ಉಪಚುನಾವಣೆ | ಕುಟುಂಬ ರಾಜಕಾರಣ; ಎಲ್ಲೋಯ್ತು ಬಿಜೆಪಿ ನೈತಿಕತೆ

Date:

Advertisements

“ಜವಹಾರ್ ಲಾಲ್ ನೆಹರು, ಇಂದಿರಾ ಗಾಂಧಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೀಗೆ ಕಾಂಗ್ರೆಸ್ ಕುಟುಂಬ ರಾಜಕಾರಣ ಮುಂದುವರೆಸಿಕೊಂಡು ಬಂದಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ. ‘Of the family, by the family and for the family’ (ಕುಟುಂಬದಿಂದ, ಕುಟುಂಬಕ್ಕಾಗಿ ಕುಟುಂಬಕ್ಕೋಸ್ಕರ) – ಇದು ಕಾಂಗ್ರೆಸ್‌ನ ಜೀವನ ಮಂತ್ರ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದಿದ್ದರು. ‘ಕಾಂಗ್ರೆಸ್‌ನವರು ತಮ್ಮ ಮಕ್ಕಳ ಭವಿಷ್ಯ, ಅಧಿಕಾರ ಮುಂದುವರಿಕೆಗಾಗಿ ಕೆಲಸ ಮಾಡಿದರೆ, ಸ್ವಂತ ಮಕ್ಕಳಿಲ್ಲದ ಮೋದಿ ಮತ್ತು ಯೋಗಿ ದೇಶದ ಜನರು, ದೇಶದ ನೂತನ ಪೀಳಿಗೆಯ ಯುವಜನರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿಗರು ಹೇಳಿಕೊಳ್ಳುತ್ತಿದ್ದರು. ಆದರೆ, ನಿಜಕ್ಕೂ ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವಾ? ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್‌ ಯಾವ ರಾಜಕಾರಣ ಮಾಡುತ್ತಿದೆ? ಇದೇ ಬಿಜೆಪಿ, ಜೆಡಿಎಸ್‌ ಎಂದರೆ, ಎಚ್.ಡಿ ದೇವೆಗೌಡ ಅವರ ಕುಟುಂಬದ ಪಕ್ಷವೆಂದು ಟೀಕಿಸಿದ್ದದ್ದು ಯಾಕೆ?

ಪ್ರಸ್ತುತ, ರಾಜ್ಯದಲ್ಲಿ ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ – ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಮೂರು ಕ್ಷೇತ್ರಗಳಲ್ಲಿಯೂ ರಾಜ್ಯದ ಮೂರು ಪ್ರಮುಖ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆಹಾಕಿವೆ. ಪಕ್ಷ ಸಂಘಟನೆಗಾಗಿ ದುಡಿದ, ಪಕ್ಷವನ್ನು ಕಟ್ಟಿದ ಪಕ್ಷದ ಮುಂಚೂಣಿ ಕಾರ್ಯಕರ್ತರನ್ನು ಕಡೆಗಣಿಸಿವೆ. ಕುಟುಂಬ ರಾಜಕಾರಣವನ್ನು ಮುಂದುವರೆಸಿದ್ದು, ಈ ಹಿಂದೆ ಶಾಸಕರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದವರ ಕುಟುಂಬದವರಿಗೇ ಮತ್ತೆ ಟಿಕೆಟ್ ನೀಡಿವೆ.

ಜೆಡಿಎಸ್‌ಗೆ ಅಪ್ಪ-ಮಕ್ಕಳ ಪಕ್ಷವೆಂದು ಹಣೆಪಟ್ಟಿ ಕಟ್ಟಿ ಬಹಳ ವರ್ಷಗಳೇ ಕಳೆದಿವೆ. ಜೆಡಿಎಸ್‌ನಲ್ಲಿ ಎಚ್‌.ಡಿ ದೇವೇಗೌಡ ಕುಟುಂಬವೇ ರಾಜಕೀಯವನ್ನು ಆವರಿಸಿಕೊಂಡಿದೆ. ಎಚ್‌.ಡಿ ದೇವೇಗೌಡ, ಅವರ ಮಕ್ಕಳಾದ ಹೆಚ್‌.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ. ಜೊತೆಗೆ,ಮೂರನೇ ತಲೆಮಾರಿನವರಾದ ದೇವೇಗೌಡ ಮೊಮ್ಮಕ್ಕಳು ನಿಖಿಲ್, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ರಾಜಕಾರಣದಲ್ಲಿ ಒಂದೊಂದು ಹುದ್ದೆ ಅಲಂಕರಿಸಿದ್ದಾರೆ. ಹುದ್ದೆಗಾಗಿ ಹವಣಿಸುತ್ತಿದ್ದಾರೆ. ಇನ್ನೇನು ದೇವೇಗೌಡ ನಾಲ್ಕನೇ ತಲೆಮಾರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಹೆಚ್ಚು ದೂರವೇನಿಲ್ಲ. ಜೆಡಿಎಸ್‌ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ದೊರೆಯುವುದು ಅತೀ ವಿರಳ. ದೇವೇಗೌಡ ಕುಟುಂಬದ ಎಲ್ಲರಿಗೂ ಒಂದೊಂದು ಸ್ಥಾನ ದೊರೆತಮೇಲೆಯೆ ಉಳಿದವರಿಗೆ ಅವಕಾಶ ದೊರೆಯುವುದು.

Advertisements

ಸದ್ಯ, ಕರ್ನಾಟಕದ ಮಟ್ಟಿಗೆ ಕುಟುಂಬ ರಾಜಕಾರಣ ಕೇವಲ ಜೆಡಿಎಸ್‌ಗೆ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣವೇ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕುಟುಂಬ ರಾಜಕಾರಣ ಸದ್ದು ಮಾಡಿತ್ತು. ಇದೀಗ, ಉಪಚುನಾವಣೆಗೂ ಮುಂದುವರೆದಿದೆ. ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲೂ ಮೂರು ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಕುಟುಂಬದ ಸದಸ್ಯರನ್ನೇ ಕಣಕ್ಕೆ ಇಳಿಸಿವೆ.

ಶಿಗ್ಗಾಂವಿ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಸಂಡೂರು ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ ಈಗ ಸಂಸದರಾಗಿ ಆಯ್ಕೆಯಾಗೊರುವ ಈ ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಕಣಕ್ಕಿಳಿದಿದ್ದಾರೆ.

‘ನಮ್ಮಲ್ಲಿ ಕುಟುಂಬ ರಾಜಕಾರಣವೇ ಇಲ್ಲ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ತುಂಬಿದೆ’ ಎಂದು ಪದೇಪದೆ ಟೀಕೆ, ಟಿಪ್ಪಣಿ ಮಾಡುವ ಬಿಜೆಪಿಗರು ಇದೀಗ ಮಾಡುತ್ತಿರುವುದೇನು? ಇನ್ನೊಬ್ಬರಿಗೆ ಬೆರಳು ಮಾಡಿ ತೋರಿಸುವ ಬಿಜೆಪಿಗರು ಹಾಗೂ ಪ್ರಧಾನಿ ಮೋದಿ ಅವರು ಇದೀಗ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಂತೂ ಕುಟುಂಬ ರಾಜಕಾರಣದ ಕಡು ವಿರೋಧಿ. ವಂಶವಾದ, ಪರಿವಾರ ರಾಜಕಾರಣದ ಬಗ್ಗೆ ಕಿಡಿ ಕಾರುತ್ತಲೇ ಬಂದವರು ಇದೀಗ ಕಮಲದಲ್ಲಿಯೂ ಕೂಡ ಈ ಕುಟುಂಬ ರಾಜಕಾರಣ ಆವರಿಸಿದೆ. ಈ ಬಗ್ಗೆ ಮೋದಿಯವರ ಬಾಯಲ್ಲಿ ಒಂದೇ ಒಂದು ಮಾತು ಇಲ್ಲ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಮೋದಿ ಮತ್ತು ಬಿಜೆಪಿಯವರು ವಿರೋಧಿಸುತ್ತಲೇ ಬಂದಿದ್ದರು. ಈ ಬಾರಿ, ಅವರ ಜತೆಗೆ ಮೈತ್ರಿ ಕುದುರಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರ ಪುತ್ರನನ್ನು ಕಣಕ್ಕಿಳಿಸಲು ಬಿಜೆಪಿಗರೆ ಸಮ್ಮತಿಸಿದ್ದಾರೆ. ಹಾಗಿದ್ದರೆ, ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುವ ಮೋದಿ ಮತ್ತು ಬಿಜೆಪಿಗರ ನೈತಿಕತೆ ಈಗ ಎಲ್ಲಿದೆ?

ಪ್ರತಿ ಚುನಾವಣೆ ಬಂದಾಗ ಕುಟುಂಬ ರಾಜಕಾರಣವನ್ನು ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಕೊನೆಗೆ ಕಾರ್ಯಕರ್ತರ ಒತ್ತಡ, ಗೆಲ್ಲುವ ಅನಿವಾರ್ಯತೆ ಎಂಬ ಸಬೂಬು ಕೊಟ್ಟು ತಮ್ಮ ಕುಟುಂಬದವರಿಗೆ ಮಣೆ ಹಾಕುತ್ತಲೇ ಬಂದಿದ್ದಾರೆ. ನಮ್ಮ ಕುಟುಂಬದವರಿಗೆ ಟಿಕೆಟ್‌ ಬೇಡವೆಂದು ಹೇಳಿದ್ದೆವು. ಆದರೆ, ಕಾರ್ಯಕರ್ತರು ಮಾತ್ರ ನಿರಂತರ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ, ವಿಧಿಯಿಲ್ಲದೆ ಕಣಕ್ಕಿಳಿಸುವುದು ಅನಿವಾರ್ಯ ಎಂಬ ಹಳಸು ಮಾತುಗಳನ್ನೇ ಪದೇ-ಪದೇ ಹೇಳಿತ್ತಿದ್ದಾರೆ.

ಪಕ್ಷಕ್ಕೆ ನಿಷ್ಠಾವಂತರಾಗಿ ವರ್ಷಗಟ್ಟಲೆ ದುಡಿದಿರುವ ಪ್ರಾಮಾಣಿಕ ಕಾರ್ಯಕರ್ತರು, ನಾಯಕರು, ಒಂದಿಷ್ಟು ಹಣ, ಜಾತಿಬಲ ಇವೆಲ್ಲವನ್ನೂ ಬೆನ್ನಿಗೆ ಕಟ್ಟಿಕೊಂಡು ನಾಯಕರಲ್ಲಿ ಟಿಕೆಟ್‌ಗಾಗಿ ಬೇಡಿಕೆಯಿಡುತ್ತಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರು ಮಾತ್ರ ಬಾವುಟ ನೀಡುವುದು, ಮತ ಯಾಚನೆ, ನಾಯಕರಿಗೆ ಜೈಕಾರ ಹಾಕುವುದಕ್ಕೆ ಸೀಮಿತವಾಗುತ್ತಿದ್ದಾರೆ.

ಕುಟುಂಬ ರಾಜಕಾರಣವನ್ನ ಅತಿಯಾಗಿ ದ್ವೇಷ ಮಾಡಿ ಕಾಂಗ್ರೆಸ್‌ಗೆ ನೈತಿಕ ಪಾಠ ಮಾಡುವ ಬಿಜೆಪಿ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಕರ್ನಾಟಕದಲ್ಲಿಯೇ ಬಿಜೆಪಿಯ ಕುಟುಂಬ ರಾಜಕಾರಣಕ್ಕೆ ಹೇಗೆ ಅಂಟಿಕೊಂಡಿದೆ ಎಂಬುದನ್ನು ನೋಡಬಹುದು. ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷನ್ನಾಗಿ ಮಾಡಿದರು. ತಮ್ಮ ಮತ್ತೊಬ್ಬ ಮಗ ರಾಘವೇಂದ್ರ ಅವರನ್ನು ಸಂಸದರಾಗಿ ಮಾಡಿದರು. ಈಗ, ತಮ್ಮ ಆಪ್ತ ಬಸವರಾಜ ಬೊಮ್ಮಾಯಿ ಮಗನಿಗೆ ಶಿಗ್ಗಾಂವಿಯಲ್ಲಿ ಟಿಕೆಟ್‌ ಕೊಡಿಸಿದ್ದಾರೆ. ತಮ್ಮ ಮಗ ಭರತ್‌ಗೆ ಟಿಕೆಟ್‌ ಕೊಡಿಸುವ ಇರಾದೆಯೇ ತನಗಿಲ್ಲ ಎಂದು ಬೊಮ್ಮಾಯಿ ಬಹಿರಂಗವಾಗಿ ಪದೇಪದೆ ಹೇಳಿದ್ದರೂ ಕೂಡ ಚುನಾವಣೆ ಹತ್ತಿರ ಬಂದಾಗ ಎಲ್ಲ ಬದಲಾಯಿತು. ಬೊಮ್ಮಾಯಿ ಕುಟುಂಬ ರಾಜಕಾರಣ ಮುಂದುವರೆಸಲು ಭರತ್‌ ಬೊಮಾಯಿಗೆ ಟಿಕೆಟ್‌ ಗಿಟ್ಟಿಸಿಕೊಂಡರು.

ಸಾಮಾನ್ಯವಾಗಿ ಎಲ್ಲ ಪಕ್ಷದಲ್ಲಿಯೂ ಕೂಡ ಕುಟುಂಬ ರಾಜಕಾರಣ ಇದೆ. ಜೆಡಿಎಸ್‌ನಲ್ಲಿ ದೇವೇಗೌಡ ಅವರ ವಂಶವೃಕ್ಷವೇ ರಾಜಕಾರಣದಲ್ಲಿ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಜಿ, ಮಲ್ಲಿಕಾರ್ಜುನಪ್ಪ, ಡಿ.ಕೆ.ಶುವಕುಮಾರ್, ಎಸ್ ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನ್ ಖರ್ಗೆ, ಜಗದೀಶ್ ಶೆಟ್ಟರ್, ಭೀಮಣ್ಣ ಖಂಡ್ರೆ, ಸತೀಶ್ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ಕೆ,ಎಚ್,ಪುಟ್ಟಸ್ವಾಮಿ ಗೌಡ, ರಾಮಲಿಂಗಾರೆಡ್ಡಿ, ಎಂ,ವಿ,ವೆಂಕಟಪ್ಪ, ಶಿವಾನಂದ ಪಾಟೀಲ್, ಎಲ್‌.ಎ ರವಿ ಸುಬ್ರಹ್ಮಣ್ಯ ಮತ್ತು ಅವರ ಅಣ್ಣನ ಮಗ ತೇಜಸ್ವಿ ಸೂರ್ಯ, ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್, ಎಸ್.ಆರ್ ಬೊಮ್ಮಾಯಿ, ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಕೆ ಶರಣಪ್ಪ, ಜಿ.ಎಂ ಸಿದ್ಧೇಶ್ವರ, ರಾಘವೇಂದ್ರ ಹಿಟ್ನಾಳ ಸೇರಿದಂತೆ ಹಲವರು ಕುಟುಂಬ ರಾಜಕಾರಣವನ್ನು ಮುಂದುವರೆಸಿದ್ದಾರೆ.

ಕುಟುಂಬ ರಾಜಕಾರಣ ಎನ್ನುವುದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಹಾಸಿ ಹೊದ್ದು ಮಲಗಿದೆ. ತಮ್ಮ ರಾಜಕೀಯ ವರ್ಚಸ್ಸು ವೃದ್ಧಿಸಿಕೊಳ್ಳುವುದಕ್ಕೋಸ್ಕರ ತಮ್ಮ ಕುಟುಂಬದವರನ್ನು ಗೆಲ್ಲಿಸಲಿಕ್ಕೆ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೇ, ಗೆಲುವಿಗೆ ಇಡೀ ಕುಟುಂಬವನ್ನೇ ಪ್ರಚಾರಕ್ಕೂ ಇಳಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ

ಪ್ರಜಾಪ್ರಭುತ್ವದಲ್ಲಿ ‘‘ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯುವ ಪ್ರಜೆಗಳ ಸರ್ಕಾರ’ ಎಂದಿರುವುದು. ಆದರೆ ಚುನಾವಣೆ ಸಮಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಸಂಪೂರ್ಣ ಬದಲಾಯಿಸಿ ‘ಕುಟುಂಬದಿಂದ ಕುಟುಂಬಕ್ಕಾಗಿ ನಡೆಯುವ ಕುಟುಂಬದ ಸರ್ಕಾರ’ ಎನ್ನುವಂತೆ ಮಾಡಿಕೊಂಡಿವೆ.

ಎಲ್ಲ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮ ವಿರೋಧಿಗಳನ್ನು ಟೀಕಿಸುತ್ತವೆ. ಆದರೆ, ಟಿಕೆಟ್‌ ಹಂಚಿಕೆ ವಿಷಯ ಬಂದಾಗ ಮಾತ್ರ ಎಲ್ಲ ಪಕ್ಷಗಳು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತವೆ. “ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವ ಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು” ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಉಪದೇಶ. ಆದರೆ, ಅವರ ಪಕ್ಷದಲ್ಲಿ ಆಗುತ್ತಿರುವುದೇನು. ಇದು, ತಮ್ಮ ತಟ್ಟೆಲ್ಲಿ ಬಿದ್ದಿರುವ ಹೆಗ್ಗಣ ನೋಡದೇ, ಇನ್ನೊಬ್ಬರ ತಟ್ಟೆಲಿ ಬಿದ್ದ ನೋಣ ಹುಡುಕುವ ಚಾಳಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X