ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಉಪಚುನಾವಣೆಗೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ ನಡೆದಿದ್ದು ಬಿಜೆಪಿ ಕಾರ್ಯಕರ್ತರೋರ್ವನ ಹತ್ಯೆಯಾಗಿದೆ. ಗುರುವಾರ ಸಮಗುರಿ ಎಂಬ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು ಬಿಪುಲ್ ಸೈಕಿಯಾ ಎಂಬ ಬಿಜೆಪಿ ಕಾರ್ಯಕರ್ತ ತೀವ್ರ ಗಾಯಗೊಂಡಿದ್ದ. ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಅಸ್ಸಾಂನ ಸಮಗುರಿ, ಬೊಂಗೈಗಾಂವ್, ಸಿದ್ಲಿ, ಧೋಲೈ ಮತ್ತು ಬೆಹಾಲಿ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಕಾರಣ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಈ ಹಿಂದೆ ಸಮಗುರಿ ಕ್ಷೇತ್ರದಲ್ಲಿ ಹಲವು ಬಾರಿ ಚುನಾವಣಾ ಪೂರ್ವ ಹಿಂಸಾಚಾರ ನಡೆದಿದೆ. ಆದರೆ ಯಾವುದೇ ಸಾವು ಸಂಭವಿಸಿರಲಿಲ್ಲ.
ಇದನ್ನು ಓದಿದ್ದೀರಾ? ಒಡಿಶಾ| ಚುನಾವಣಾ ಪೂರ್ವ ಹಿಂಸಾಚಾರ; ಬಿಜೆಪಿ ಕಾರ್ಯಕರ್ತನ ಹತ್ಯೆ
ಕಾಂಗ್ರೆಸ್ ಅಭ್ಯರ್ಥಿ ತಂಝಿಲ್ ಹುಸೇನ್ ನಾಮಪತ್ರ ಸಲ್ಲಿಸಿ ತಮ್ಮ ಬೆಂಬಲಿಗರೊಂದಿಗೆ ಹಿಂದಿರುಗುತ್ತಿದ್ದಾಗ ಗುರುವಾರ ಘರ್ಷಣೆ ಉಂಟಾಗಿದೆ. ಈ ಘರ್ಷಣೆಯಲ್ಲಿ 15 ಜನರು ಗಾಯಗೊಂಡಿದ್ದಾರೆ. ಕೆಲವು ವಾಹನಗಳಿಗೂ ಹಾನಿಯಾಗಿದೆ.
ತಂಝಿಲ್ ಹುಸೇನ್ ಕಾಂಗ್ರೆಸ್ ನಾಯಕ ಮತ್ತು ಧುಬ್ರಿ ಸಂಸದ ರಕಿಬುಲ್ ಹುಸೇನ್ ಅವರ ಪುತ್ರ. 2001ರಿಂದ ರಕಿಬುಲ್ ಸಮಗುರಿಯನ್ನು ಪ್ರತಿನಿಧಿಸುತ್ತಿದ್ದು ಸಮಗುರಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ತಂಝಿಲ್ ಹುಸೇನ್ ವಿರುದ್ಧ ಬಿಜೆಪಿಯ ದಿಪ್ಲು ರಂಜನ್ ಶರ್ಮಾ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಇನ್ನು ಈ ಹಿಂಸಾಚಾರವನ್ನು ಬಿಜೆಪಿ ಮುಖಂಡ ಹಾಗೂ ಸಚಿವ ಜಯಂತ ಮಲ್ಲ ಬರುವಾ ಖಂಡಿಸಿದ್ದಾರೆ. ಕಾಂಗ್ರೆಸ್ ಪ್ರಚೋದನೆಯಿಂದಾಗಿ ಈ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
