ರಾಮನಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಬಾಯಿ ಅವರು ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅಳವಡಿಕೆಗಾಗಿ ಗುತ್ತಿಗೆದಾರನೊಬ್ಬನಿಗೆ ₹3.50 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಅಮಾನತು ಮಾಡಲಾಗಿದೆ.
ಓಎಫ್‌ಸಿ ಕೇಬಲ್ ಅಳವಡಿಕೆಗೆ ಗುತ್ತಿಗೆದಾರನಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ ಅವರನ್ನು ಪೌರಾಡಳಿತ ನಿರ್ದೇಶನಾಲಯ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಮುಖ್ಯಾಧಿಕಾರಿ ಜುಲೈ 20ರಂದು ಓಎಫ್‌ಸಿ ಕೇಬಲ್ ಅಳವಡಿಕೆಗೆ ಒಂದು ಕಿಲೋಮೀಟರ್ ಕೇಬಲ್ ಅಳವಡಿಕೆಗೆ ₹2 ಲಕ್ಷ, ಎರಡು ಕಿ.ಮೀ. ಗೆ ₹4ಲಕ್ಷ ನೀಡುವಂತೆ ಬೇಡಿಕೆ ಇಟ್ಟ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಲಾಖೆ ವಿಚಾರಣೆ ನಡೆಸಿದ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕ ಪ್ರಭುಲಿಂಗ ಕವಳಕಟ್ಟೆ ಕೂಡಲೇ ಜಾರಿಗೆ ಬರುವಂತೆ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಆಗಿದ್ದೇನು?
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಬಾಯಿ ಅವರು ಜುಲೈ 20ರಂದು ಒಎಫ್‌ಸಿ ಕೇಬಲ್ ಅಳವಡಿಕೆಗೆ ಗುತ್ತಿಗೆದಾರನಿಂದ ಒಂದು ಕಿಲೋಮೀಟರ್‌ಗೆ ಕೇಬಲ್ ಅಳವಡಿಕೆಗೆ ಎರಡು ಲಕ್ಷ, ಎರಡು ಕಿಲೋಮೀಟರ್ ಗೆ ನಾಲ್ಕು ಲಕ್ಷ ಹಣ ನೀಡುವಂತೆ ಗುತ್ತಿಗೆದಾರನಿಗೆ ಬೇಡಿಕೆ ಇಟ್ಟ ವಿಡಿಯೋ ಸಂಭಾಷಣೆ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಆನೇಕಲ್ ಮೂಲದ ಈಶಾ ಎಂಟರ್‌ಪ್ರೈಸಸ್‌ನ ಗುತ್ತಿಗೆದಾರ ವಿಶ್ವನಾಥ್, ಅದನ್ನು ತನ್ನ ಮೊಬೈಲ್‌ನಲ್ಲಿ ಈ ಸಂಭಾಷಣೆಯನ್ನು ಚಿತ್ರೀಕರಿಸಿಕೊಂಡಿದ್ದಾನೆ. ಈತ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶ್ವೇತಾ ಅವರನ್ನು ಭೇಟಿಯಾಗಲೆಂದು ತೆರಳಿದ್ದ ವಿಡಿಯೋ ಮಾಡಿದ್ದಾನೆ.
ಪಟ್ಟಣದಲ್ಲಿ 2 ಕಿಲೋಮೀಟರ್ ರಸ್ತೆಯಲ್ಲಿ ಕೇಬಲ್ ಅಳವಡಿಕೆಗೆ ಸಹಕರಿಸುವಂತೆ ವಿಶ್ವನಾಥ್ ಕೇಳಿದ್ದಾನೆ. ಅದಕ್ಕಾಗಿ, ಬೇರೆಯವರಿಗೆ ಹಣ ಕೊಟ್ಟಿರುವುದಾಗಿ ಗುತ್ತಿಗೆದಾರ ಹೇಳುತ್ತಾನೆ. ಆಗ ಶ್ವೇತಾ ಅವರು ಕಿ.ಮೀ.ಗೆ ₹2 ಲಕ್ಷದಂತೆ ₹4 ಲಕ್ಷಕ್ಕೆ ಬೇಡಿಕೆ ಇಟ್ಟು, ಕಡೆಗೆ ₹3.50 ಲಕ್ಷಕ್ಕೆ ಒಪ್ಪಿಕೊಳ್ಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಶ್ವೇತಾ ಈ ವಿಷಯವನ್ನು ಬೇರೆ ಯಾರೊಂದಿಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ನಂತರ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಕೇಬಲ್ ಅಳವಡಿಕೆಯ ವಿಷಯ ತಿಳಿಸುತ್ತಾರೆ. ಕೆಲಸಕ್ಕೆ ಸಂಬಂಧಿಸಿದಂತೆ, ಏನೇ ಇದ್ದರೂ ನೋಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಗುತ್ತಿಗೆದಾರ ವಿಶ್ವನಾಥ್ ಯೂಟರ್ನ್ ಹೊಡೆದಿದ್ದಾರೆ. “ಶ್ವೇತಾ ಬಾಯಿ ಅವರು ಚಂದಾಪುರ ಪಟ್ಟಣ ಪಂಚಾಯಿತಿಯಲ್ಲೂ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಅಂದಿನಿಂದಲೂ ಅವರು ಪರಿಚಯವಿದ್ದರು. ಈ ವಿಡಿಯೋ ಅವರನ್ನು ರೇಗಿಸಲು ಮಾಡಿಕೊಂಡಿದ್ದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ” ಎಂದಿದ್ದಾರೆ.
“ಈ ವಿಡಿಯೋ ನನ್ನ ಯೂಟ್ಯೂಬ್ ಚಾನೆಲ್‌ಗೂ ಅಪ್ಲೋಡ್ ಮಾಡಲಾಗಿತ್ತು. ನಂತರ, ಆ ವಿಡಿಯೋ ಡಿಲೀಟ್ ಮಾಡಿದ್ದೇನೆ. ಅದೇ ವಿಡಿಯೋ ಈಗ ವೈರಲ್ ಆಗಿದ್ದು, ವಿಡಿಯೋವನ್ನು ಕತ್ತರಿಸಿ ತೋರಿಸಲಾಗುತ್ತಿದೆ. ವಿಡಿಯೋಗೆ ಸಂಬಂಧಿಸಿದಂತೆ, ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಸ್ಪಷ್ಟನೆಯ ಪತ್ರವೊಂದನ್ನು ಸಲ್ಲಿಸಿದ್ದೇನೆ. ಅವರು ವಿಚಾರಣೆಗೆ ಕರೆದರೆ ಹೋಗಿ ಸತ್ಯ ತಿಳಿಸಲು ಸಿದ್ಧನಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಕಾ.ತ. ಚಿಕ್ಕಣ್ಣನವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿರುವ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರಾದ ಪ್ರಭುಲಿಂಗ ಕವಳಕಟ್ಟೆ, ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಶ್ವೇತಾಬಾಯಿ ಅವರನ್ನುಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.