ಕೇಂದ್ರ ಸಚಿವ ಕುಮಾರಸ್ವಾಮಿಯವರ ಭಾವನಾತ್ಮಕ ಚುನಾವಣಾ ಭಾಷಣ, ಕಣ್ಣೀರಿಗೆ ಜನರು ಮಾರುಹೋಗುವುದಿಲ್ಲ. ಚುನಾವಣೆ ಬಂದಾಗ ಕುಮಾರಸ್ವಾಮಿ ಕಣ್ಣೀರು ಹಾಕುವುದು ಸಾಮಾನ್ಯ ಎಂಬುದು ಎಲ್ಲರೂ ಮಾತನಾಡುವಂಗೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಇಂದು (ಅ25) ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥರಾಗಿದ್ದು, ಬಿಜೆಪಿ ನಮಗೆ ಎದುರಾಳಿಯಲ್ಲ. ಶಿಗ್ಗಾಂವಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಲಿದೆ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಉಪಚುನಾವಣೆಗೆ ಸನ್ನದ್ಧವಾಗಿದ್ದು, ಮೂರು ಕ್ಷೇತ್ರಗಳಿಗೆ ಸಮರ್ಥರಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಅವರಿಗೇ ಈ ಬಾರಿ ಅವಕಾಶ ನೀಡಲಾಗಿದೆ. ಇದೇ ಪ್ರದೇಶದ ಸೈಯದ್ ಅಜೀಂಪೀರ್ ಖಾದ್ರಿಯವರು ಸಮರ್ಥ ನಾಯಕರಿದ್ದು, ಅವರು ಸಲ್ಲಿಸಿರುವ ನಾಮಪತ್ರವನ್ನು ವಾಪಸ್ಸು ಪಡೆಯುವಂತೆ ಮನವೊಲಿಸಲಾಗುವುದು” ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಪ್ರತಿಸ್ಪರ್ಧಿ, ವ್ಯಕ್ತಿ ಅಲ್ಲ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, “ಪಠಾಣ್ ಅವರು ಎದುರಾಳಿಯಾಗಿಲ್ಲದಿದ್ದಲ್ಲಿ ಕಳೆದ ಚುನಾವಣೆಯಲ್ಲಿ 60 ಸಾವಿರ ಮತಗಳನ್ನು ಪಡೆಯುತ್ತಿದ್ದರೇ? ಕಳೆದ ಬಾರಿ ಶಿಗ್ಗಾಂವಿಯಲ್ಲಿ ಬಿಜೆಪಿ ಜಯ ಸಾಧಿಸಿದ್ದರೂ, ಕಾಂಗ್ರೆಸ್ ಒಳ್ಳೆಯ ಸ್ಪರ್ಧೆಯನ್ನು ನೀಡಿತ್ತು. ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ 8000 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಸಾಧಿಸಿತ್ತು” ಎಂದು ಸಮರ್ಥಿಸಿಕೊಂಡರು.