ಸಾಗುವಾನಿ ಮರ ಕಡಿದು ಅಕ್ರಮ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಗುಂಪನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ಅಳೇಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರ ಪೈಕಿ ಮಿಥುನ್ ಎಂ ಎಸ್ (27) ಹಾಗೂ ಕೃಷ್ಣ(36) ಎಂಬ ಇಬ್ಬರನ್ನೂ ಶುಕ್ರವಾರ ತಡರಾತ್ರಿಯೇ ಸಾಗುವಾನಿ ನೆಡುತೋಪಿನಲ್ಲಿಯೇ ಬಂಧಿಸಲಾಗಿತ್ತು. ಬಳಿಕ ನಾಲ್ವರನ್ನು ಶನಿವಾರ ಬೆಳಗ್ಗೆ ಬಂಧಿಸಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಶನಿವಾರ ಬಂಧನಕ್ಕೊಳಗಾದ ಆರೋಪಿಗಳನ್ನು ಕೌಶಿಕ್, ಅಶ್ವಥ್, ರಿಷಿಕಾಂತ್, ಅಕ್ಷಯ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಬಾಳೆಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನಿಬ್ಬರು ಆರೋಪಿಗಳಾದ ನವೀನ್ ಆಚಾರಿ, ಆಶಿಕ್ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಪರಾರಿಯಾದವರು ಗಡಿಕಲ್ ನಿವಾಸಿಗಳೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಳೆಹೊನ್ನೂರು ಸಮೀಪ ಅಳೇಹಳ್ಳಿ ಗ್ರಾಮ, 8ನೇ ಮೈಲಿಕಲ್ಲು ವ್ಯಾಪ್ತಿಯ ಕೂಸ್ಕಲ್ ಮೀಸಲು ಅರಣ್ಯ ಪ್ರದೇಶ ಸಾಗುವಾನಿ ನೆಡುತೋಪಿನಲ್ಲಿ ಮಧ್ಯರಾತ್ರಿ ಎಂಟು ಜನ ಅಕ್ರಮವಾಗಿ ಐದು ತುಂಡು ಸಾಗುವಾನಿ ಮರ ಕಡಿದು ಸಾಗಿಸುತ್ತಿದ್ದರು.
ಅಕ್ರಮವಾಗಿ ಸಾಗುವಾನಿ ಮರ ಕಡಿದು, ಸಾಗಿಸುತ್ತಿರುವ ಸಮಯದಲ್ಲಿ ಇಬ್ಬರು ಆರೋಪಿಗಳನ್ನು ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು, ಚಿಕ್ಕಅಗ್ರಹಾರ ವಲಯ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ಕಳ್ಳತನ ಮಾಡಿ ಬೆಲೆ ಬಾಳುವ ಸಾಗುವಾನಿ ಮರವನ್ನು ಎಂಟು ಜನ ಸೇರಿಕೊಂಡು ಮಹೇಂದ್ರ ಜೀತೊ ವಾಹನದಲ್ಲಿ ಸಾಗುವಾನಿ ಮರವನ್ನು ಸಾಗಿಸುತ್ತಿದ್ದರು. ಮಾಹಿತಿ ತಿಳಿದ ತಕ್ಷಣ ಕೂಡಲೇ ಆರೋಪಿಗಳನ್ನು ಬಂಧಿಸಿ ಸಾಗುವಾನಿ ಮರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿದ್ದೀರಾ:ಚಿಕ್ಕಮಗಳೂರು | ಅ. 30ರಿಂದ ದೇವೀರಮ್ಮ ದೀಪೋತ್ಸವ: ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳು
“ಎಂಟು ಜನರಲ್ಲಿ ಆರು ಮಂದಿಯನ್ನು ಬಂಧಿಸಿದ್ದೇವೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ. ಐದು ತುಂಡು ಸಾಗುವಾನಿ ಮರವನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಲಾಗಿದೆ” ಎಂದು ವಲಯ ಅರಣ್ಯಾಧಿಕಾರಿ ಆದರ್ಶ್ ಅವರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ವಲಯ ಅರಣ್ಯಾಧಿಕಾರಿ ಆದರ್ಶ್ ಎಂ. ಪಿ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ನಂದೀಶ ಹೆಚ್. ಬಿ, ರಂಗನಾಥ ಆರ್ ಅತಾಲಟ್ಟಿ ಹಾಗೂ ಗಸ್ತು ಅರಣ್ಯ ಪಾಲಕ ಪ್ರತಾಪ್ ಆರ್, ರಂಗನಾಥ ಕೆ. ಹೆಚ್, ನಾಗರಾಜ ಎಂ. ಡಿ, ಲೋಹಿತ್, ಚಾಲಕ ನಾಗರಾಜ್ ಮತ್ತು ಪವನ್ ದಾಳಿಯ ವೇಳೆ ತಂಡಲ್ಲಿದ್ದರು.
