ಕುಟುಂಬದ ಕುಡಿಗಳೇ ರಾಜಕೀಯ ಉತ್ತರಾಧಿಕಾರಿಗಳಾಗುತ್ತಿರುವುದಕ್ಕೆ ಏನು ಕಾರಣ? ಉತ್ತರಾಧಿಕಾರದ ರಾಜಸತ್ತೆಯ ಹಿನ್ನೆಲೆ ನಮ್ಮ ದೇಶದ್ದು ಮಾತ್ರವಲ್ಲ… ಆದರೆ, ಈ ಪ್ರಮಾಣದಲ್ಲಿ ಕುಟುಂಬಸ್ಥರೇ ಅಧಿಕಾರದಲ್ಲಿರುವವರ ಜಾಗದಲ್ಲಿ ಬಂದು ಕೂರುವುದು ಜಗತ್ತಿನ ಇತರ ಪ್ರಬುದ್ಧ ಪ್ರಜಾತಾಂತ್ರಿಕ ದೇಶಗಳಲ್ಲಿ ಇದ್ದಂತಿಲ್ಲ.
ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಹಲವು ವೈಚಿತ್ರಗಳಿವೆ; ಆದರೆ ಮೂರೂ ಕಡೆ ಸಮಾನವಾಗಿರುವುದು ಕುಟುಂಬ ರಾಜಕಾರಣ. ಸಂಡೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದರು; ಶಿಗ್ಗಾಂವಿಯಲ್ಲಿ ಬಿಜೆಪಿ ಶಾಸಕರಿದ್ದರೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರಿದ್ದರು. ಈ ಮೂವರಲ್ಲಿ ಇಬ್ಬರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು; ಎಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ. ಸಂಡೂರಿನ ತುಕಾರಾಂರನ್ನೂ ಒಳಗೊಂಡಂತೆ, ಈ ಮೂವರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಚುನಾಯಿತರಾದ್ದರಿಂದ ಉಪಚುನಾವಣೆ ನಡೆಯುತ್ತಿದೆ.
ದುರಂತವೆಂದರೆ, ಯಾವ ಶಾಸಕರು ಸಂಸದರಾಗಿ ಚುನಾಯಿತರಾದರೋ, ಆಯಾ ಸಂಸದರ ಕುಟುಂಬದವರೇ ಅಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.
ಸಂಡೂರಿನಲ್ಲಿ ತುಕಾರಾಂರ ಪತ್ನಿ ಅನ್ನಪೂರ್ಣ, ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿಯವರ ಮಗ ಭರತ್ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಆಯಾ ಪಕ್ಷಗಳಿಂದ ಅಭ್ಯರ್ಥಿಗಳು. ಈ ರೀತಿ ಆಯ್ಕೆ ಮಾಡುವಾಗ ಯಾವ ಪಕ್ಷಕ್ಕೂ ಲಜ್ಜೆಯಾಗಲೀ, ಹಿಂಜರಿಕೆಯಾಗಲೀ ಆಗಿದ್ದಂತೆ ತೋರುವುದಿಲ್ಲ. ಹಾಗಾಗಿ, ಯಾವ ಪಕ್ಷವೂ ಇನ್ನೊಂದು ಪಕ್ಷವನ್ನು ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುವ ನೈತಿಕ ಸ್ಥೈರ್ಯವನ್ನೂ ಉಳಿಸಿಕೊಂಡಿಲ್ಲ.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚುನಾವಣಾ ರಾಜಕಾರಣದಲ್ಲಿರುವ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಶಿಗ್ಗಾಂವಿಯಲ್ಲಿ ಅಭ್ಯರ್ಥಿಯಾಗಿರುವುದನ್ನು ಇಲ್ಲಿ ನೆನೆಯಬೇಕಿದೆ. ಆದರೆ ದೊಡ್ಡ ದುರಂತವೆಂದರೆ, ಈ ಮೂರು ಪಕ್ಷಗಳನ್ನು ಹೊರತುಪಡಿಸಿದ ಇತರ ಪಕ್ಷಗಳು ಇಂದಿನ ಅಪಾರ ಸಂಪನ್ಮೂಲ ಬೇಡುವ ಚುನಾವಣೆಯಲ್ಲಿ ಲೆಕ್ಕಕ್ಕೇ ಇಲ್ಲ. ಲೆಕ್ಕಕ್ಕೆ ಬರುವ ಸ್ಥಿತಿ ಬೇಗನೇ ಏರ್ಪಟ್ಟಷ್ಟೂ ಚುನಾವಣಾ ರಾಜಕಾರಣದಲ್ಲಿ ಬದಲಾವಣೆಗಳನ್ನು ನೋಡಬಹುದು.
ಕುಟುಂಬದ ಕುಡಿಗಳೇ ರಾಜಕೀಯ ಉತ್ತರಾಧಿಕಾರಿಗಳಾಗುತ್ತಿರುವುದಕ್ಕೆ ಏನು ಕಾರಣ? ಉತ್ತರಾಧಿಕಾರದ ರಾಜಸತ್ತೆಯ ಹಿನ್ನೆಲೆ ನಮ್ಮ ದೇಶದ್ದು ಮಾತ್ರವಲ್ಲ… ಆದರೆ, ಈ ಪ್ರಮಾಣದಲ್ಲಿ ಕುಟುಂಬಸ್ಥರೇ ಅಧಿಕಾರದಲ್ಲಿರುವವರ ಜಾಗದಲ್ಲಿ ಬಂದು ಕೂರುವುದು ಜಗತ್ತಿನ ಇತರ ಪ್ರಬುದ್ಧ ಪ್ರಜಾತಾಂತ್ರಿಕ ದೇಶಗಳಲ್ಲಿ ಇದ್ದಂತಿಲ್ಲ. ಚುನಾವಣಾ ರಾಜಕಾರಣವು ವಿಪರೀತ ಹಣಹೂಡಿಕೆಯನ್ನು ಕೇಳುತ್ತಿದ್ದು, ಆ ಸಂಪನ್ಮೂಲವನ್ನು ಹೂಡಿದವರು ತಮ್ಮದೇ ಭದ್ರಕೋಟೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದು ಹಣವಂತರ ಆಟದ ಅಖಾಡವಾಗಿರುವುದರಿಂದ ಇದೇ ಅಧಿಕಾರವನ್ನು ಮತ್ತಷ್ಟು ದೊಡ್ಡ ಆರ್ಥಿಕ ಸಾಮ್ರಾಜ್ಯವನ್ನು ಕಟ್ಟಿಕೊಳ್ಳಲು ಬಳಸುತ್ತಾರೆ. ಅಂತಿಮವಾಗಿ, ಆ ರೀತಿ ‘ಬಹು ಶ್ರಮದಿಂದ’ ಕಟ್ಟಿಕೊಂಡ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಬೇಕೆಂತಲೂ ಸಂಬಂಧಪಟ್ಟವರಿಗೆ ಅನಿಸುತ್ತದೆ ಮತ್ತು ಅದನ್ನು ಸಾಕಾರಗೊಳಿಸಲು ಮತ್ತಷ್ಟು ಶ್ರಮ ಹಾಕುತ್ತಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ; ಮಹಿಳಾ ಪ್ರಾತಿನಿಧ್ಯಕ್ಕೆ ಇನ್ನೆಷ್ಟು ಕಾಲ ಕಾಯಬೇಕು?
ಆ ರೀತಿ ಶ್ರಮ ಹಾಕಿದ ಕುಮಾರಸ್ವಾಮಿಯವರು ತಮ್ಮ ಸುಪುತ್ರನನ್ನು ಅಪಾರ ಹೂಡಿಕೆಯೊಂದಿಗೆ 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದರು. ಎಂಟಕ್ಕೆ ಎಂಟು ಕ್ಷೇತ್ರಗಳಲ್ಲೂ ತಮ್ಮದೇ ಪಕ್ಷದ ಎಂಎಲ್‌ಎಗಳು, ಅವರಲ್ಲಿ ಮೂವರು ಮಂತ್ರಿಗಳು ಇದ್ದರು ಮತ್ತು ರಾಜ್ಯ ಸರ್ಕಾರದ ಅಧಿಕೃತ ಮುಖ್ಯಸ್ಥರಾಗಿ ಸ್ವತಃ ಕುಮಾರಸ್ವಾಮಿಯವರು ಇದ್ದರು. ಜಿಲ್ಲೆಯಲ್ಲಿ ಪ್ರಬಲವಾಗಿರುವ ಇನ್ನೊಂದು ಪಕ್ಷದಿಂದ ಅಧಿಕೃತ ಅಭ್ಯರ್ಥಿ ಇರಲಿಲ್ಲ. ಅವರ ಕುಟುಂಬ ಕಳೆದ 4 ದಶಕಗಳಿಂದ ನಿರಂತರ ಬೆಂಬಲ ಪಡೆದುಕೊಂಡಿದ್ದ ಜಾತಿ ಸಮುದಾಯಕ್ಕೆ ಸೇರಿದವರೇ ಹೆಚ್ಚು ಕಡಿಮೆ ಅರ್ಧದಷ್ಟು ಮತದಾರರು ಮಂಡ್ಯ ಕ್ಷೇತ್ರದಲ್ಲಿದ್ದರು. ಅದೆಲ್ಲದರ ಹೊರತಾಗಿ ಕುಟುಂಬ ರಾಜಕಾರಣದ ಮೂರನೇ ತಲೆಮಾರಿನ ನಿಖಿಲ್ ಚುನಾವಣೆಯಲ್ಲಿ ಸೋತರು. ಅದೇ ನಿಖಿಲ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಾಯಿ ಹಾಗೂ ತಂದೆಯವರು ಪ್ರತಿನಿಧಿಸಿದ್ದ ರಾಮನಗರ ಕ್ಷೇತ್ರದಿಂದ ಸೋತರು. ಒಂದು ರೀತಿಯಲ್ಲಿ ಇದು ಪ್ರಜಾತಂತ್ರದ ಸೊಗಸು.
ಅಂದರೆ, ಜನರೂ ಕುಟುಂಬ ರಾಜಕಾರಣವನ್ನೇ ಒಪ್ಪುತ್ತಾರೆ ಎನ್ನುವುದಕ್ಕೆ ಹೆಚ್ಚಿನ ಪುರಾವೆಗಳಿಲ್ಲ. ಹಾಗಾಗಿ ಇದು Winnabilityಯ (ಗೆಲ್ಲುವವರಿಗೇ ಟಿಕೆಟ್) ವಿಚಾರವೂ ಅಲ್ಲ. ಇದು ಆಸ್ತಿ, ಸಂಪನ್ಮೂಲ, ಆರ್ಥಿಕ ಸಾಮ್ರಾಜ್ಯಗಳನ್ನು ತಮ್ಮ ಉತ್ತರಾಧಿಕಾರಿಗೆ ವರ್ಗಾಯಿಸಬೇಕೆನ್ನುವ ಹಪಾಹಪಿಯ ಪರಿಣಾಮ ಅಷ್ಟೇ. ವಿವಿಧ ಕಸುಬುಗಳನ್ನು ಮಾಡುವವರ ಮಕ್ಕಳು, ತಮಗೆ ಸಿಕ್ಕ ಕೌಟುಂಬಿಕ ಅನುಭವದ ಕಾರಣಕ್ಕೆ ಅದೇ ಉದ್ಯೋಗವನ್ನು ಆರಿಸಿಕೊಳ್ಳುವುದು ಸಹಜ ಎಂಬ ವಾದವೂ ಇದೆ. ರಾಜಕಾರಣಿಗಳ ಮಕ್ಕಳಿಗೆ ರಾಜಕಾರಣದ ಅವಕಾಶವೇ ಇರಬಾರದು ಎಂದೇನೂ ಅಲ್ಲ. ಆದರೆ, ಆ ಮಕ್ಕಳು ತಳಸ್ತರದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾ ಉಳಿದವರ ಜೊತೆಗೆ ಸ್ಪರ್ಧಿಸುತ್ತಾ ಮೇಲೆ ಬರುವುದು ಕಡ್ಡಾಯವಾಗುವ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ರಾಜಕೀಯ ಪಕ್ಷಗಳು ಈ ‘ಸಂಪ್ರದಾಯ’ದಿಂದ ಹೊರಬರಬೇಕೆಂದು ಆಯಾ ಪಕ್ಷಗಳ ಕಾರ್ಯಕರ್ತರೂ ಸೇರಿದಂತೆ ಪ್ರಜ್ಞಾವಂತ ಮತದಾರರು ಆಗ್ರಹಿಸಬೇಕಿದೆ.
ಇಲ್ಲದಿದ್ದರೆ ಇದು ರಾಜಸತ್ತೆಯ ಪುನರಾಗಮನವಷ್ಟೇ ಅಲ್ಲ, ಅಪಾರ ಪ್ರಮಾಣದ ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡುತ್ತದೆ ಎಂಬುದನ್ನು ಇದುವರೆಗಿನ ಅನುಭವ ತೋರಿಸಿದೆ. ದೇಶವಾಳುವವರು ರಾಜ ಕುಟುಂಬದಲ್ಲಲ್ಲ, ಮತಗಟ್ಟೆಗಳ ಒಳಗಿಂದ ಹುಟ್ಟುತ್ತಾರೆ ಎಂಬ ಮಾತನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಮತದಾರರದ್ದೂ ಆಗಿದೆ. ಮತದಾರರ ಜಾಗೃತಿ ಆಂದೋಲನ ಈ ನಿಟ್ಟಿನಲ್ಲೂ ಸಾಗಬೇಕಿದೆ.
