ಬೆಂಗಳೂರು ನಗರದ ಜಾಲಹಳ್ಳಿಯಲ್ಲಿ ಹೆಚ್‌ಎಂಟಿ ಕಂಪನಿಗೆ ಸೇರಿದ ಐದು ಎಕರೆ ವಶಕ್ಕೆ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಹೆಚ್‌ಎಂಟಿ ಜಮೀನು ವಶ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರಾಜ್ಯ ಸರ್ಕಾರಕ್ಕೆ ಹಿನ್ನೆಡೆ ಆಗುವುದು ಖಚಿತ” ಎಂದರು.
“ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ, ಮೊದಲು ಅದರ ಬಗ್ಗೆ ನೋಡಲಿ ಸಚಿವ ಈಶ್ವರ್ ಖಂಡ್ರೆ ಅವರು. ಇದರ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪು ಅನ್ನೇ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಇದನ್ನು ನೋಡಲಿ. ಎಷ್ಟು ಎಕರೆ ಲೂಟಿ ಆಗಿದೆ ಅಲ್ಲಿ ನೋಡಲಿ. ನಿನ್ನೆ ಐದು ಎಕರೆಗೆ ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿಕೊಂಡಿದ್ದಾರೆ. ಕೋರ್ಟ್ ಆದೇಶಗಳಿಗೆ ಹೆಚ್‌ಎಂಟಿ ಹಾಗೂ ಅಧಿಕಾರಿಗಳು ತಲೆ ಬಾಗಬೇಕಾಗುತ್ತದೆ” ಎಂದು ಹೇಳಿದರು.
ಅರಣ್ಯ ಇಲಾಖೆ ಫಲಕ ಅಳವಡಿಕೆ
ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್‌ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಎಚ್ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಶುಕ್ರವಾರ ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದಿದ್ದು ಅಲ್ಲಿ ಕರ್ನಾಟಕ ಅರಣ್ಯ ಇಲಾಖೆ ಫಲಕವನ್ನು ನೆಟ್ಟು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಚ್ಎಂಟಿ ವಶದಲ್ಲಿದ್ದ ಐದು ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆದ ಅರಣ್ಯ ಇಲಾಖೆ
1896 ಮೇ 29ರ ಸರ್ಕಾರದ ಅಧಿಸೂಚನೆ ಸಂಖ್ಯೆ 10407, ಎಫ್.ಟಿ.ಎಫ್. 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್.ಟಿ.ಎಫ್.-15-1900ರ ರೀತ್ಯ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು once a forest is always a forest ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.