ಸಂಘಟನೆಗೆ ಚುರುಕು ನೀಡಿ ಜನರ ಧ್ವನಿಯಾಗುತ್ತೇವೆ
ಆರ್‌ಎಸ್‌ಎಸ್ ನಾಯಕರನ್ನು ಭೇಟಿಯಾದ ಬೊಮ್ಮಾಯಿ
ಇನ್ನೆರಡು ದಿನಗಳ ಒಳಗಾಗಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಂತಿಮವಾಗಲಿದೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇಂದು ಸಂಜೆ ಅಥವಾ ನಾಳೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಶಾಸಕರ ಸಭೆ ನಡೆಯಲಿದೆ. ಅಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದೆ” ಎಂದರು.
ಉಳಿದಂತೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತಂತೆ ಅಭಿಪ್ರಾಯ ಹಂಚಿಕೊಂಡ ಅವರು, “ಚುನಾವಣೆ ಎದುರಿಸುವ ವೇಳೆ ನಮ್ಮಿಂದ ಲೋಪವಾಗಿದೆ. ಅದನ್ನು ಸರಿಪಡಿಸುವ ಪ್ರಕ್ರಿಯೆ ಆರಂಭಿಸುತ್ತೇವೆ. ಕೆಲವೇ ದಿನಗಳಲ್ಲಿ ಸಂಘಟನೆಗೆ ಚುರುಕು ನೀಡಿ ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
“ಈ ವಿಚಾರವಾಗಿ ಬಿಜೆಪಿ ನಾಯಕರೆಲ್ಲ ಮನೆಗೆ ಬಂದು ಮಾತನಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಅವರ ಅನುಭವ ಹೇಳುತ್ತಿದ್ದಾರೆ. ಎಲ್ಲವನ್ನೂ ಪಕ್ಷದ ಸಭೆಯಲ್ಲಿ ಸಮಾಲೋಚನೆ ಮಾಡಲಾಗುತ್ತದೆ” ಎಂದರು.
“ಈ ವೇಳೆ ಸರಿಪಡಿಸಿಕೊಳ್ಳಬೇಕಾದ ವಿಚಾರ ಹಾಗೂ ಎಲ್ಲಿ ಲೋಪವಾಗಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಕೆಲವೇ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ ಮತ್ತೆ ಜನರ ಧ್ವನಿಯಾಗುತ್ತೇವೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕರ್ನಾಟಕದ ಪ್ರಬುದ್ಧ ಮತದಾರರಿಂದ ದೇಶಕ್ಕೆ ಬಲವಾದ ಸಂದೇಶ : ದಸಂಸ
“ಜನರು ಕಾಂಗ್ರೆಸ್‌ನವರ ಗ್ಯಾರಂಟಿಗಳನ್ನು ನೋಡಿ ಅಧಿಕಾರ ಕೊಟ್ಟಿದ್ದಾರೆ. ಆ ನಂಬಿಕೆಯನ್ನುಅವರು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದ ಅವರು, “ಸಿಎಂ ಸ್ಥಾನ ಇದ್ದಾಗ ಪೈಪೋಟಿ ಸಹಜ. ಆ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾನು ಏನೂ ಹೇಳಲು ಬಯಸುವುದಿಲ್ಲ. ನಮ್ಮ ಪಕ್ಷದಲ್ಲಿ ಯುವಕರೊಂದಿಗೆ ಸೇರಿಕೊಂಡು ಎಲ್ಲರೂ ಸೇರಿ ಪಕ್ಷ ಕಟ್ಟುತ್ತೇವೆ” ಎಂದರು.
ಇದಕ್ಕೂ ಮುನ್ನ ಚಾಮರಾಜನಗರದಲ್ಲಿರುವ ಆರ್‌ಎಸ್‌ಎಸ್ ಕಚೇರಿ ಕೇಶವಕೃಪಕ್ಕೆ ತೆರಳಿದ್ದ ಬಸರಾಜ ಬೊಮ್ಮಾಯಿ ಅಲ್ಲಿ ಚರ್ಚೆ ನಡೆಸಿದರು. ಪಕ್ಷ ಎಡವಿದ್ದೆಲ್ಲಿ ಎನ್ನುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.