ಜಾತಿ ಮತ್ತು ಲಿಂಗತ್ವ | ಊರ್ಮಿಳಾ ಪವಾರ್ ಆತ್ಮಕತೆ ಆಯ್‌ದಾನ್

Date:

Advertisements
ಆಯ್‌ದಾನ್ ಎಂದರೆ ಬಿದಿರಿನ ಬುಟ್ಟಿ. ಸಂಗ್ರಹಣೆಗೆ ಹಾಗೂ ಇತರ ಮನೆ ವಸ್ತುಗಳನ್ನು ಇಟ್ಟುಕೊಳ್ಳುವ ಬಿದಿರಿನ ಬುಟ್ಟಿಗಳ ಹೆಣೆಯುವುದು ಮಹಾರ್ ಸಮುದಾಯದವರ ಜಾತಿ ಆಧಾರಿತ ಕಸುಬಾಗಿತ್ತು. ಊರ್ಮಿಳಾ ಅವರು ತನ್ನ ತಾಯಿ ಹೆಣೆಯುತ್ತಿದ್ದ ಬಿದಿರಿನ ಬುಟ್ಟಿ ಮತ್ತು ತಮ್ಮ ಬರವಣಿಗೆಯ ನಡುವಿರುವ ಹೇಳಲಾರದ ನೋವಿನ ಬಂಧವನ್ನು ಕಾಣುತ್ತಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಆತ್ಮಕತೆಗೆ ಆಯ್‌ದಾನ್ ಎಂಬ ಹೆಸರಿಟ್ಟಿದ್ದಾರೆ. 

ಊರ್ಮಿಳಾ ಪವಾರ್ ಅವರು ಮಹಾರಾಷ್ಟ್ರದ ಕೊಂಕಣ ಪ್ರದೇಶದವರು. ಅಲ್ಲಿ ಆಯ್‌ದಾನ್ ಎಂದರೆ ಬಿದಿರಿನ ಬುಟ್ಟಿ. ಸಂಗ್ರಹಣೆಗೆ ಹಾಗೂ ಇತರ ಮನೆ ವಸ್ತುಗಳನ್ನು ಇಟ್ಟುಕೊಳ್ಳುವ ಬಿದಿರಿನ ಬುಟ್ಟಿಗಳ ಹೆಣೆಯುವುದು ಮಹಾರ್ ಸಮುದಾಯದವರ ಜಾತಿ ಆಧಾರಿತ ಕಸುಬಾಗಿತ್ತು. ತಮ್ಮ ಬಾಲ್ಯದ ಬಗ್ಗೆ ಹಿಂತಿರುಗಿ ನೋಡುವಾಗ ಊರ್ಮಿಳಾ ಅವರು ತನ್ನ ತಾಯಿ ಹೆಣೆಯುತ್ತಿದ್ದ ಬಿದಿರಿನ ಬುಟ್ಟಿ ಮತ್ತು ತಮ್ಮ ಬರವಣಿಗೆಯ ನಡುವಿರುವ ಹೇಳಲಾರದ ನೋವಿನ ಬಂಧವನ್ನು ಕಾಣುತ್ತಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಆತ್ಮಕತೆಗೆ ಆಯ್‌ದಾನ್ ಎಂಬ ಹೆಸರಿಟ್ಟಿದ್ದಾರೆ.

ಊರ್ಮಿಳಾ ಅವರು ಮರಾಠಿ ಸಾಹಿತ್ಯದಲ್ಲಿ ತಮ್ಮ ಸ್ನಾತ್ತಕೋತ್ತರ ಪದವಿಯನ್ನು ಮುಗಿಸಿ ರಾಜ್ಯ ಸರ್ಕಾರದ ಸಾರ್ವಜನಿಕ ಕೆಲಸಗಳ (ಪಿಡ್ಲ್ಯೂಡಿ) ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇತ್ತೀಚೆಗೆ ಅವರು ಕೆಲಸದಿಂದ ನಿವೃತ್ತರಾದರು. ಹೆಸರಾಂತ ಲೇಖಕಿಯಾಗಿ ಹಲವಾರು ಸಾಮಾಜಿಕ ಮತ್ತು ಸಾಹಿತ್ಯಕ ಸಂಸ್ಥೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಜೊತೆಗೆ ಮುಂಬೈ ಮತ್ತು ಕೊಂಕಣ ಪ್ರದೇಶದ ಸ್ವಾಯತ್ತ ದಲಿತ ಸ್ತ್ರೀವಾದಿ ಸಂಘಟನೆಗಳ ಕೆಲಸ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬರೆಯವುದು ವಿಶೇಷವಾಗಿ ತಮ್ಮ ಬದುಕಿನ ಮಹತ್ವದ ಗಳಿಗೆಗಳ ಬಗ್ಗೆ ಮತ್ತು ಪ್ರಕಟಿಸುವುದು, ಊರ್ಮಿಳಾ ತಾಯಿಯವರ ಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದೆ. ತಮ್ಮ ಬರವಣಿಗೆಗೆ ಸಿಕ್ಕ ಪ್ರತಿಕ್ರಿಯೆಯೂ ಆಯ್‌ದಾನ್ ಬರೆಯಲು ಅವರಿಗೆ ಪ್ರೇರಣೆಯಾಯಿತು. ಅವರ ಸಣ್ಣ ಕತೆಗಳು, ಪ್ರವಾಸ ಕತೆಗಳು ಮತ್ತು ಸಂಶೋಧನಾ ಬರಹಗಳು ಪ್ರಕಟವಾಗಿದ್ದು ಓದುಗರು ಅವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ. ಸ್ನೇಹಿತರು ಮತ್ತು ಹಿತೈಷಿಗಳ ಪ್ರೋತ್ಸಾಹ ”ತಾಯಿಯಿಂದ ಬಳುವಳಿಗೆ ಪಡೆದುಕೊಂಡ ಆಯ್‌ದಾನ್‌ನ ಹೆಣಿಗೆಯನ್ನು ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿತು” ಎಂದು ಅವರು ಹೇಳುತ್ತಾರೆ.

ಊರ್ಮಿಳಾ ತಾಯಿಯವರ ಮನಸ್ಸಿನಲ್ಲಿ ಧರ್ಮಾಂತರದ ನೆನಪುಗಳು ಅಚ್ಚಳಿಯದೇ ಉಳಿದಿವೆ. ಮಹಾರರು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಹಳ್ಳಿಯ ಗಡಿಯ ಹೊರಗೆ ವಾಸಿಸುವ ಪದ್ಧತಿಯಿದ್ದರೆ ಕೊಂಕಣದಲ್ಲಿ ಅವರು ಹಳ್ಳಿಯ ಮಧ್ಯದಲ್ಲಿ ವಾಸಿಸುತ್ತಿದ್ದರು. ಅವರು ಯಾವಾಗಲೂ ಕೂಗಳತೆಯಲ್ಲಿ ಇರುತ್ತಿದ್ದರು, ಸಮಾಚಾರ ಒಯ್ಯಲು ಅವರನ್ನು ಕರೆಯಲಾಗುತ್ತಿತ್ತು. ಸುತ್ತಲೂ ಮೇಲ್ಜಾತಿಯವರಿಂದ ಸುತ್ತುವರೆದಿದ್ದರಿಂದ ಒಂದು ಸಣ್ಣ ನಿಯಮ ಮುರಿದರೂ ಎಲ್ಲಾ ಕಡೆಗಳಿಂದಲೂ ದಾಳಿಯಾಗಬಹುದೆಂಬ ಅರಿವಿದ್ದ ಸಮುದಾಯದ ಸದಸ್ಯರು ಹಳ್ಳಿಯಲ್ಲಿ ಓಡಾಡುವಾಗ ಮುದುರಿಕೊಂಡು ಹೋಗುತ್ತಿದ್ದರು. ಬದುಕಿನ ನಡಿಗೆ ಧರ್ಮಾಂತರದ ನಂತರ ಬದಲಾಯಿತು. ಧಮ್ಮವು ಹೊಸ ಜೀವನ ವಿಧಾನವಾಯಿತು, ಅಪಾರ ಸಾಮಾಜಿಕ ಶಕ್ತಿಯಿದ್ದ ಜೀವನ ವಿಧಾನವದು.

Advertisements

ದಲಿತ ಸಾಹಿತ್ಯಕ್ಕೆ ಮತ್ತು ದಲಿತ ಚಳವಳಿಗೆ ಅವರನ್ನು ಪರಿಚಯಿಸಿದಾಗ, ಊರ್ಮಿಳಾ ತಾಯಿಯವರು ‘ದಲಿತ’ ಎಂಬ ವರ್ಗದ ಬಳಕೆ ಕುರಿತ ವಿವಾದಗಳ ಬಗ್ಗೆ ಅರಿತುಕೊಂಡರು. ಈ ವರ್ಗದ ಬಗ್ಗೆ ಅವರಿಗೆ ಇದ್ದ ಮತ್ತು ಇರುವ ತಿಳಿವಳಿಕೆ ಏನೆಂದರೆ ವೈಚಾರಿಕತೆ. ದಲಿತರು ಸಾಮಾಜಿಕ ವ್ಯವಸ್ಥೆಯಿಂದ ದಮನಕ್ಕೆ ಮತ್ತು ಅವಮಾನಕ್ಕೆ ಒಳಗಾದವರು ಹಾಗೂ ಅದರ ವಿರುದ್ಧ ವೈಚಾರಿಕ ಮಾನವೀಯವಂತರಾಗಿ ಪ್ರತಿರೋಧಿಸಿ ನಿಲ್ಲುವವರು ಎಂದು ಅವರು ವಾದಿಸುತ್ತಾರೆ. ಚಿಂತಿಸುವ ವ್ಯಕ್ತಿಗಳಾಗಿ ಇರುವ ಪ್ರಜ್ಞೆ ದಲಿತ ಸಮುದಾಯಕ್ಕೆ ಫುಲೆ-ಅಂಬೇಡ್ಕರ್ ಚಳವಳಿಯಿಂದ ಬಂದಿದೆ. ಅವರ ಪ್ರಕಾರ, ಸಮಾಜದಿಂದ ಜಾತಿ ಅದೃಶ್ಯವಾಗಿದೆ ಎಂಬ ತಿಳಿವಳಿಕೆ ವ್ಯಾಪಕವಾಗಿದೆ. ಅದು ಹಲವಾರು ಗೌಪ್ಯ ಸ್ವರೂಪದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಕಾರಿನಲ್ಲಿ ರ‍್ರನೆ ಹೋಗುವವರಿಗೆ ಅದು ‘ಅದೃಶ್ಯ’ವಾಗಿದ್ದು ನೆಲದ ಮೇಲೆ ಕಾಲೂರಿದವರಿಗೆ ಕಾಣಿಸುತ್ತದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಇದು ಮಹಿಳೆಯರ ಪರಿಸ್ಥಿತಿಗೂ ಅನ್ವಯಿಸುತ್ತದೆ- ಮಹಿಳೆಯರು ಎಲ್ಲೆಡೆ ಇದ್ದಾರೆಂದು ಅನಿಸಬಹುದು ಆದರೂ ‘ದಲಿತ ಮಹಿಳೆ ಎಲ್ಲಿದ್ದಾಳೆ?’ ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ. ಕೆಲವು ಶಿಕ್ಷಿತ, ಉದ್ಯೋಗಸ್ಥ ದಲಿತ ಮಹಿಳೆಯರ ದನಿ ಈಗ ಸ್ವಲ್ಪ ಸಾರ್ವಜನಿಕ ವಲಯದಲ್ಲಿ ಕೇಳತೊಡಗಿದೆ, ಜಾಗತೀಕರಣದ ಪ್ರೇತ ಅವರ ಪ್ರಗತಿಯ ಮಾರ್ಗ ಮತ್ತು ಗೆರೆಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆ ಇರಿಸಿದೆ. ಅದೇನೇ ಇದ್ದರೂ ಮನುಷ್ಯ ಜೀವಿಗಳ ದೃಢಸಂಕಲ್ಪದಲ್ಲಿನ ನಂಬಿಕೆ ಊರ್ಮಿಳಾ ತಾಯಿಯವರನ್ನು ಮುನ್ನಡೆಸುತ್ತದೆ, ಯಾಕೆಂದರೆ ಮನುಷ್ಯಜೀವಿಗಳು ಹೊಸ ಮಾರ್ಗಗಳು ಮತ್ತು ಹೊಸ ಧೈರ್ಯವನ್ನು ಹುಡುಕುತ್ತಾರೆ ಎಂಬುದು ಅವರ ನಂಬಿಕೆಯಾಗಿದೆ.

ಮೇ, 2004ರಲ್ಲಿ ಊರ್ಮಿಳಾ ತಾಯಿಯವರ ಆಯ್‌ದಾನ್ ಕೃತಿಗೆ ಉತ್ತಮ ಆತ್ಮಕತೆಗೆ ನೀಡುವ ಲಕ್ಷ್ಮಿಬಾಯಿ ತಿಲಕ್ ಪ್ರಶಸ್ತಿಯನ್ನು ಮಹಾರಾಷ್ಟ್ರ ಸಾಹಿತ್ಯ ಪರಿಷತ್ತು ನೀಡಿತು. ಪ್ರಶಸ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಊರ್ಮಿಳಾ ತಾಯಿಯವರು ಪರಿಷತ್ತಿಗೆ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿ ಹೀಗೆ ಬರೆದಿದ್ದಾರೆ, ”ಮರಾಠಿ ಸಾಹಿತ್ಯದಲ್ಲಿನ ರೂಪಕಗಳು, ಪ್ರತಿಮೆಗಳು ಮತ್ತು ಸಂಕೇತಗಳು ಸಂಪ್ರದಾಯದಲ್ಲಿ ಸಿಲುಕಿಕೊಂಡಿವೆ, ಮೂಲಭೂತವಾದಿಯಾಗಿವೆ ಮತ್ತು ಕಲ್ಪನೆಯಲ್ಲೇ ಇದ್ದು, ತಮ್ಮದೇ ವಾಹಕದಲ್ಲಿ ನಂಬಿಕೆ ಇರಿಸಿಕೊಳ್ಳುವುದನ್ನು ಮಾನವಜೀವಿಗಳಲ್ಲಿ ಹುಟ್ಟುಹಾಕುವುದೇ ಇಲ್ಲ… ದೇವತೆ ಸರಸ್ವತಿಗೆ ಮಾಡುವ ಭಕ್ತಿಪೂರ್ವಕ ಅರ್ಪಣೆಯಲ್ಲಿ, ಸರಸ್ವತಿ ಸಂಕೇತಿಸುವುದು ಏನನ್ನು? ಗಂಗಾ ಮತ್ತು ಸಿಂದೂ ತರಹ ಸರಸ್ವತಿ ಮತ್ತೊಂದು ನದಿಯೇ? ವಿಷ್ಣುವಿನ ನಾಭಿಯಿಂದ ಜನಿಸಿದ ಸೃಷ್ಟಿಕರ್ತನೆನಿಸಿಕೊಂಡಿರುವ ಬ್ರಹ್ಮನ ಮಗಳೇ? ಅಥವಾ ಪುರಾಣದಲ್ಲಿ ವಡ್ನವಲ್ ಎಂಬ ಬೆಂಕಿ ರಾಕ್ಷಸನನ್ನು ಮುಳುಗಿಸಿದ ಮಹಿಳಾ ಪಾತ್ರವೇ? ಸಾಹಿತ್ಯ ಮತ್ತು ಸೃಷ್ಟಿಗೆ ಅವಳು ಹೇಗೆ ಸಂಬಂಧಪಟ್ಟಿದ್ದಾಳೆ? ಇವು ಮತ್ತು ಇತರ ಪ್ರಶ್ನೆಗಳು ನನ್ನನ್ನು ಬಾಧಿಸುತ್ತವೆ… ಈ ವಿಷಯಗಳು ಮರಾಠಿ ಸಾಹಿತ್ಯದಲ್ಲಿ ಚಳವಳಿಯ ಸ್ವರೂಪ ಪಡೆದುಕೊಳ್ಳಬೇಕೆಂದು ನಾನು ನಂಬುತ್ತೇನೆ… ಸಾಮಾಜಿಕ ಪರಿವರ್ತನೆಯ ಬಗ್ಗೆ ನಾನು ಭರವಸೆ ಇಟ್ಟುಕೊಂಡಿದ್ದೇನೆ, ಈ ಪತ್ರ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ” (ಮೇ 21, 2004ರಂದು ಮಹಾರಾಷ್ಟ್ರ ಸಾಹಿತ್ಯ ಪರಿಷತ್ತಿಗೆ ಊರ್ಮಿಳಾ ಪವಾರ್‌ ಅವರು ಬರೆದ ಪತ್ರ)

ಬಿದಿರಿನ ನೇಯ್ಗೆ: ಬಾಲ್ಯ, ಕುಟುಂಬ ಮತ್ತು ಸಮುದಾಯದ ನೆನಪುಗಳು

ತಮ್ಮ ಸರಕುಗಳನ್ನು ರತ್ನಗಿರಿಯ ಮಾರುಕಟ್ಟೆಗಳಲ್ಲಿ ಮಾರುವ ಸಲುವಾಗಿ ಬೆಟ್ಟಗಳನ್ನು ಹತ್ತಿ ಇಳಿಯುವಾಗ ಫನ್ಸವಳೆ ಹಳ್ಳಿಯ ಮಹಿಳೆಯರು ತಮ್ಮ ಪೂರ್ವಿಕರ ಮೇಲೆ ಸುರಿಸುತ್ತಿದ್ದ ಆಯ್ದ ಬೈಗುಳದ ಸರಮಾಲೆಯನ್ನು ಊರ್ಮಿಳಾತಾಯಿ ನೆನಪಿಸಿಕೊಂಡಿದ್ದಾರೆ. ಫನ್ಸವಳೆ ದೂರದಲ್ಲಿದ್ದ ಒಂದು ಸಣ್ಣ, ಒಂಟಿ ಹಳ್ಳಿಯಾಗಿತ್ತು, ಅಲ್ಲಿ ಹುಲಿಗಳು, ಹಲವಾರು ತರದ ಹಾವುಗಳಲ್ಲದೆ ಬಾವಿಯಲ್ಲಿ ವಾಸಿಸುವ ಹೆಣ್ಣು ದೆವ್ವ ಅಸರ ಕೂಡ ವಾಸಿಸುತ್ತಿತ್ತೆಂದು ಹೇಳಲಾಗುತ್ತಿತ್ತು. ವಿಕೃತಕಾಮಿಗಳು ಅಲ್ಲಿನ ದಟ್ಟ ಹಸಿರಿನ ಲಾಭ ಪಡೆದುಕೊಂಡು ಮಾರುಕಟ್ಟೆಗೆ ಹೋಗುವ ದಾರಿಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರೆಂಬ ಕತೆಗಳೂ ಇವೆ. ಮಳೆಗಾಲದಲ್ಲಿ ಹೊಳೆಗಳು ಮತ್ತು ನದಿಗಳು ಉಕ್ಕಿ ಹರಿಯುತ್ತಿದ್ದವು. ಅಂತಹ ಸಮಯದಲ್ಲಿ ಹಳೆಯ ಶಿಥಿಲಗೊಂಡ ಸವೆದ ಮರದ ಸೇತುವೆಯನ್ನು ದಾಟುವುದೆಂದರೆ ನಿಮ್ಮ ಜೀವವನ್ನು ನಿಮ್ಮ ಕೈಲಿ ಹಿಡಿದಂತೆ. ಇಂತಹ ಹಳ್ಳಿಯನ್ನು ಬದುಕಲು ಆಯ್ಕೆ ಮಾಡಿಕೊಂಡ ಕಾರಣಕ್ಕೆ ಹಿರಿಯರು ತಮ್ಮ ಪೂರ್ವಿಕರನ್ನು ಶಪಿಸುತ್ತಿದ್ದರಾದರೂ ಊರ್ಮಿಳಾ ಮತ್ತು ಅವರ ಒಡಹುಟ್ಟಿದವರು ಮಾತ್ರ ಅಲ್ಲಿ ಬದುಕುವುದನ್ನು ಇಷ್ಟಪಡುತ್ತಿದ್ದರು. ಮಕ್ಕಳ ಶಿಕ್ಷಣಕ್ಕಾಗಿ ಅವರ ತಂದೆ ಫನ್ಸವಳೆ ಹಳ್ಳಿಯನ್ನು ಬಿಟ್ಟು ರತ್ನಗಿರಿಯ ಮಾರುಕಟ್ಟೆ ಸಮೀಪ ಒಂದು ಪುಟ್ಟ ಮನೆಯನ್ನು ಕಟ್ಟಿಸಿದ್ದರು. ಆಗಾಗ್ಗೆ ಅವರು ಹಳ್ಳಿಗೆ ಹೋಗುತ್ತಿದ್ದರು ಹಾಗೂ ಸರಕುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದ ಮಹಿಳೆಯರೊಂದಿಗೆ ಹಿಂತಿರುಗುತ್ತಿದ್ದರು. ಮಹಿಳೆಯರು ಬ್ರಾಹ್ಮಣರ ನಿರ್ಬಂಧಗಳಿಗೆ ಸವಾಲು ಹಾಕಿ ಸಮುದಾಯದವರ ಗೌರವಕ್ಕೆ ಪಾತ್ರರಾಗಿದ್ದ ತಮ್ಮ ತಾತಾ ಮುತ್ತಾಂದಿರ ಕತೆಗಳನ್ನು ಹೇಳುತ್ತಿದ್ದರು.

ಇದನ್ನು ಓದಿದ್ದೀರಾ?: ಬೆಲ್ ಹುಕ್ಸ್ ʼಬಂಧ ಮುಕ್ತʼ | ಸಮುದಾಯ ವಿಮೋಚನೆಯ ದಾರಿಯಾಗಿ ಪ್ರೀತಿ

ಇದೇ ದಾರಿಯಲ್ಲಿ ನಡೆಯುತ್ತ, ನಮ್ಮ ಕುಟುಂಬದಲ್ಲಿ ತಲತಲಾಂತರಗಳಿಂದ ಘಟಿಸಿದ ನೂರಾರು ಕತೆಗಳನ್ನು ನಾವು ಕೇಳಿಸಿಕೊಳ್ಳುತ್ತಿದ್ದೆವು. ಒಂದು ಸಲ ನಮ್ಮ ತಾತನ ಮುತ್ತಾತನ ವಿಚಿತ್ರ ಕತೆ ಕೇಳಿದೆವು. ಆತ ನಮ್ಮ ವಾಡಿಯ ಸ್ಥಾಪಕರಲ್ಲಿ ಒಬ್ಬನಾಗಿದ್ದ. ಮಹಿಳೆಯರು ಬೆಟ್ಟವನ್ನು ಹತ್ತಿ ಇಳಿಯುವಾಗ ಅವನ ತಲೆಯ ಮೇಲೆ ಶಾಪದ ಹೊರೆ ಹೊರಿಸುತ್ತಿದ್ದರು. ಆ ಮೂಲ ಸ್ಥಾಪಕ ಮುಂದೆ ದೊಡ್ಡ ಕುಟುಂಬವನ್ನು ಹುಟ್ಟುಹಾಕಿ ಅದು ಹಲವಾರು ಕವಲುಗಳಾಗಿ ಹರಡಿಕೊಂಡು ವಾಡಿಯೇ ಆಯಿತು. ಈಗ ಈ ವಂಶವೃಕ್ಷದಲ್ಲಿ ಅವರ ಮುತ್ತಾತನ ತಾತ ಹರಿ ಎಂಬುವರು ಪುಣೆಗೆ ಹೋಗಿ ಬ್ರಿಟಿಷರ ಸೇನೆ ಸೇರಿಕೊಂಡಿದ್ದರು. ಒಂದು ಸಲ ಆತ ಹಳ್ಳಿಗೆ ಬಂದು ಊಹಿಸಲಾಗದ ಕೆಲಸವೊಂದನ್ನು ಮಾಡಿದ.

ಕತೆ ಹೀಗೆ ಸಾಗುತ್ತದೆ. ಆ ಕಾಲದಲ್ಲಿ ಮಹಾರರು, ಚಾಂಭಾರರಂತಹ ಕೆಳಜಾತಿಗಳವರ ಮದುವೆ ಮತ್ತು ಆರಾಧನೆಯ ಆಚರಣೆಗಳನ್ನು ಬ್ರಾಹ್ಮಣ ಪೂಜಾರಿಗಳು ಮಾಡಿಸುತ್ತಿದ್ದರು. ಆದರೆ ಈ ಆಚರಣೆಗಳನ್ನು ಮಾಡಲು ಅವರು ಮಹಾರ್‌ವಾಡಾಕ್ಕೆ ಬರುತ್ತಿರಲಿಲ್ಲ. ಪೂಜಾರಿಯು ಬಡಾವಣೆಯ ಗಡಿಯಲ್ಲಿದ್ದ ಮರವನ್ನು ಏರಿ ಕೆಲವು ಮಂತ್ರಗಳನ್ನು ಮಣಮಣಿಸುತ್ತಿದ್ದನು. ಮದುವೆ ನಡೆಯುವಾಗ, ಹೆಣ್ಣು ಮತ್ತು ಗಂಡು ಮಹಾರ್‌ವಾಡಾದ ಪೆಂಡಾಲಿನಲ್ಲಿ ಅಂತರಪಟ ಹಿಡಿದು ನಿಲ್ಲುತ್ತಿದ್ದರು. ಬ್ರಾಹ್ಮಣ ಪೂಜಾರಿ ದೂರದ ಮರದ ಮೇಲಿರುತ್ತಿದ್ದ. ಅಲ್ಲಿಂದ ಅವನು ‘ಸಾವಧಾನ್’ ಎಂದು ಕಿರುಚುತ್ತಿದ್ದ. ಆಗ ಪೆಂಡಾಲಿನಲ್ಲಿರುತ್ತಿದ್ದ ವಾದ್ಯದವರು ಜೋರಾಗಿ ವಾದ್ಯ ಬಾರಿಸಲು ಆರಂಭಿಸುತ್ತಿದ್ದರು, ಮದುವೆ ಆಚರಣೆ ಆರಂಭವಾಗುತ್ತಿತ್ತು. ನಂತರ ಪೂಜಾರಿ ಮರದಿಂದ ಇಳಿದು ತನ್ನ ಪಂಚಪಾತ್ರೆಯಿಂದ ‘ದಕ್ಷಿಣೆ’ಯಾಗಿ ಇಟ್ಟಿರುತ್ತಿದ್ದ ನಾಣ್ಯಗಳ ಮೇಲೆ ಪವಿತ್ರ ನೀರನ್ನು ಉದ್ಧರಣೆಯಿಂದ ಸಿಂಪಡಿಸಿ ಪವಿತ್ರಗೊಳಿಸಿ ಅದನ್ನೆತ್ತಿ ತನ್ನ ಸೊಂಟದ ಪಟ್ಟಿಯೊಳಗೆ ಸೇರಿಸುತ್ತಿದ್ದ. ಜೊತೆಗೆ ದಕ್ಷಿಣೆಯ ಭಾಗವಾಗಿ ಇಡುತ್ತಿದ್ದ ದವಸ, ಧಾನ್ಯ, ತೆಂಗಿನಕಾಯಿ ಇತ್ಯಾದಿಗಳ ತೆಗೆದುಕೊಂಡು ಹೋಗುವುದನ್ನು ಮರೆಯುತ್ತಿರಲಿಲ್ಲ. ಅವನ್ನು ಅವನೇನು ಹೊತ್ತುಕೊಂಡು ಹೋಗುತ್ತಿರಲಿಲ್ಲ ಅವನ ಆಳು ಹೊತ್ತುಕೊಂಡು ಹೋಗುತ್ತಿದ್ದ.

ಪಂಚಾಂಗದ ಪ್ರಕಾರ ಸೂಕ್ತ ಹೆಸರನ್ನು ಆಯ್ಕೆ ಮಾಡಲು ಪೂಜಾರಿಯನ್ನು ಸಂಪರ್ಕಿಸಬೇಕೆಂದರೆ ಅಥವಾ ಕಾಯಿಲೆ ಬಿದ್ದವರಿಗಾಗಿ ಪವಿತ್ರ ವಿಭೂತಿಯನ್ನು ಸಂಗ್ರಹಿಸಿಕೊಳ್ಳಬೇಕೆಂದರೆ ಅವರ ಮನೆಯ ಹೊರಗೆ ಗಂಟೆಗಟ್ಟಲೆ ಅಂಗಳದಾಚೆಗೆ ಕಾಯಬೇಕಾಗುತ್ತಿತ್ತು.

ಎಲ್ಲಾ ಧಾರ್ಮಿಕ ಆಚರಣೆಗಳನ್ನು ದೂರದಿಂದ ನಡೆಸುವುದು ನಮ್ಮ ಮುತ್ತಾತನ ತಾತ ಹರಿಯವರಿಗೆ ಅವಮಾನವೆನಿಸುತ್ತಿತ್ತು. ಅದು ಬಹುಶಃ 1873ರ ಸತ್ಯಶೋಧಕ ಚಳವಳಿಯ ಪ್ರಭಾವವಿರಬಹುದು. ಒಮ್ಮೆ ಅವರು ಹಳ್ಳಿಗೆ ಬೇಟಿ ನೀಡಿದಾಗ ಹಳ್ಳಿವರನ್ನೆಲ್ಲ ಸಭೆ ಸೇರಿಸಿ ಇನ್ನು ಮುಂದೆ ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಾವುಗಳೇ ನಡೆಸುವುದೆಂದು ತೀರ್ಮಾನಿಸಿದರು.

ಇದರಿಂದ ಭಟ್ಟರಿಗೆ ವಿಪರೀತ ಅವಮಾನವೆನಿಸಿತು. ಅವರು ಹರಿಗೆ ”ಮದುವೆ ಆಚರಣೆ ಮಾಡಲು ನಿನಗೆ ಸಂಸ್ಕೃತ ತಿಳಿದಿರಲೇಬೇಕೆಂದು” ಹೇಳಿದರು. ”ಹೌದು ನನಗೆ ಗೊತ್ತು” ಎಂದು ಹರಿ ಹೇಳಿದರು. ಆಮೇಲೆ ಅವರು ಕೆಲವು ಶ್ಲೋಕಗಳನ್ನು ಹೇಳಿ ತಮ್ಮ ಸಂಸ್ಕೃತ ಜ್ಞಾನವನ್ನು ಪ್ರದರ್ಶಿಸಿದರು. ನಂತರ ಭಟ್ಟರು, ನೀನು ಜನರಿಗೆ ಭೂತ ಮತ್ತು ಭವಿಷ್ಯದ ಬಗ್ಗೆ ಹೇಳಬೇಕೆಂದರೆ ನಿನಗೆ ಪ್ರಾಣಾಯಾಮ ಗೊತ್ತಿರಬೇಕು” ಎಂದು ಹೇಳಿದರು. ಹರಿಯವರು ”ನನಗೆ ಗೊತ್ತು, ನಾನು ಮಾಡಬಲ್ಲೆ” ಎಂದರು. ನಂಬಲಾಗದ ಭಟ್ಟರು ”ಎಂಟು ದಿನಗಳ ಕಾಲ ನಾವು ನಮ್ಮ ನಮ್ಮ ಸ್ಮಶಾನಗಳಲ್ಲಿ ತೋಡಿರುವ ಆಳದ ಗುಂಡಿಗಳಲ್ಲಿ ಕೂತು ಮಣ್ಣು ಮುಚ್ಚಿಸೋಣ. ನೀನು ಈ ಸ್ಪರ್ಧೆಯನ್ನು ಗೆದ್ದರೆ ನಿನ್ನದೇ ಧಾರ್ಮಿಕ ಆಚರಣೆಗಳನ್ನು ನೀನು ಮಾಡಲು ನನ್ನದೇನೂ ತಕರಾರಿಲ್ಲ” ಎಂದು ಭಟ್ಟರು ಹರಿಗೆ ಸವಾಲು ಹಾಕಿದರು.

ಈ ವಿಚಾರ ಜನರಿಗೆ ಇಷ್ಟವಾಯಿತು. ಇದನ್ನು ಚರ್ಚಿಸಲು ಹಳ್ಳಿಯ ಎಲ್ಲಾ ವಿವೇಕವಂತ ಜನರು ಸಭೆ ಸೇರಿದರು. ಸಭೆಯಲ್ಲಿ ತೀರ್ಮಾನವಾದಂತೆ ಆಳವಾದ ಎರಡು ಗುಂಡಿಗಳನ್ನು ಅವರವರ ಸ್ಮಶಾನಗಳಲ್ಲಿ ತೋಡಿಸಲಾಯಿತು. ಆಮೇಲೆ ಇಬ್ಬರು ಸ್ಪರ್ಧಿಗಳನ್ನು ತಮ್ಮ ತಮ್ಮ ಗುಂಡಿಗಳಲ್ಲಿ ಕೂರಲು ಹೇಳಲಾಯಿತು; ಭಟ್ಟರು ಬ್ರಾಹ್ಮಣ ಸ್ಮಶಾನದ ಗುಂಡಿಯಲ್ಲಿ ಹರಿಯವರು ಮಹಾರರ ಸ್ಮಶಾನದ ಗುಂಡಿಯಲ್ಲಿ; ನಂತರ ಗುಂಡಿಯ ಬಾಯಿಯನ್ನು ಮರದ ಹಲಗೆಯಿಂದ ಮುಚ್ಚಿ ಮಣ್ಣು ಮೆತ್ತಲಾಯಿತು; ಒಳಗೆ ಕುಳಿತಿರುವವರಿಗೆಂದು ಹುಯ್ಯುವ ಹಾಲು ತಲುಪುವಂತೆ ಎರಡು ನಳಿಕೆಗಳನ್ನು ತೂರಿಸಲಾಗಿತ್ತು. ಇಂತಹ ಭಯಾನಕ ಪ್ರಾಣಾಯಾಮದ ಪ್ರಯೋಗದ ಬಗ್ಗೆ ಪೊಲೀಸರೂ ಸಹ ನಿಗಾ ಇಟ್ಟಿದ್ದರು. ಪೊಲೀಸರ ಜೊತೆಗೆ ಸಾಮಾನ್ಯ ಜನರೂ ಸಹ ಪಂಜು ಮತ್ತು ದೀಪಗಳನ್ನು ಹಿಡಿದು ಕಾವಲು ಕಾದರು ಎಂದು ಮಹಿಳೆಯರು ನಮಗೆ ಹೇಳಿದರು. ಐದು ದಿನಗಳವರೆಗೆ ಇಬ್ಬರೂ ಜೀವಂತವಾಗಿದ್ದರು. ಐದನೆ ದಿನ ಬ್ರಾಹ್ಮಣನಿದ್ದ ಗುಂಡಿಯೊಳಗಿನ ನಳಿಕೆಯಿಂದ ಹಾಲು ಮೇಲಕ್ಕೆ ಬಂತು. ಭಟ್ಟರು ಸತ್ತು ಹೋಗಿದ್ದರು, ಹರಿ ಜೀವಂತವಾಗಿದ್ದರು. ಆತ ಗೆದ್ದಿದ್ದ.

ಅಂದಿನಿಂದ, ಹರಿಗೆ ನಮ್ಮದೇ ಫನ್ಸವಳೆ ಹಳ್ಳಿಯಲ್ಲದೆ ಸುತ್ತಮುತ್ತಲಿನ ಒಂಬತ್ತು ಹಳ್ಳಿಗಳಲ್ಲಿ ಎಲ್ಲಾ ಧಾರ್ಮಿಕ ವ್ರತಾಚರಣೆಗಳನ್ನು ಮತ್ತು ಇತರ ಆಚರಣೆಗಳನ್ನು ನಡೆಸುವ ಜವಾಬ್ದಾರಿ ನೀಡಲಾಯಿತು. ಆ ಗಳಿಗೆಯಿಂದ ಹರಿಗೆ ‘ಮಸಣ್‌ಗಿರಿ ಬುವ’ (ಸುಡುಗಾಡಿನ ಸಂತ) ಎಂಬ ಹೊಸ ಹೆಸರು ಸಿಕ್ಕಿತು. ಈ ಕೆಲಸ ವಂಶಪಾರಂಪರ್ಯದ ಹಕ್ಕಾಗಿ ನಮ್ಮ ಕುಟುಂಬಕ್ಕೆ ಬಂತು. ನಮ್ಮ ಕುಟುಂಬದ ಎಲ್ಲಾ ಗಂಡಸರು ಮತ್ತು ನಮ್ಮ ತಂದೆಯವರ ಚಿಕ್ಕಮ್ಮ ಫಟಿ ಅಕ್ಕ ಆಚರಣೆಗಳನ್ನು ನಡೆಸಿಕೊಡುತ್ತಿದ್ದರು. ಅವಳು ಹರಿಯ ಮಗಳು, ಅವಳನ್ನು ಮದುವೆಯಾಗಲು ಸೇನೆಯಿಂದ ಹುಡುಗನೊಬ್ಬನನ್ನು ಅವರು ಕರೆದುಕೊಂಡು ಬಂದಿದ್ದರು. ಆಕೆಯೂ, ಹಲವಾರು ಧಾರ್ಮಿಕ ಆರಾಧನೆಗಳು, ಮದುವೆ ಆಚರಣೆಗಳು ಇತ್ಯಾದಿಯನ್ನು ನಡೆಸಿಕೊಡುತ್ತಿದ್ದರು.

ನಾವು ಸಣ್ಣವರಾಗಿದ್ದಾಗ, ಈ ನಮ್ಮ ಪೂರ್ವಿಕರ ಬಗ್ಗೆ ಬಹಳ ಹೆಮ್ಮೆ ಪಡುತ್ತಿದ್ದೆವು. ಇದರ ಬಗ್ಗೆ ನಮ್ಮ ಪರಿಚಯಸ್ಥರಿಗೆ ಹೇಳುತ್ತಿದ್ದೆವು. ಆದರೆ ಈಗ… ಯಾವುದೋ ಕ್ಷುಲ್ಲಕ ರೂಢಿಗಾಗಿ ಭಟ್ಟರು ಪ್ರಾಣ ಕಳೆದುಕೊಂಡಿದ್ದು ಬೇಸರವಾಗುತ್ತದೆ ಹಾಗೂ ಈ ನೆನಪು ಪಾದರಸ ಕಳೆದುಕೊಂಡ ಕನ್ನಡಿಯಂತೆ ವಿಕಟವಾಗಿ ಉಳಿದಿದೆ.

(ಜಾತಿ ಮತ್ತು ಲಿಂಗತ್ವ ಕೃತಿಯ ಆಯ್ದ ಭಾಗ)

ದು ಸರಸ್ವತಿ1 1

                                                 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X