ಭಾರೀ ಮಳೆ | ರಾಜ್ಯಾದ್ಯಂತ 56,993 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ; ಬೆಳೆಪರಿಹಾರದ ಭರವಸೆ

Date:

Advertisements

ರಾಜ್ಯದಲ್ಲಿ ಹಿಂಗಾರಿನ ಅಕ್ಟೋಬರ್ ತಿಂಗಳೊಂದರಲ್ಲಿಯೇ ಶೇ.66ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ರಾಜ್ಯದಲ್ಲಿ ಈವರೆಗೆ 56,993 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾದ ವರದಿಯಿದೆ. ಹಾಗಾಗಿ ಮುಂದಿನ ಮೂರು ದಿನಗಳಲ್ಲಿ ಜಂಟಿ ಬೆಳೆಸಮೀಕ್ಷೆ ನಡೆಸಿ, ಬೆಳೆಹಾನಿಯಾದ ರೈತರಿಗೆ ಹದಿನೈದು ದಿನಗಳೊಳಗೆ ಡಿಬಿಟಿ ಮೂಲಕ ಬೆಳೆ ಪರಿಹಾರ ಒದಗಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಭಾಗದ ಹಿರೇಮಲ್ಲನ ಹೊಳೆಯಲ್ಲಿ ಹಾನಿಯಾದ ಮನೆಗಳು ಮತ್ತು ಬೆಳೆವೀಕ್ಷಣೆ, ಸಂಗೇನಹಳ್ಳಿ ಕೆರೆಕೋಡಿ ವೀಕ್ಷಣೆ, ಪ್ರವಾಸಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಹಿಂಗಾರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಅತಿಹೆಚ್ಚಿನ ಮಳೆ ಸುರಿದಿದ್ದು, ಪ್ರಾಥಮಿಕವಾಗಿ ಬೆಳೆನಷ್ಟವನ್ನು ಅಂದಾಜಿಸಲಾಗಿದೆ. ಆದರೆ ಇನ್ನೂ ಹೆಚ್ಚಿನ ಬೆಳೆ ನಾಶವಾಗಿರುವ ಮಾಹಿತಿ ಇದ್ದು, ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆ ನಂತರ ಬೆಳೆನಷ್ಟದ ನಿಖರ ಅಂಕಿ ಅಂಶಗಳು ಸಿಗಲಿವೆ. ಈ ಉದ್ದೇಶಕ್ಕಾಗಿ ಅಧಿಕ ಮಳೆಯಾಗಿರುವ ಪ್ರದೇಶದ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ವರದಿ ಪಡೆದು ಸೂಚನೆ ನೀಡಲಾಗುತ್ತದೆ” ಎಂದರು.

“ಹಿಂಗಾರು ಮಳೆಯಲ್ಲಿ ಒಂಬತ್ತು ಮಂದಿ ಸಿಡಿಲು ಬಡಿದು ಮರಣ ಹೊಂದಿದ್ದರೆ, ಮನೆ ಕುಸಿತದಿಂದ 6 ಮಂದಿ ಮೃತಪಟ್ಟಿದ್ದು, 3 ರಿಂದ 4 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಒಟ್ಟು 21 ಜನರ ಪ್ರಾಣಹಾನಿಯಾಗಿದೆ. ಮುಂಗಾರು ಸೇರಿದಂತೆ ಈವರೆಗೆ 121 ಜನರು ರಾಜ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಈವರೆಗೆ ರಾಜ್ಯದಲ್ಲಿ ಮಳೆಯಿಂದ 121 ಮನೆ ಕುಸಿತಗಳುಂಟಾಗಿವೆ. ಇವರಿಗೆ ಪರಿಹಾರ ದೊರಕಿಸಿಕೊಡಲಾಗುವುದು. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಮನೆ ಬಿದ್ದು ಹೋಗಿದ್ದರೂ ಎಸ್‌ಡಿಆರ್‌ಎಫ್‌ನಡಿ ₹1 ಲಕ್ಷ ಪರಿಹಾರ ನೀಡಲಾಗುತ್ತದೆ” ಎಂದು ಭರವಸೆ ನೀಡಿದರು.

Advertisements

“ಮುಂಗಾರು ಹಂಗಾಮಿನಲ್ಲಿ ₹1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದ್ದು‌, ಈಗಾಗಲೇ ಪರಿಹಾರ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಮುಂಗಾರು ಬೆಳೆನಷ್ಟ ಪರಿಹಾರ ಪಾವತಿ ಪೂರ್ಣವಾಗಲಿದೆ” ಎಂದು ತಿಳಿಸಿದರು.

“ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆಕೋಡಿ, ಕೆರೆಯಂಗಳದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದರಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿರುವ 35 ಮನೆಗಳನ್ನು ಬೇರೆಡೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಮನೆ ಪರಿಹಾರದ ಜತೆಗೆ ಬೇರೆಡೆ ನಿವೇಶನ ನೀಡಿ ಇವರಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಇವರಿಗೆ ಮುಂದಿನ ಎರಡು ತಿಂಗಳಲ್ಲಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ” ಎಂದು ತಿಳಿಸಿದರು. ‌

“ಜಿಲ್ಲೆಯಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 5 ಹಸು, 17 ಕುರಿಗಳು ಮೃತಪಟ್ಟಿವೆ. ₹2.71 ಲಕ್ಷ ಪರಿಹಾರ ನೀಡಲಾಗಿದೆ. ಮನೆಗಳಲ್ಲಿ 85 ಪೂರ್ಣ ಹಾನಿ, 97 ಭಾಗಶಃ ಹಾನಿ, 109 ಅಲ್ಪ ಹಾನಿಯಾಗಿದ್ದು, ಒಟ್ಟು ₹1,83,20,000 ಪರಿಹಾರ ನೀಡಿದೆ. ಹಾನಿಯಾದ ಮೂಲ ಸೌಕರ್ಯಗಳ ಅಭಿವೃದ್ದಿಗೆ ₹2,14,95,000ವನ್ನು ಒದಗಿಸಲಾಗಿದೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಕಾಲಿಕ ಮಳೆಗೆ ಬೆಳೆ ನಾಶ; ಸಂಕಷ್ಟದಲ್ಲಿ ರೈತಾಪಿ ವರ್ಗ

ಪರಿಹಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, “ಜೀವಹಾನಿ ಹಾಗೂ ಮನೆಗಳು ಬಿದ್ದುಹೋಗಿದ್ದರೆ ಕೂಡಲೇ ಪರಿಹಾರ ನೀಡಲು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರ ಖಾತೆಗಳಲ್ಲಿ ₹666 ಕೋಟಿಯಷ್ಟು ಹಣ ಕಾಯ್ದಿರಿಸಲಾಗಿದೆ. ಪ್ರಕೃತಿ ವಿಕೋಪ ಎದುರಿಸಲು ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಕಷ್ಟ ಕಾಲದಲ್ಲಿ ಪರಿಹಾರ ನೀಡಿದಲ್ಲಿ ಉಪಯುಕ್ತವಾಗಲಿದೆ. ಹಾಗಾಗಿ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಭೇಟಿ ವೇಳೆ ಜಗಳೂರು ಶಾಸಕ ದೇವೇಂದ್ರಪ್ಪ, ತಹಶೀಲ್ದಾರ್ ಸೈಯದ್ ಕಲೀಮುಲ್ಲಾ, ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್, ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X