್ತಲೇ ಅವರನ್ನು ಮನೆಗೆ ಕಳುಹಿಸಿದ್ದು ಚುನಾವಣೆಯಲ್ಲಿ ಪಕ್ಷಕ್ಕೆ ಉರುಳಾಗುತ್ತದೆ ಎಂದು ಪ್ರಾಯಶಃ ದಿಲ್ಲಿ ದೊರೆಗಳೂ ನಿರೀಕ್ಷಿಸಿರಲಿಲ್ಲ. ಮೋದಿ ವೇವ್ ಹಾಗೂ ಪ್ರಖರ ಹಿಂದುತ್ವ ಪಕ್ಷವನ್ನು ದಡಕ್ಕೆ ಸೇರಿಸುತ್ತವೆ ಎಂದು ನಂಬಿದ್ದರು

ಅದು ಯಾವುದೇ ಪಕ್ಷವಾಗಿರಲಿ, ತಮ್ಮ ಪಕ್ಷದ ಒಬ್ಬ ಜನಪ್ರಿಯ ಮತ್ತು ಪ್ರಭಾವಿ ನಾಯಕನನ್ನು ಅಕಾರಣವಾಗಿ ಹಠಾತ್ತನೇ ತೆರೆಮರೆಗೆ ಸರಿಸಿದರೆ ಅಂತಹ ಪಕ್ಷ ದುಬಾರಿ ಬೆಲೆ ತೆರಬೇಕಾಗುತ್ತದೆ. ಧಿಡೀರನೆ ಪಕ್ಷದಲ್ಲಿ ಆ ಸ್ಥಾನವನ್ನು ಬೇರೊಬ್ಬರಿಂದ ತುಂಬಲು ಸಾಧ್ಯವಿಲ್ಲ. ಏಕೆಂದರೆ ರಾತ್ರಿಹಗಲಾಗುವುದರೋಳಗಾಗಿ ಯಾವುದೇ ನಾಯಕ ಉದ್ಭವಾಗುವುದಿಲ್ಲ.

ನಾಯಕ ಹುಟ್ಟಲು ಸುದೀರ್ಘ ಸಮಯ ಬೇಕು. ಅದು ಅಪಾರ ದುಡಿಮೆ, ಶ್ರಮ, ತ್ಯಾಗ, ಹೋರಾಟ ಮತ್ತು ಬದ್ಧತೆ ಬೇಡುತ್ತದೆ. ಪಕ್ಷದ ಹೈಕಮಾಂಡ್ ಒಬ್ಬ ಜನಪ್ರಿಯ ನಾಯಕನನ್ನು ದುರುದ್ದೇಶದಿಂದ ತೆರೆಮರೆಗೆ ಸರಿಸಿ ಕೈ ಸುಟ್ಟುಕೊಂಡಿರುವ ಹೇರಳ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿವೆ. ಅದೀಗ ಯಡಿಯೂರಪ್ಪನವರ ವಿಷಯದಲ್ಲೂ ಮತ್ತೇ ಸಾಬೀತಾಗಿದೆ. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ‘ಕಮಲ’ ಅರಳಲು ಯಡಿಯೂರಪ್ಪ ಕಾರಣವೆಂದು ಅವರ ಪಕ್ಷದವರಷ್ಟೇ ಅಲ್ಲ, ರಾಜ್ಯದ ವಿರೋಧ ಪಕ್ಷಗಳ ನಾಯಕರು ಕೂಡಾ ಸದನದಲ್ಲೇ ಅನೇಕಾನೇಕ ಸಲ ಪುನರುಚ್ಚರಿಸಿದ್ದಾರೆ. ಹೀಗಿದ್ದರೂ ಬಿಜೆಪಿ ಹೈಕಮಾಂಡ್ ಅವರನ್ನು ಸಿಎಂ ಸ್ಥಾನದಿಂದ ಪದಚ್ಯುತಿಗೊಳಿಸಿದೆ. ಇದಕ್ಕೆ ಕಾರಣವೇನೆಂದು ಈವರೆಗೂ ಹೇಳಲು ಅವರಿಂದಲೂ ಸಾಧ್ಯವಾಗಿಲ್ಲ.

ಅಂದು ಯಡಿಯೂರಪ್ಪನವರನ್ನ ಸಿಎಂ ಹುದ್ದೆಯಿಂದ ಕೆಳಗಿಳಿಸಿ, ಅಳುತ್ತಲೇ ಅವರನ್ನು ಮನೆಗೆ ಕಳುಹಿಸಿದ್ದು ಚುನಾವಣೆಯಲ್ಲಿ ಪಕ್ಷಕ್ಕೆ ಉರುಳಾಗುತ್ತದೆ ಎಂದು ಪ್ರಾಯಶಃ ದಿಲ್ಲಿ ದೊರೆಗಳೂ ನಿರೀಕ್ಷಿಸಿರಲಿಲ್ಲ. ಮೋದಿ ವೇವ್ ಹಾಗೂ ಪ್ರಖರ ಹಿಂದೂತ್ವ ಪಕ್ಷವನ್ನು ದಡಕ್ಕೆ ಸೇರಿಸುತ್ತವೆ ಎಂದು ನಂಬಿದ್ದರು. ಆದರೆ, ಇಲ್ಲಿ ಮೋದಿ ವೇವ್ ಆಗಲಿ, ಹಿಂದೂತ್ವ ಅಲೆಯಾಗಲಿ ನಡೆಯಲಿಲ್ಲ. ಏಕೆಂದರೆ ಇದು ಕರ್ನಾಟಕ, ಗುಜರಾತ ಅಲ್ಲ. ಇಲ್ಲೇನಿದ್ದರೂ ಜಾತಿ ಮತ್ತು ಸ್ಥಳೀಯ ನಾಯಕತ್ವವೇ ಪ್ರಧಾನ. ಇವೇ ಚುನಾವಣೆಯಲ್ಲಿ ಸೋಲು – ಗೆಲುವನ್ನು ನಿರ್ಧರಿಸುತ್ತವೆ. ಯಡಿಯೂರಪ್ಪ ಇಲ್ಲದ ಬಿಜೆಪಿ 2013ರಲ್ಲಿ ಎಷ್ಟೇ ಅಬ್ಬರಿಸಿದರು 40 ಸ್ಥಾನ ಪಡೆಯಲು ಪಕ್ಷ ಹರಸಾಹಸ ಪಡಬೇಕಾಯಿತು. ಇದರಿಂದಾದರೂ ದಿಲ್ಲಿ ದೊರೆಗಳು ಪಾಠ ಕಲಿತಿದ್ದರೆ ಪ್ರಾಯಶಃ ಇಂದು ರಾಜ್ಯದಲ್ಲಿ ಬಿಜೆಪಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ?

Advertisements

ಈ ಸಲ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯದ 51ಅಭ್ಯರ್ಥಿಗಳಿಗೆ ಮಣೆ ಹಾಕುವ ಮೂಲಕ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿತ್ತು. ಇದು ಫಲವೂ ನೀಡಿದೆ. ಈಗ ‌39 ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ಸಿನಲ್ಲಿ ಈಗ ಲಿಂಗಾಯತ ಎಂಎಲ್ಎಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ಪಕ್ಷವೂ 62 ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗಳಿಗೆ ಮಣೆ ಹಾಕಿತ್ತು. ಆದರೆ ಗೆದ್ದದ್ದು ಕೇವಲ 18 ಅಭ್ಯರ್ಥಿಗಳು ಮಾತ್ರ. ಈ ಸಂಖ್ಯೆಗಳೇ ಎಲ್ಲವೂ ಸ್ಪಷ್ಟವಾಗಿ ಹೇಳುತ್ತಿದೆ.

ಇದನ್ನು ಓದಿ ಕರ್ನಾಟಕ ಚುನಾವಣೆ | ಬೆಲೆಯೇರಿಕೆ ಮತ್ತು ಜನವಿರೋಧಿತನಕ್ಕೆ ಒದ್ದು ಬುದ್ಧಿ ಕಲಿಸಿದ ಮಹಿಳೆಯರು

ಬಿಜೆಪಿ ಪದೇ ಪದೇ ಯಡಿಯೂರಪ್ಪ ಬಾಯಿಂದ ‘ನಾನು ಸ್ವ ಇಚ್ಚೆಯಿಂದ ಮುಖ್ಯಮಂತ್ರಿ ಹುದ್ದೆ ತೊರೆದಿದ್ದೇನೆ’ ಎಂದು ಹೇಳಿಸಿದರೂ ಅದು ಜನರ ಹೃದಯಕ್ಕೆ ಇಳಿಯಲೇ ಇಲ್ಲ. ಯಡಿಯೂರಪ್ಪನವರೂ ಬಿಜೆಪಿಯನ್ನು ಗೆಲ್ಲಿಸಬೇಕೆಂಬ ಉಮೇದಿನಲ್ಲಿ ಇದ್ದಂತೆ ಕಾಣಲಿಲ್ಲ. ಯಾವುದೋ ಭಯದಿಂದಲೋ, ಯಾರದೋ ಒತ್ತಾಯದಿಂದಲೋ ಮಾತನಾಡಿದಂತೆ ಅವರ ಮಾತುಗಳಿದ್ದವು. ಅವರ ಮಾತಿನಲ್ಲಿ ಎಲ್ಲಿಯೂ ಉತ್ಸಾಹ, ಲವಲವಿಕೆ, ಅಬ್ಬರ ಕಾಣಲೇ ಇಲ್ಲ. ಇದು ಬಿಜೆಪಿಗೆ ಒಳಯೇಟು ನೀಡಿದೆ. ಒಂದೆಡೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಬಲ, ಆತ್ಮವಿಶ್ವಾಸ ತುಂಬಿದರೆ, ಇನ್ನೊಂದೆಡೆ ಲಿಂಗಾಯತರು ಕೋಪಿಸಿಕೊಂಡು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದು ಈ ಫಲಿತಾಂಶ ಸ್ಪಷ್ಟಪಡಿಸಿದೆ. ಲಿಂಗಾಯತ ಬಾಹುಳ್ಯ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಮಧ್ಯೆ ಕರ್ನಾಟಕದಲ್ಲಿ ಯಾವಾಗಲೂ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯುತ್ತಿತ್ತು. ಆದರೆ ಈ ಸಲ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸುವ ಮೂಲಕ ಮ್ಯಾಜಿಕ್ ನಂಬರಿಗೆ ತಲುಪಿದೆ.

ಇದನ್ನು ಓದಿ ಅನ್ನ ನೀರು ಅರಿವೆಯೇ ಪರಮ- ಕೋಮುವಾದಕ್ಕೆ ಕಪಾಳಮೋಕ್ಷ

ಈ ಸಲವೂ ಲಿಂಗಾಯತ ಸಮುದಾಯ ಸಾಲಿಡ್ ಆಗಿ ಕಾಂಗ್ರೆಸ್ಸಿಗೇನು ವೋಟ್ ಮಾಡಲಿಲ್ಲ. ಆದರೆ, ಮೊದಲಿಗಿಂತಲೂ ಶೇ.5% ಮತಗಳು ಸಮುದಾಯದಿಂದ ಕಾಂಗ್ರೆಸ್ಸಿಗೆ ಹೆಚ್ಚುವರಿಯಾಗಿ ಬಂದಿವೆ. (ಒಟ್ಟು 20%) ಇದು ಲಿಂಗಾಯತರು ಪ್ರಭಾವಶಾಲಿ ಆಗಿರುವ ಪ್ರದೇಶಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಇದಕ್ಕೆ ಯಡಿಯೂರಪ್ಪನವರನ್ನು ಬಿಜೆಪಿ ನಡೆಸಿಕೊಂಡ/ಕೊಳ್ಳುತ್ತಿರುವ ರೀತಿಯೇ ಬಹುಮುಖ್ಯ ಕಾರಣವಾಗಿದೆ. ಜತೆಗೆ, ‘ಬಿಜೆಪಿ ಕೇವಲ ಲಿಂಗಾಯತರ ಮತಗಳನ್ನೇ ನೆಚ್ಚಿಕೊಂಡಿಲ್ಲ. ಬಿಜೆಪಿಗೆ ಲಿಂಗಾಯತ ಮತಗಳು ಬೇಡ, ನಾವು ಈ ಸಾರಿ ಹಿಂದುತ್ವದ ಮೇಲೆ ಚುನಾವಣೆ ನಡೆಸುತ್ತೇವೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಆಡಿದ್ದಾರೆ ಎನ್ನಲಾದ ಮಾತು ಕಾಂಗ್ರೆಸ್ಸಿಗೆ ವರವಾಗಿದೆ. ಮಾತಿನಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಪಕ್ಷದ ಕೆಲವರು ಸರ್ಕಸ್ ಮಾಡಿದರೂ ಅದನ್ನು ಲಿಂಗಾಯತರು ನಂಬಲಿಲ್ಲ. ನಂಬುವ ಸ್ಥಿತಿಯಲ್ಲೂ ಸಮುದಾಯ ಇರಲಿಲ್ಲ. ಈವರೆಗೂ ಸಂತೋಷ ಅವರಾಗಲಿ, ಅವರ ಪಕ್ಷದ ಲಿಂಗಾಯತ ಮುಖಂಡರಾಗಲಿ ಆ ಮಾತುಗಳು ಅಲ್ಲಗಳೆದಿಲ್ಲ. ಈ ಕುರಿತು ಒಂದು ಸಣ್ಣ ಪ್ರತಿಕ್ರಿಯೆಯೂ ನೀಡಿಲ್ಲ.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯವರಿಗೆ ಟಿಕೆಟ್ ನಿರಾಕರಿಸಿದ್ದು ಕೂಡ ಬಿಜೆಪಿಗೆ ಅಕ್ಷರಶಃ ಉರುಳಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಜಿದ್ದಿಗೆ ಬಿದ್ದು ಸೋಲಿಸಿರಬಹುದು. ಆದರೆ, ಅವರು ಬಿಜೆಪಿ ತೊರೆಯುವ ಮೂಲಕ ಸಮುದಾಯಕ್ಕೆ ಒಂದು ಮೆಸೆಜ್ ಪಾಸ್ ಮಾಡಲು ಯಶಸ್ವಿಯಾಗಿದ್ದಾರೆ. ಈಗ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಕಡೆ ಮುಖ ಮಾಡಿ ನಿಂತಿರುವ ಲಿಂಗಾಯತರು ಕೂತೂಹಲದಿಂದ ನೋಡುತ್ತಿದ್ದಾರೆ.

49661542 294235811438250 5384525710729674752 n
ಸಿದ್ದಪ್ಪ ಮೂಲಗೆ
+ posts

ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X